ವೀರಾಜಪೇಟೆ, ಜೂ. 3: ಕಾರ್ಮಿಕರಿಗಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಕಾರ್ಮಿಕರು ಸಿಗುವ ಸೌಲಭ್ಯಗಳನ್ನು ಪಡೆದು ಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ್ ಅಂಚಿ ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ, ಕಾರ್ಮಿಕ ಇಲಾಖೆ, ಮತ್ತು ಪಾಲಿಬೆಟ್ಟದ ಹೊಸಳ್ಳಿ ಟಾಟಾ ಕಾಫಿ ಎಸ್ಟೇಟ್‍ನ ಸಂಯುಕ್ತ ಆಶ್ರಯದಲ್ಲಿ ಎಸ್ಟೇಟ್ ಸಭಾಂಗಣದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಹಾಗೂ ತಂಬಾಕು ನಿಷೇಧ ದಿನಾಚರಣೆ ಪ್ರಯುಕ್ತ ಕಾರ್ಮಿಕರಿಗಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ್ ಅಂಚಿ, ಕಾರ್ಮಿಕರುಗಳು ಸದಾ ಕೆಲಸದ ಒತ್ತಡದಲ್ಲಿರುತ್ತಾರೆ. ಆದರೂ ಕಾನೂನಿನ ಅರಿವಿನಿಂದ ಸರಕಾರದ ಅಗತ್ಯ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಸರಕಾರ ತಂಬಾಕು ನಿಷೇದ ಮಾಡಿದ್ದರೂ ಯುವಕರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ತಂಬಾಕಿನ ಸೇವನೆಯಂತಹ ದುಶ್ಚಟಗಳಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿರುವದು ಕಂಡುಬರುತ್ತಿದೆ. ಆದ್ದರಿಂದ ಕಾರ್ಮಿಕರು ಮತ್ತು ಸಾರ್ವಜನಿಕರು ಉಚಿತ ಕಾನೂನಿನ ಅರಿವು ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಂ.ಎಂ. ನಂಜಪ್ಪ ಮಾತನಾಡಿ, ಕಾರ್ಮಿಕರು ಕಾನೂನಿನ ಅರಿವು ಪಡೆದುಕೊಂಡು ತಮ್ಮ ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚು ಗಮನ ಹರಿಸುವ ಮೂಲಕ ಅವಕಾಶ ಗಳನ್ನು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದರು. ವೀರಾಜಪೇಟೆ ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ. ಮಹದೇವಸ್ವಾಮಿ ಮಾತನಾಡಿ, ಸರಕಾರದಿಂದ ಕಾರ್ಮಿಕರುಗಳಿಗೆ ಸಿಗುವಂತ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಪಾಲಿಬೆಟ್ಟ ಟಾಟಾ ಕಾಫಿ ಎಸ್ಟೇಟ್‍ನ ವ್ಯೆವಸ್ಥಾಪಕ ಕೆ.ಎಸ್. ಮಾಚಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ವಕೀಲರಾದ ಬಿ.ಬಿ. ಮಾದಪ್ಪ ಕಾರ್ಮಿಕರುಗಳ ಸೌಲಭ್ಯಗಳ ಬಗ್ಗೆ ಉಪನ್ಯಾಸ ನೀಡಿದರು.