ಮಡಿಕೇರಿ, ಜೂ. 3: ಮುಂಗಾರು ಮಳೆಯಿಂದ ಉಂಟಾಗಬಹುದಾದ ಹಾನಿ ಸಂಬಂಧಿಸಿದಂತೆ ಜಿಲ್ಲಾಡಳಿತ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿಂದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ. ಕಲ್ಪನಾ ಮಾಹಿತಿ ಪಡೆದರು.ನಗರದ ಸುದರ್ಶನ ಅತಿಥಿ ಗೃಹದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಮಳೆ ಆರಂಭವಾಗಿದ್ದು, ಪ್ರವಾಹ ಮುನ್ನೆಚ್ಚರಿಕೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು. (ಮೊದಲ ಪುಟದಿಂದ) ಜಿಲ್ಲೆಯಲ್ಲಿ ವ್ಯಾಪಕ ಮಳೆಯಾದ ಸಂದರ್ಭದಲ್ಲಿ ಪ್ರವಾಹ, ಬರೆ ಕುಸಿತ, ಜನ, ಜಾನುವಾರು ಪ್ರಾಣಹಾನಿ, ವಾಸದ ಮನೆ ಹಾನಿ ಹಾಗೂ ಸಾರ್ವಜನಿಕ ಆಸ್ತಿ ಹಾನಿಯಾಗುವ ಸಾಧ್ಯತೆಗಳಿದ್ದು, ಅಂತಹ ಸಂದರ್ಭದಲ್ಲಿ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಕಳೆದ ವಾರ ಬಿದ್ದ ಮಳೆಯಿಂದ ಜಾನುವಾರು ಪ್ರಾಣ ಹಾನಿ, ವಾಸದ ಮನೆ ಹಾನಿಯಾಗಿದ್ದಲ್ಲಿ ತಕ್ಷಣವೇ ಪರಿಹಾರ ವಿತರಣೆ ಮಾಡಬೇಕು. ಯಾವದೇ ಕಾರಣಕ್ಕೂ ವಿಳಂಬ ಅನುಸರಿಸಬಾರದು ಎಂದು ಸೂಚನೆ ನೀಡಿದರು.

ವ್ಯಾಪಕ ಮಳೆ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ನಿಫಾ ವೈರಸ್ ಹರಡದಂತೆ ಜಾಗೃತಿ ಮೂಡಿಸಬೇಕು. ಈ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ನಗರ ಪ್ರದೇಶದಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಪ್ರವಾಹ ಮುನ್ನೆಚ್ಚರಿಕೆ ಸಂಬಂಧ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.

ಈ ಬಾರಿ ಸಕಾಲದಲ್ಲಿ ಮಳೆ ಬಂದಿರುವದರಿಂದ, ಜೊತೆಗೆ ಸಾಧಾರಣ ಮಳೆಯಾಗುತ್ತಿರುವದರಿಂದ ಬೆಳೆಗಳಿಗೆ ಯಾವದೇ ರೀತಿಯ ತೊಂದರೆ ಇಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ 24x7 ಸಹಾಯವಾಣಿ ತೆರೆಯಲಾಗಿದ್ದು, ಯಾವುದೇ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ಅತಿವೃಷ್ಠಿಯಿಂದ ಉಂಟಾಗುವ ಹಾನಿಯ ಬಗ್ಗೆ ದೂರವಾಣಿ ಸಂಖ್ಯೆ 08272-221077ಕ್ಕೆ ತೆರೆಯಲಾಗಿದೆ. ಹಾಗೆಯೇ ವಿದ್ಯುತ್ ವ್ಯತ್ಯಯ, ಕಂಬ ಬಿದ್ದಿರುವದು ಮತ್ತಿತರ ಸಂಬಂಧ ಸೆಸ್ಕ್ ಸಹಾಯವಾಣಿ 1912 ಗೆ ಕರೆ ಮಾಡಿ ಮಾಹಿತಿ ನೀಡಲು ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ರಮೇಶ್ ಪಿ.ಕೋನರೆಡ್ಡಿ, ಕೃಷಿ ಇಲಾಖೆಯ ಉಪ ನಿರ್ದೇಶಕರಾದ ರಾಜು, ತಹಶೀಲ್ದಾರರಾದ ಶಾರದಾಂಬ, ಗೋವಿಂದರಾಜು, ಬಾಡ್ಕರ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಸುರೇಶ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ, ಎಇಇ ಗಳಾದ ಇಬ್ರಾಹಿಂ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಾದ ಹೇಮಕುಮಾರ್, ಮತ್ತಿತರರು ಪ್ರವಾಹ ಮುನ್ನೆಚ್ಚರಿಕೆ ನಿಭಾಯಿಸುವ ಸಂಬಂಧ ಹಲವು ಮಾಹಿತಿ ನೀಡಿದರು.

ಮನೆ ಹಾನಿ ಪ್ರದೇಶಕ್ಕೆ ಭೇಟಿ: ಸಭೆಗೂ ಮೊದಲು ಕತ್ತಲೆಕಾಡು ಗ್ರಾಮದಲ್ಲಿ ಮಳೆಯಿಂದ ಹಾನಿಯಾಗಿರುವ ವಾಸದ ಮನೆಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪರಿಶೀಲನೆ ಮಾಡಿದರು. ಈ ಸಂಬಂಧ ಕೂಡಲೇ ವರದಿ ಕಳುಹಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಉಪ ವಿಭಾಗಾಧಿಕಾರಿ ರಮೇಶ್ ಪಿ.ಕೋನರೆಡ್ಡಿ, ತಹಶೀಲ್ದಾರರಾದ ಶಾರದಾಂಭ ಇತರರು ಇದ್ದರು.