ವೀರಾಜಪೇಟೆ, ಜೂ. 3: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅನೇಕ ವಾರ್ಡ್‍ಗಳಲ್ಲಿ ರಸ್ತೆಗಳು ತೀರ ಹದಗೆಟ್ಟಿದ್ದು ವಾಹನ ಮತ್ತು ಸಾರ್ವಜನಿಕರು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ಹದಿನೈದು ದಿನಗಳಲ್ಲಿ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಸಂಘಟನೆ ವತಿಯಿಂದ ಮುಷ್ಕರ ಹಮ್ಮಿಕೊಳ್ಳಲಾಗುವದು ಎಂದು ಭಾರತೀಯ ಕಮ್ಯೂನಿಸ್ಟ್ ಪಕ್ಷದ ನಗರ ಘಟಕದ ಕಾರ್ಯದರ್ಶಿ ಹೆಚ್. ಶಿವಪ್ಪ ಎಚ್ಚರಿಸಿದ್ದಾರೆ.

ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಮಳೆಗಾಲ ಆರಂಭವಾದಂತಿದ್ದು, ರಸ್ತೆಗಳ ಬದಿ ಚರಂಡಿಗಳು ಮುಚ್ಚಿ ಹೋಗಿ ಸರಾಗವಾಗಿ ನೀರು ಹರಿಯುತ್ತಿಲ್ಲ. ತೋಡುಗಳನ್ನು ಸ್ವಚ್ಛಗೊಳಿಸಿಲ್ಲ. ಅರಸು ನಗರ, ಅಯ್ಯಪ್ಪ ಬೆಟ್ಟಗಳಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಬೇಕು. ದಿನನಿತ್ಯ ಓಡಾಡುವ ರಸ್ತೆಗಳಲ್ಲಿಯೇ ಹೊಂಡ ಗುಂಡಿಗಳಾಗಿದ್ದರೂ ಪಂಚಾಯಿತಿ ಅಧಿಕಾರಿಗಳು ಹಾಗೂ ಚುನಾಯಿತ ಸದಸ್ಯರುಗಳು ಮೌನ ವಹಿಸಿರುವದು ಖಂಡನೀಯ. ಪಟ್ಟಣದ ಕಾರು ನಿಲ್ದಾಣ, ಗೌರಿಕೆರೆ ರಸ್ತೆ, ವಿಜಯನಗರ, ತಿಮ್ಮಯ್ಯ ಲೇಔಟ್, ಶಿವಕೇರಿ, ದೊಡ್ಡಟ್ಟಿ ಚೌಕಿಯಿಂದ ಶಾಂತ ಚಿತ್ರಮಂದಿರದವರೆಗಿನ ರಸ್ತೆಗಳು ಕೂಡ ಸಂಪೂರ್ಣ ಹಾನಿಗೊಳಗಾಗಿದೆ. ಇದನ್ನು ಕೂಡಲೇ ಸರಿಪಡಿಸುವಂತೆ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಕಮ್ಯೂನಿಸ್ಟ್ ಪಕ್ಷದ ಹರಿದಾಸ್, ಹಮೀದ್ ಇತರರು ಉಪಸ್ಥಿತರಿದ್ದರು.