ಗೋಣಿಕೊಪ್ಪ ವರದಿ, ಜೂ. 3: ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಜೂನ್ 7 ರಂದು ಪೊನ್ನಂಪೇಟೆ ತಾಲೂಕು ಕಾರ್ಯನಿರ್ವ ಹಣಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವದು ಎಂದು ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಹಾಗೂ ಪಂಚಾಯತ್ ರಾಜ್ ಇಲಾಖೆ ಪಂಚಾಯಿತಿ ನೌಕರರಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಟ ವೇತನ ನೀಡದೆ ನಿರ್ಲಕ್ಷ ಮಾಡುತ್ತಿದೆ. ಆದೇಶ ಹೊರಡಿಸಿ 7 ತಿಂಗಳು ಕಳೆದರೂ ಪಂಚತಂತ್ರದಲ್ಲಿ ಕಾರ್ಮಿಕರ ವಿವರಗಳನ್ನು ದಾಖಲಿಸಲು ಪಿಡಿಓಗಳು ಸತಾಯಿಸುತ್ತಿದ್ದಾರೆ. ಇದರಿಂದ ಕಾರ್ಮಿಕರಿಗೆ ವೇತನ ಪಾವತಿಯಾಗುತ್ತಿಲ್ಲ. ಕಾರ್ಯನಿರ್ವಣಾಧಿಕಾರಿಗಳು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸೂಕ್ತವಾದ ಸೂರು ಒದಗಿಸುವಲ್ಲಿ ಪಂಚಾಯಿತಿ ವಿಫಲವಾಗಿದೆ. ಮಳೆಗಾಲದಲ್ಲಿ ಮನೆಗಳು ಕುಸಿಯುವ ಹಂತಕ್ಕೆ ತಲುಪಿದ್ದರೂ ಪ್ರತೀ ವರ್ಷ ಪ್ಲಾಸ್ಟಿಕ್ ಹೊದಿಕೆ ಹಾಕಿ ಪಂಚಾಯಿತಿ ಆಡಳಿತ ಕೈ ತೊಳೆದುಕೊಳ್ಳುತ್ತಿದೆ. ಸಮಸ್ಯೆಗೆ ಪರಿಹಾರವಾಗಿ ತಾತ್ಕಾಲಿಕವಾಗಿ ಮನೆಗಳಿಗೆ ಶೀಟ್‍ಗಳನ್ನು ಅಳವಡಿಸಿ ಪೌರ ಕಾರ್ಮಿಕರ ನೋವಿಗೆ ಸ್ಪಂದಿಸಬೇಕಿದೆ ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿಗಳು ನಿರೀಕ್ಷಿತ ಆದಾಯವಿಲ್ಲ ಎಂಬ ಕಾರಣ ನೀಡಿ ವೇತನ ಪಾವತಿಸದೆ ಇರುವದು ಸರಿಯಲ್ಲ. ಮುಂದಿನ ದಿನಗಳಲ್ಲಿ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯವನ್ನು ಬಹಿಷ್ಕರಿಸುವ ಮೂಲಕ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಿದ್ದಾರೆ ಎಂದರು

ಪ್ರತಿ ತಿಂಗಳ 5 ನೇ ತಾರೀಖಿನೊಳಗೆ ವೇತನ ಪಾವತಿಯಾಗಬೇಕೆಂಬ ಸ್ಪಷ್ಟ ಆದೇಶವನ್ನು ಗ್ರಾಮ ಪಂಚಾಯಿತಿಗಳು ಪಾಲಿಸದೆ ನೌಕರರನ್ನು ಕಡೆಗಣನೆ ಮಾಡುತ್ತಿದೆ. ಕೆಲವು ನೌಕರರಿಗೆ 7 ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಂಪ್ಯೂಟರ್ ಆಪರೇಟರ್, ಪಂಪ್ ಆಪರೇಟರ್, ಜವಾನ ಹಾಗೂ ಸ್ವಚ್ಛತಾ ಸಿಬ್ಬಂದಿಗೆ ವೇತನ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ.

ಕಾರ್ಯನಿರ್ವಣಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರವಿದ್ದರು ಕ್ರಮಕೈಗೊಳ್ಳುತ್ತಿಲ್ಲ. ಇಓ ಅವರ ನಿರ್ಲಕ್ಷ್ಯ ಕಾರ್ಮಿಕರ ತೊಂದರೆಗೆ ಕಾರಣವಾಗಿದೆ. 14 ಸಾವಿರ ವೇತನವಿದ್ದರೂ, 7-8 ಸಾವಿರ ವೇತನ ನೀಡಿ ಕನಿಷ್ಟ ವೇತನ ನಿಯಮ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ತಾಲೂಕು ಉಪಕಾರ್ಯದರ್ಶಿ ಎಂ.ಬಿ ಹರೀಶ್, ಸ್ವಚ್ಛತಾ ವಿಭಾಗದ ಪ್ರಮುಖರು ಗಳಾದ ವಿಜಯ ಕುಮಾರ್ ಹಾಗೂ ರಾಜು ಇದ್ದರು.