ಮಡಿಕೇರಿ, ಜೂ. 3: ವಾಡಿಕೆಯಂತೆ ಕೊಡಗು ಜಿಲ್ಲೆಯಲ್ಲಿ ಜೂನ್ ತಿಂಗಳ ಆರಂಭದಿಂದಲೇ ಮುಂಗಾರು ಮಳೆ ಆರಂಭಗೊಳ್ಳುವ ನಿರೀಕ್ಷೆ ಇತ್ತಾದರೂ ಇದು ಇದೀಗ ಒಂದೆರಡು ದಿನ ತಡವಾಗಿ ಆರಂಭಗೊಳ್ಳುವ ಸಾಧ್ಯತೆ ಇದೆ.
ಈ ಕುರಿತು ಬೆಂಗಳೂರಿನ ಹವಾಮಾನ ಇಲಾಖೆಯ ಅಧಿಕಾರಿಗಳು ಖಾತರಿಪಡಿಸಿದ್ದು, ತಾ. 5 ಅಥವಾ 6 ರಿಂದ ಮಳೆಗಾಲ ಪ್ರಾರಂಭಗೊಳ್ಳುವ ಮುನ್ಸೂಚನೆ ನೀಡಿದ್ದಾರೆ. ಕೇರಳದಲ್ಲಿ ಈಗಾಗಲೇ ಮುಂಗಾರು ಮಳೆ ಆರಂಭಗೊಂಡಿರುವ ಹಿನ್ನೆಲೆ ರಾಜ್ಯದಲ್ಲೂ ಮಳೆಗಾಲ ವಾಡಿಕೆಯಂತೆ ಆರಂಭಗೊಳ್ಳಬೇಕಿತ್ತು. ಆದರೆ ತಾ. 3 ರ ತನಕವೂ ಬಿಸಿಲಿನ ವಾತಾವರಣ ಕೊಡಗಿನಲ್ಲಿ ಕಂಡು ಬಂದಿತ್ತು. ಈ ಕುರಿತು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಬೆಂಗಳೂರಿನ ಹವಾಮಾನ ಇಲಾಖೆಯ ಅಧಿಕಾರಿ ಪಾಟೀಲ್ ಅವರು ಈಗಾಗಲೇ ಕರಾವಳಿ ಕರ್ನಾಟಕ ಭಾಗದಲ್ಲಿ ಮಳೆಯಾಗುತ್ತಿದೆ. ಶಿರಾಡಿ, ಹಾಸನ, ಮೈಸೂರು ಭಾಗಗಳಲ್ಲಿಯೂ ಮಳೆ ಸುರಿಯುತ್ತಿದೆ. ಕೊಡಗು ಜಿಲ್ಲೆಯಲ್ಲಿ ಈ ಬಾರಿ ತಾ. 5 ಅಥವಾ 6 ರ ನಂತರ ಮುಂಗಾರು ಮಳೆ ಆರಂಭಗೊಳ್ಳಲಿರುವದಾಗಿ ಮಾಹಿತಿ ನೀಡಿದ್ದಾರೆ. ಹವಾಮಾನ ಶೇ. 50 ರಿಂದ 60 ರಷ್ಟು ತೇವಾಂಶದಿಂದ ಕೂಡಿದ್ದು, ಮಳೆ ಪ್ರಾರಂಭಗೊಳ್ಳಲಿರುವದು ಖಚಿತ ಎಂದಿರುವ ಅವರು, ಪ್ರಸಕ್ತ ವರ್ಷ ಮುಂಗಾರು ಸಹಜ ರೀತಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭಕ್ಕೆ ಮುನ್ನವೇ ಪ್ರಸಕ್ತ ವರ್ಷ ಸರಾಸರಿ 16.99 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿ ತನಕ 12.32 ಇಂಚಿನಷ್ಟು ಸರಾಸರಿ ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಈ ಬಾರಿ ಜನವರಿಯಿಂದ ಈತನಕ ಹೆಚ್ಚು ಮಳೆಯಾಗಿದೆ. ತಾಲೂಕಿನಲ್ಲಿ ಈತನಕ 24.58 ಇಂಚು ಮಳೆಯಾಗಿದ್ದರೆ ಕಳೆದ ವರ್ಷ ಇದೇ ಅವಧಿಯಲ್ಲಿ 14.13 ಇಂಚು ಮಳೆಯಾಗಿತ್ತು.
ವೀರಾಜಪೇಟೆ ತಾಲೂಕಿನಲ್ಲಿ ಈ ಬಾರಿ ಜನವರಿಯಿಂದ ಈತನಕ 12.50 ಇಂಚು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 13.89 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ವೀರಾಜಪೇಟೆ ತಾಲೂಕಿನಲ್ಲಿ 12.26 ಇಂಚು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 10.69 ಇಂಚು ಮಳೆಯಾಗಿತ್ತು. ಜಿಲ್ಲೆಯಲ್ಲಿ ಪ್ರಸ್ತುತ ಬಿಸಿಲಿನ ಲಕ್ಷಣ ಕಂಡು ಬರುತ್ತಿದ್ದರೂ ಆಗಾಗ್ಗೆ ಮೋಡ ಮುಸುಕಿದ ವಾತಾವರಣವೂ ಎದುರಾಗುತ್ತಿದೆ. ಬಿಸಿಲಿನ ಪ್ರಖರತೆಯೂ ಹೆಚ್ಚಾಗಿ ಕಂಡುಬರುತ್ತಿಲ್ಲ. ಅಲ್ಲಲ್ಲಿ ನಡು ನಡುವೆ ಮಳೆಯ ಸಿಂಚನವಾಗುತ್ತಿರುವ ಕುರಿತು ವರದಿಯಾಗಿದೆ.