ನಾಪೆÇೀಕ್ಲು, ಜೂ. 3: ಸುಂದರ ಪರಿಸರದ ಪ್ರವಾಸಿ ತಾಣ ನಾಲ್ಕುನಾಡು ಅರಮನೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳತ್ತ ಇದು ದಾಪುಗಾಲಿರಿಸುವ ಎಲ್ಲಾ ಲಕ್ಷಣಗಳೂ ಸ್ವಷ್ಟವಾಗಿ ಗೋಚರಿಸುತ್ತಿದೆ. ಇದಕ್ಕೆ ಸಾಕ್ಷಿ ಇಲ್ಲಿಗೆ ಪ್ರತೀ ನಿತ್ಯ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರು ವದು. ಶಾಲಾ ಕಾಲೇಜುಗಳು ಆರಂಭಗೊಂಡರೂ ಮಳೆಯ ವಾತಾರಣವಿದ್ದರೂ ಈ ಬಾರಿ ಪ್ರವಾಸಿಗರ ಸಂಖ್ಯೆಯು ಹೆಚ್ಚಾಗಿಯೇ ಕಂಡುಬರುತ್ತಿದೆ. ಅರಮನೆಯ ಭವ್ಯ ಕಲ್ಪನೆಯೊಂದಿಗೆ ಬರುವ ಪ್ರವಾಸಿಗರಿಗೆ ಮೊದಲಿಗೆ ಸ್ಪಲ್ಪ ಕಸಿವಿಸಿಯಾಗು ವದನ್ನು ಬಿಟ್ಟರೆ, ಅರಮನೆಯ ವಾಸ್ತು ಶಿಲ್ಪ, ಸುಂದರ ಕಲಾಕೃತಿ, ಸುತ್ತಲಿನ ಪರಿಸರ ಕಂಡೊಡನೆ ಹಸನ್ಮುಖಿಯಾಗು ವದರೊಂದಿಗೆ ಎಲ್ಲಾ ಚಿಂತೆಯನ್ನೂ ಮರೆಯುವಂತೆ ಮಾಡುತ್ತದೆ.

ಕೊಡಗಿನ ಇತಿಹಾಸವನ್ನು ಕೆದಕಿದರೆ ಪುರಾತನ ದೇವಳಗಳು, ಗುಡಿ-ಗೋಪುರಗಳು, ಅರಮನೆಗಳು ಹೀಗೆ ದೊಡ್ಡ ಪಟ್ಟಿಯೇ ನಮ್ಮ ಕಣ್ಣ ಮುಂದೆ ಸುಳಿಯುತ್ತದೆ. ಇಂತಹ ಪುರಾತನ ಕಟ್ಟಡಗಳ ಸಾಲಿನಲ್ಲಿ ಅಗ್ರಗಣ್ಯನಂತೆ ಕಂಗೊಳಿಸುತ್ತಿರುವ, ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿರುವ, ಕೊಡಗು ರಾಜ ನಿರ್ಮಿಸಿದ ನಾಲ್ಕುನಾಡು ಅರಮನೆ ಪ್ರಮುಖವಾದುದು.ಅರಮನೆ ಎಂದೊಡನೆ ನಮ್ಮೆದುರಿಗೆ ಬರುವದು ರಾಜ ವೈಭೋಗದ ಬೃಹದಾಕಾರದ ಅರಮನೆಯ ಚಿತ್ರ. ಆದರೆ ಇಲ್ಲಿನ ಚಿತ್ರಣವೇ ವಿಭಿನ್ನ. ಈ ಅರಮನೆಯ ನಿರ್ಮಾಣದ ಬಗ್ಗೆ ಹಲವರು ಹಲವು ರೀತಿಯಲ್ಲಿ ಹೇಳುವದುಂಟು. ರಾಜನು ಬೇಸಿಗೆ ಶಿಬಿರವಾಗಿ ಇದನ್ನು ಕಟ್ಟಿಸಿದನು, ಮೈಸೂರಿನ ರಾಜ ಟಿಪ್ಪು ಸುಲ್ತಾನನಿಂದ

(ಮೊದಲ ಪುಟದಿಂದ) ಹಾಗೂ ಬ್ರಿಟೀಷರಿಂದ ರಕ್ಷಿಸಿಕೊಳ್ಳಲು ಈ ದಟ್ಟಾರಣ್ಯದಲ್ಲಿ ಅರಮನೆಯನ್ನು ನಿರ್ಮಿಸಿದನು ಎಂದು ಹೇಳುವವರೂ ಇದ್ದಾರೆ. ರಾಜನು ಯಾವ ಕಾರಣದಿಂದ ಇಲ್ಲಿ ಅರಮನೆ ಕಟ್ಟಿಸಿದ್ದರೂ ಈಗ ಇದು ಪ್ರವಾಸಿಗರ, ಬೆಟ್ಟ ಚಾರಣಿಗರ ಅಚ್ಚುಮೆಚ್ಚಿನ ತಾಣವಾಗಿ ರೂಪುಗೊಂಡಿರುವದು ಮಾತ್ರ ಸತ್ಯ. ನಾಲ್ಕುನಾಡು ಅರಮನೆ ಜಿಲ್ಲಾ ಕೇಂದ್ರ ಮಡಿಕೇರಿಯಿಂದ 33 ಕಿ.ಮೀ. ಮತ್ತು ಕಕ್ಕಬ್ಬೆಯಿಂದ 3 ಕಿ.ಮೀ ಅಂತರದಲ್ಲಿದೆ.

ಈ ಅರಮನೆಯನ್ನು 1789-91ರ ಕಾಲ ಘಟ್ಟದಲ್ಲಿ ನಿರ್ಮಿಸಿರುವ ಬಗ್ಗೆ ದಾಖಲೆಗಳಿವೆ. ಈಗ ಅರಮನೆಯಿರುವ ಸ್ಥಳ ಹಿಂದೆ ಪುಲಿಯಂಡ ಕುಟುಂಬಸ್ಥರಿಗೆ ಸೇರಿದಾಗಿತ್ತು. ಇಲ್ಲಿನ ಸುಂದರ ಪರಿಸರಕ್ಕೆ ಮಾರು ಹೋದ ರಾಜ ಅವರಿಗೆ ಬದಲಿ ಜಾಗ ನೀಡಿ ಇಲ್ಲಿ ಅರಮನೆ ನಿರ್ಮಿಸಿದನು ಎಂಬುದು ಇತಿಹಾಸ. ಇದು ತಡಿಯಂಡ ಮೋಳ್ ಬೆಟ್ಟ ತಪ್ಪಲಿನಲ್ಲಿದ್ದು ದೊಡ್ಡ ದೊಡ್ಡ ಮರದ ತೊಲೆಗಳಿಂದ ಮಂಗಳೂರು ಹೆಂಚಿನ ಸಹಾಯದಿಂದ ನಿರ್ಮಿಸಲಾದ ಎರಡಂತಸ್ತಿನ ದೊಡ್ಡ ಕಟ್ಟಡ. ಇದರಲ್ಲಿ ಸುಂದರ ವಾಸ್ತು ಶಿಲ್ಪ ಮತ್ತು ಕೆತ್ತನೆಗಳನ್ನು ಯಥೇಚ್ಚವಾಗಿ ಕಾಣಬಹುದು. ಎದುರಿಗೆ ದೊಡ್ಡದಾದ ಹೆಬ್ಬಾಗಿಲು, ಒಳಗೆ ವಿಶಾಲವಾದ ಪ್ರಾಂಗಣ, ಅರಮನೆಯ ಎಡ ಪಾರ್ಶದಲ್ಲಿ ಸುಂದರವಾಗಿ ನಿರ್ಮಿಸಿದ ಮದುವೆ ಮಂಟಪ ನಮ್ಮನ್ನು ಸೆಳೆಯುತ್ತದೆ. ರಾಜ ವೀರರಾಜೇಂದ್ರನ ಸಹೋದರಿ ದೇವಮ್ಮಾಜಿಯ ವಿವಾಹಕ್ಕೆ ಈ ಮಂಟಪವನ್ನು ನಿರ್ಮಿಸಲಾಯಿತು ಎಂದು ಹೇಳಲಾಗುತ್ತಿದೆ. ಮುಂದೆ ಅರಮನೆಯ ಮೆಟ್ಟಲೇರಿದರೆ ಎಡಕ್ಕೆ ದೊಡ್ಡ ಚಾವಡಿ, ಕೆಳ ಅಂತಸ್ತಿನಲ್ಲಿ ಐದಾರು ಕೊಠಡಿಗಳನ್ನು ಬಿಟ್ಟರೆ, ಹೆಚ್ಚಿನ ವಿಶೇಷವೇನೂ ಕಂಡುಬರುವದಿಲ್ಲ. ಆದರೆ ಅರಮನೆಯ ಮಧ್ಯಭಾಗದಲ್ಲಿರುವ ಕೋಣೆಯ ಗೋಡೆಗೆ ಅಳವಡಿಸಿರುವ ಏಳೆಂಟು ರಂಧ್ರಗಳ ಕಿಟಕಿ ಮಾತ್ರ ಪ್ರವಾಸಿಗರನ್ನು, ನೋಡುಗರನ್ನು ಒಂದು ಕ್ಷಣ ತಡೆದು ನಿಲ್ಲಿಸುವದಂತೂ ಖಚಿತ. ಮಾರ್ಗದರ್ಶಿಯ ಮಾತಿನಂತೆ ಈ ಕಿಟಕಿಯ ಯಾವದೇ ರಂಧ್ರದ ಮೂಲಕ ಬಂದೂಕಿನ ನಳಿಕೆಯನ್ನು ತೂರಿಸಿ ಗುಂಡು ಸಿಡಿಸಿದರೂ ಹೆಬ್ಬಾಗಿಲಿನ ಮೂಲಕ ನುಗ್ಗಿ ಬರುವ ಶತ್ರುವಿನ ಎದೆ ಶೀಳುವಂತೆ ಅಳವಡಿಸಲಾಗಿದೆ. ಹಿಂದಿನ ಕಾಲದ ಜನರ ಬುದ್ಧಿವಂತಿಕೆಗೆ, ಜಾಣ್ಮೆಗೆ ಇದುವೇ ಸಾಕ್ಷಿ.

ಕೆಳಗಿನಿಂದ ಮೇಲಂತಸ್ತಿಗೆ ಸಾಗುವ ಮರದ ಏಣಿ ಏರಿ ಹೋದರೆ ದೊಡ್ಡದಾದ ರಾಜನ ದರ್ಬಾರ್ ಎದುರಾಗುತ್ತದೆ. ಒಳಗಿನ ಚಾವಡಿಯ ಎರಡು ಬದಿಯಲ್ಲಿರುವ ರಾಜ ಮತ್ತು ರಾಣಿಯರ ಪ್ರತ್ಷೇಕ ಕೊಠಡಿಗಳು ಈ ಕೋಣೆಗಳ ಗೋಡೆಗಳಲ್ಲಿ ಅಪರೂಪದ ಪ್ರಸಿದ್ಧ ಕಲಾಕೃತಿಗಳನ್ನು ಕಾಣಬಹುದು. ಶಿಥಿಲಾವಸ್ಥೆಯಿಂದ ಕೂಡಿದ ಈ ಅರಮನೆಯ ಕೆಲವು ಭಾಗಕ್ಕೆ ಸಿನೆಮಾ ಶೂಟಿಂಗ್ ತಂಡದವರು ಹಚ್ಚಿದ ಬಣ್ಣ ಬಿಟ್ಟರೆ ಉಳಿದಂತೆ ಇಲ್ಲಿ ಯಾವದೇ ಬದಲಾವಣೆ ಆಗಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಸರಕಾರ ಐತಿಹಾಸಿಕ ಸ್ಮಾರಕಗಳ, ಕಟ್ಟಡಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ ಕ್ರಮ ಕೈಗೊಂಡಿರುವದರಿಂದ ಇಂಟೆಕ್ ಸಂಸ್ಥೆ ಈ ಅರಮನೆಯ ಉಸ್ತುವಾರಿ ವಹಿಸಿಕೊಂಡು ಇಲ್ಲಿರುವ ಕಲಾಕೃತಿಗಳನ್ನು ಸ್ವಚ್ಛಗೊಳಿಸಿ ರಕ್ಷಿಸುವ ಕೆಲಸಮಾಡುತ್ತಿದೆ. ಈಗ ಬೆಳಿಗ್ಗೆ 7ರಿಂದ ಸಂಜೆ 7ರ ತನಕ ಪ್ರವಾಸಿಗರಿಗೆ ಶುಲ್ಕ ರಹಿತ ಪ್ರವೇಶಕ್ಕೆ ಅವಕಾಶವಿದೆ. ಮಾಹಿತಿಗೆ ಮಾರ್ಗಸೂಚಕರ ಮತ್ತು ಕಾವಲುಗಾರರ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ

. -ಪಿ.ವಿ.ಪ್ರಭಾಕರ್