ಮಡಿಕೇರಿ, ಜೂ. 3: ಕಾಫಿ ಕೊಡಗಿನ ಪ್ರಮುಖ ಬೆಳೆ. ಇದು ಇಲ್ಲಿ ವಾಸಿಸುತ್ತಿರುವ ಜನರ ಜೀವನಾಧಾರವೂ ಹೌದು. ಕೇವಲ ಬೆಳೆಗಾರರು ಮಾತ್ರವಲ್ಲದೇ ಅದೆಷ್ಟೋ ಕಾರ್ಮಿಕ ಕುಟುಂಬಗಳು ಈ ಕಾಫಿ ಬೆಳೆಯನ್ನೇ ನಂಬಿ ಬದುಕುತ್ತಿವೆ. ಸೇನೆ, ಕ್ರೀಡೆಗೆ ಕೊಡಗು ಜಿಲ್ಲೆ ತನ್ನದೇ ಆದ ಕೊಡುಗೆ ನೀಡಿದೆ. ಅದರಂತೆ ದೇಶದ ಕಾಫಿ ಉತ್ಪಾದನೆಯಲ್ಲೂ ಕೊಡಗಿನ ಪಾಲುದಾರಿಕೆಯಿದೆ.ಪ್ರಸ್ತುತ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯಾಯಿತು. ಗುಡುಗು ಸಿಡಿಲಿನ ಆರ್ಭಟದೊಂದಿಗೆ, ಗಾಳಿ ಮಿಂಚಿನ ರಭಸದೊಂದಿಗೆ ಸುರಿದ ಈ ಮಳೆ ಕಾಫಿ ಬೆಳೆಗೆ ಪೂರಕವಾಗಿದೆ. ಕೇವಲ ಕಾಫಿಗೆ ಮಾತ್ರವಲ್ಲದೆ ಕರಿಮೆಣಸಿಗೂ ಈ ಮಳೆ ಪ್ರಯೋಜನಕಾರಿಯಾಗಿದೆ. ಆದರೆ ಕಳೆದ ಒಂದು ವರ್ಷದಿಂದ ಈಚೆಗೆ ಕಾಫಿಗೆ ಉತ್ತಮ ಬೆಲೆ ದೊರಕದೆ ಬೆಳೆಗಾರರು ಪರಿತಪಿಸುವಂತಾಗಿದೆ. ಅರೇಬಿಕಾ ಹಾಗೂ ರೋಬಸ್ಟಾ ಎರಡಕ್ಕೂ ಕೂಡ ಉತ್ತಮ ಬೆಲೆ ಲಭ್ಯವಾಗಿಲ್ಲ. ಇವೆರಡರ ಪೈಕಿ ಸ್ಥಳೀಯ ಮಾರುಕಟ್ಟೆಯಲ್ಲಿ ರೋಬಸ್ಟಾ ಪಾರ್ಚ್‍ಮೆಂಟ್‍ಗೆ ಬೇಡಿಕೆ ಹಾಗೂ ಹೆಚ್ಚಿನ ಬೆಲೆಯಿದೆ. ಕಾಫಿ ವಹಿವಾಟುದಾರರಾದ ಕಬೀರ್ ಅವರ ಪ್ರಕಾರ ಕಾಫಿಯ ಇತ್ತೀಚಿನ ಬೆಲೆ ಅರೇಬಿಕಾ ಪಾರ್ಚ್‍ಮೆಂಟ್‍ಗೆ ರೂ. 6800, ಅರೇಬಿಕಾ ಚೆರ್ರಿಗೆ ರೂ.3750, ರೋಬಸ್ಟಾ ಪಾರ್ಚ್‍ಮೆಂಟ್‍ಗೆ ರೂ.6850, ರೋಬಸ್ಟಾ ಚೆರ್ರಿಗೆ 3000 ಇತ್ತು. ಕಳೆದ ಬಾರಿಗಿಂತ ಈ ಬಾರಿ ಬೆಲೆ ಕಡಿಮೆ ಆಗಿದೆ ಎಂದು ಅವರು ಮಾಹಿತಿಯಿತ್ತರು. ಈ ಬಾರಿ ಮಡಿಕೇರಿ, ಮಾದಾಪುರ, ಹಾಲೇರಿ, ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕೊಡ್ಲಿಪೇಟೆವರೆಗೆ ಉತ್ತಮ ಹೂ ಮಳೆಯಾಗಿದೆ. ಸುಂಟಿಕೊಪ್ಪ, ಚೆಟ್ಟಳ್ಳಿ, ಸಿದ್ದಾಪುರ, ಪಾಲಿಬೆಟ್ಟ ತಿತಿಮತಿ, ಗೋಣಿಕೊಪ್ಪ, ವೀರಾಜಪೇಟೆ ವ್ಯಾಪ್ತಿಯಲ್ಲಿ ಹೂಮಳೆ ಕಡಿಮೆಯಾಗಿದೆ.

ಆದರೆ ಜಿಲ್ಲಾ ವ್ಯಾಪ್ತಿಯಲ್ಲಿ ‘ಬ್ಯಾಕಿಂಗ್’ ಮಳೆ ಉತ್ತಮವಾಗಿದ್ದು, ಕಾಫಿಯೊಂದಿಗೆ ಕರಿಮೆಣಸು, ಚಿಗುರಿ ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗಿದೆ. ಆದರೂ ಇಲ್ಲಿನ ಕಾಫಿ ಬೆಳೆಗಾರರು ವಾತಾವರಣದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಹೆಚ್ಚಾಗುತ್ತಿರುವ ಉಷ್ಣತೆ, ಅಗತ್ಯವಿದ್ದಾಗ ಬಾರದೆ, ಅಗತ್ಯವಿಲ್ಲದಾಗ ಸುರಿಯುವ ಮಳೆ, ಕಾರ್ಮಿಕರ ವೇತನ, ಉತ್ಪಾದನಾ ವೆಚ್ಚದ ಹೆಚ್ಚಳದಿಂದಾಗಿ ಖರ್ಚಿಗೆ ತಕ್ಕಷ್ಟು ಆದಾಯ ಬರದೆ ಸಮಸ್ಯೆ ನಡುವೆಯೂ ಕಾಫಿ ಉತ್ಪಾದನೆಯಲ್ಲಿ ತೊಡಗಿದ್ದಾರೆ ಎಂದು ಬೆಳೆಗಾರ ಹಾಗೂ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಅಭಿಪ್ರಾಯಿಸಿದ್ದಾರೆ. ಭಾರತದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ. 70 ಇದ್ದರೆ ಅದರಲ್ಲಿ ಕೊಡಗಿನ ಪಾಲು ಶೇ. 40 ಅಂದರೆ 3 ಲಕ್ಷ ಟನ್ ಕಾಫಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಭಾರತ ನೀಡಿದರೆ, ಅದರಲ್ಲಿ 1 ಲಕ್ಷದ 20 ಸಾವಿರ ಟನ್ ಕಾಫಿ ಕೊಡಗು ಜಿಲ್ಲೆಯ ಉತ್ಪಾದನೆಯಾಗಿದೆ. ವಿಶ್ವದಲ್ಲಿ ಕಾಫಿ ಸೇವನೆ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾಫಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ ಎಂದು ಬೋಸ್ ಮಂದಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

(ಮೊದಲ ಪುಟದಿಂದ)

ಸಬ್ಸಿಡಿಗಳಿಲ್ಲ

12ನೇ ಪಂಚವಾರ್ಷಿಕ ಯೋಜನೆಯಡಿ ಕಳೆದ ವರ್ಷ ಮಾರ್ಚ್‍ವರೆಗೆ ಕಾಫಿ ಮಂಡಳಿಯಿಂದ ಕಾಫಿ ಉತ್ಪಾದನೆ ಸಂಬಂಧ ಯಾಂತ್ರೀಕರಣ, ಮರುನಾಟಿ, ನೀರಾವರಿ ಸೌಲಭ್ಯ, ಡ್ರೈಯಾರ್ಡ್ ಇತ್ಯಾದಿಗಳಿಗೆ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ ಕಳೆದ ಮಾರ್ಚ್ ನಂತರ ನೀತಿ ಆಯೋಗ ಜಾರಿಯಾಗಿದ್ದು, ಎಲ್ಲಾ ವಿಧದ ಸಬ್ಸಿಡಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ತಿಳಿಸಿದ್ದಾರೆ. ಅಲ್ಲದೆ ಈ ಹಿಂದೆ ಘೋಷಿಸಿದ್ದ ಸಬ್ಸಿಡಿಯಲ್ಲೇ ಬಹಳಷ್ಟು ಬಾಕಿ ಉಳಿದಿದ್ದು, ಸಂಪೂರ್ಣ ಬಿಡುಗಡೆ ಆಗಿಲ್ಲ. ಸಣ್ಣ ಬೆಳೆಗಾರರು ಹಾಗೂ ತೋಟ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಅದನ್ನೂ ಕೇವಲ ಪ.ಜಾತಿ - ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಎಂದು ಮೀಸಲಿಡಲಾಗಿದೆ ಎಂದು ಕಾವೇರಪ್ಪ ಮಾಹಿತಿಯಿತ್ತಿದ್ದಾರೆ.

ಜೂನ್ ನಂತರ ಮಳೆಯ ತೀವ್ರತೆ ಹೆಚ್ಚಾಗಿ ಸಂಭವಿಸುವ ಬೆಳೆನಷ್ಟಕ್ಕೆ ಕಾಫಿ ಮಂಡಳಿ, ತೋಟಗಾರಿಕಾ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿ ಶೇ. 33 ಕ್ಕಿಂತ ಹೆಚ್ಚಿನ ಬೆಳೆ ನಷ್ಟವಾಗಿದ್ದರೆ, ಕೇಂದ್ರ ಸರ್ಕಾರದ ಬೆಳೆ ಹಾನಿ ಪರಿಹಾರ ಯೋಜನೆಯಡಿ ಪರಿಹಾರ ನೀಡಲಾಗುತ್ತದೆ. ಪ್ರಸ್ತುತ ಸುರಿಯುತ್ತಿರುವ ಮಳೆಯಿಂದ ಕಾಫಿ ಬೆಳೆಗೆ ಯಾವದೇ ತೊಂದರೆಯಿಲ್ಲ ಎಂದು ಕಾವೇರಪ್ಪ ತಿಳಿಸಿದ್ದಾರೆ.

ಬೆಳೆಗಾರರ ಸ್ಥಿತಿ ಶೋಚನೀಯ

ಕಾಫಿ ಬೆಳೆಗಾರರ ಪರಿಸ್ಥಿತಿ ಸದ್ಯದ ಮಟ್ಟಿಗೆ ಶೋಚನೀಯವಾಗಿದೆ. ರೋಬಸ್ಟಾ ಕಾಫಿಗೆ ಬೆಳೆಗಾರರು ಮಾಡುತ್ತಿರುವ ಖರ್ಚು - ವೆಚ್ಚಕ್ಕೆ ಸೂಕ್ತ ಲಾಭ ಬರುತ್ತಿಲ್ಲ. ಅರೇಬಿಕಾ ಕಾಫಿಯಲ್ಲಿ ಖರ್ಚು ಮಾಡಿದ ಹಣವೂ ಕೂಡ ಬೆಳೆಗಾರರಿಗೆ ಸಿಗುತ್ತಿಲ್ಲ. ಇದರಿಂದಾಗಿ ಬೆಳೆಗಾರರು ಪರಿತಪಿಸುವಂತಾಗಿದೆ. ಕಾಫಿ ಬೆಳೆಯಲ್ಲಿ ಸಿಗದ ಲಾಭವನ್ನು ಸರಿದೂಗಿಸುತ್ತಿದ್ದ ಕರಿಮೆಣಸಿಗೂ ಪ್ರಸ್ತುತ ಬೆಲೆ ಕಡಿಮೆಯಾಗಿರುವದು ಮತ್ತಷ್ಟು ಹೊರೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ವತಿಯಿಂದ ವಿವಿಧ ಬೆಳೆಗಾರ ಸಂಘಟನೆಗಳ ಪರವಾಗಿ ಪ್ರದೀಪ್ ಪೂವಯ್ಯ, ವಾಗೀಶ್ ಬೊಳ್ಳು ಇವರುಗಳು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಎಲ್ಲಾ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಚರ್ಚಿಸಿ ಕೃಷಿ ಮುಂಗಡ ಸಾಲ ವಸೂಲಾತಿ ಮಾಡದಂತೆ ಸೂಚನೆ ನೀಡುವದು, 30.3.2018ರವರೆಗಿನ ಸಾಲಮನ್ನಾ ಮಾಡುವದು, 2018-19ನೇ ಸಾಲಿನಲ್ಲಿ ಕೃಷಿ ಸಾಲ ಹಾಗೂ ಅಭಿವೃದ್ಧಿ ಸಾಲದ ಮೇಲಿನ ಬಡ್ಡಿಯನ್ನು ವಾಣಿಜ್ಯ ಹಾಗೂ ಸಹಕಾರ ಬ್ಯಾಂಕ್‍ಗಳು ಶೇ. 3ರ ಬಡ್ಡಿದರಕ್ಕೆ ನಿಗದಿಪಡಿಸುವಂತೆ ನಿರ್ದೇಶಿಸಲು ಮನವಿ ಮಾಡಿದ್ದಾರೆ ಎಂದು ಕೆಜಿಎಫ್ ವಕ್ತಾರ ಕೆ.ಕೆ.ವಿಶ್ವನಾಥ್ ತಿಳಿಸಿದ್ದಾರೆ.