ಮಡಿಕೇರಿ, ಜೂ. 2: ಮಡಿಕೇರಿಯ ಇತಿಹಾಸ ಪ್ರಸಿದ್ಧವಾದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ, ಸುಮಾರು ರೂ. 30 ಲಕ್ಷ ವೆಚ್ಚದಲ್ಲಿ ಅಲಂಕಾರಿಕ ಪ್ರವೇಶ ದ್ವಾರ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದು ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಕೆ. ಜಗದೀಶ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ದೇವಾಲಯಕ್ಕೆ ಸಂಬಂಧಿಸಿದಂತೆ ಮುಂದಿನ ಮೂರು ವರ್ಷಗಳ ಅವಧಿಗೆ ಸರಕಾರ ನೂತನ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿದ್ದು, ಸಮಿತಿ ವತಿಯಿಂದ ನಗರದ ಶ್ರೀ ಆಂಜನೇಯ ದೇವಸ್ಥಾನ, ಕೋಟೆ ಶ್ರೀ ಗಣಪತಿ ದೇವಾಲಯ ಹಾಗೂ ಓಂಕಾರೇಶ್ವರ ದೇವಾಲಯ ಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.ನೂತನ ಸಮಿತಿಯ ಪ್ರಥಮ ಸಭೆ ಇತ್ತೀಚೆಗೆ ನಡೆದಿದ್ದು, ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ದೇವಾಲಯಗಳ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಅದರಂತೆ ಓಂಕಾರೇಶ್ವರ ದೇವಾಲ ಯದ ಬ್ರಹ್ಮಕಲಶೋತ್ಸವ ನಡೆದು ಸುಮಾರು 22 ವರ್ಷ ಗಳಾಗಿದೆ. ಈ ಹಿನ್ನೆಲೆ ಶೀಘ್ರ ಬ್ರಹ್ಮಕಲಶೋತ್ಸವ ನಡೆಸಲು ಉದ್ದೇಶಿಸ ಲಾಗಿದೆ. ಹಿಂದೂ ದೇವಾಲಯಗಳಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಬ್ರಹ್ಮಕಲಶೋತ್ಸವ ನಡೆಯಬೇಕಿದ್ದು, ಇಲ್ಲವಾದಲ್ಲಿ ಸಾನಿಧ್ಯದ ಶಕ್ತಿ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆ ಕ್ಷೇತ್ರದ ತಂತ್ರಿಗಳಾದ ನೀಲೇಶ್ವರ ಪದ್ಮನಾಭ ತಂತ್ರಿ ಅವರ ನಿರ್ದೇಶನದಲ್ಲಿ, ಸಾರ್ವಜನಿಕರ, ಜನಪ್ರತಿನಿಧಿಗಳ ಸಹಕಾರದಲ್ಲಿ ಸದ್ಯದಲ್ಲಿಯೇ ಬ್ರಹ್ಮಕಲಶೋತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ದೇವಾಲಯದ ಅರ್ಚಕರು ಹಾಗೂ ಸಿಬ್ಬಂದಿಗಳಿಗೆ ವಾಸಿಸಲು ಕನಿಷ್ಟ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದ್ದು, ಇದರೊಂದಿಗೆ ಆಂಜನೇಯ ದೇವಾಲಯದ ಮುಂಭಾಗದ ರಸ್ತೆಗೆ ಹೊಂದಿಕೊಂಡಂತೆ ]ಸುಮಾರು
ರೂ. 30 ಲಕ್ಷ
(ಮೊದಲ ಪುಟದಿಂದ) ವೆಚ್ಚದಲ್ಲಿ ಅಲಂಕಾರಿಕಾ ಪ್ರವೇಶದ್ವಾರ ನಿರ್ಮಿಸಲು ನಿರ್ಧರಿಸಲಾಗಿದೆ. ಅಲ್ಲದೆ ಪ್ರವೇಶದ್ವಾರದಿಂದ ಓಂಕಾರೇಶ್ವರ ದೇವಾಲಯಕ್ಕೆ ತೆರಳುವ ದಾರಿಗೆ ವಿದ್ಯುತ್ ದೀಪಗಳನ್ನು ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ದೇವಾಲಯದ ಮುಂಭಾಗದ ಕಲ್ಯಾಣಿಯ ಸಮೀಪ ಇರುವ ಕಟ್ಟಡದ ಮೇಲ್ಛಾವಣಿಯನ್ನು ತೆಗೆದು ಅಲಂಕಾರಿಕ ಗೋಪುರವನ್ನು ರೂ. 25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವದು. ದೇವಾಲಯದ ಕಲ್ಯಾಣಿಯನ್ನು ಶುಚಿಗೊಳಿಸಲು ಕ್ರಮ ಕೈಗೊಳ್ಳಲಾಗುವದು. ಆಂಜನೇಯ ದೇವಾಲಯದ ಮೈದಾನದಲ್ಲಿ ನವಗ್ರಹ ವನ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಉಳಿದಂತೆ ದೇವಾಲಯದಲ್ಲಿ ಕಾಲಕಾಲಕ್ಕೆ ಆಗುವ ವಾರ್ಷಿಕ ಉತ್ಸವ, ಗಣೇಶ ಚತುರ್ಥಿ, ಮಹಾಶಿವರಾತ್ರಿ, ಷಷ್ಠಿ, ಹುತ್ತರಿ, ಹನುಮ ಜಯಂತಿ, ರಾಮನವಮಿ, ನಾಗರಪಂಚಮಿ ಮುಂತಾದ ಆಚರಣೆಗಳನ್ನು ಭಕ್ತರ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುವದು.
ದೇವಾಲಯಕ್ಕೆ ಬರುವ ಭಕ್ತರಿಗೆ ವಸ್ತ್ರಸಂಹಿತೆ ಜಾರಿಗೊಳಿಸುವದು, ಭಕ್ತಾದಿಗಳ ಅನುಕೂಲಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ, ಕೊಳವೆ ಬಾವಿ ನಿರ್ಮಾಣ, ಗೌರಿಕೆರೆ ಬಳಿ ವಾಹನ ನಿಲುಗಡೆಗೆ ವ್ಯವಸ್ಥೆ ಮತ್ತು ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗುವದು. ದೇವಾಲಯದಲ್ಲಿ ಅರ್ಚಕರ ಕೊರತೆ ಇದ್ದು, ನೇಮಕಾತಿ ಪ್ರಕ್ರಿಯೆ ನಡೆಸಲಾಗುವದು, ಅಲ್ಲದೆ ಭಕ್ತರ ಬೇಡಿಕೆಗೆ ಅನುಗುಣವಾಗಿ ಪ್ರಸಾದ ವಿತರಣೆಗೂ ಕ್ರಮವಹಿಸಲಾಗುವದು ಎಂದು ತಿಳಿಸಿದರು.
ಮಡಿಕೇರಿಯ ಮಹದೇವಪೇಟೆಯಲ್ಲಿ ಈ ಹಿಂದೆ ವಾಸವಿದ್ದ ಪಾರ್ಸಿ ಕುಟುಂಬದ ದಾನಿಯೊಬ್ಬರು ಓಂಕಾರೇಶ್ವರ, ಭಾಗಮಂಡಲ ತಲಕಾವೇರಿ ದೇವಾಲಯ, ಪಾಡಿ ಇಗ್ಗುತಪ್ಪ ದೇವಾಲಯಕ್ಕೆ ವಿಲ್ ಮೂಲಕ ನೀಡಿದ ಸುಮಾರು 7 ಸೆಂಟ್ ಜಾಗವಿದ್ದು, ಅದನ್ನು ದೇವಾಲಯದ ವಶಕ್ಕೆ ಪಡೆಯಲಾಗುವದು ಎಂದು ಕೆ. ಜಗದೀಶ್ ಇದೇ ಸಂದರ್ಭ ಹೇಳಿದರು.
ದೇವಾಲಯದ ಹುಂಡಿಗೆ ಬರುವ ಕಾಣಿಕೆ ಸರಕಾರದ ಬೊಕ್ಕಸಕ್ಕೆ ಹೋಗುವ ಮೂಲಕ ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತದೆ ಎಂಬ ಸಂಶಯ ಭಕ್ತ ಜನರಲ್ಲಿದೆ. ಆದರೆ ಈ ರೀತಿ ಬರುವ ಹಣ ದೇವಾಲಯದ ಅಭಿವೃದ್ಧಿಗೆ ಬಳಕೆಯಾಗುತ್ತಿದೆಯೇ ಹೊರತು ಸರಕಾರದ ಬೊಕ್ಕಸಕ್ಕಾಗಲಿ, ಇತರ ಉದ್ದೇಶಗಳಿಗಾಗಲಿ ಬಳಕೆಯಾಗುತ್ತಿಲ್ಲ. ಶ್ರೀ ಓಂಕಾರೇಶ್ವರ ದೇವಾಲಯದ ಹೆಸರಿನ ಖಾತೆಗೆ ಕಾಣಿಕೆ ಹಣ ಜಮೆಯಾಗುತ್ತಿದ್ದು, ದೇವಾಲಯದ ಅಭಿವೃದ್ಧಿ ಕಾರ್ಯಗಳಿಗಷ್ಟೆ ಬಳಸಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಸದಸ್ಯ ಟಿ.ಹೆಚ್. ಉದಯಕುಮಾರ್ ಮಾತನಾಡಿ, ದೇವಾಲಯದ ಅಧೀನದಲ್ಲಿ ಗೋಶಾಲೆಯೊಂದನ್ನು ಅರಂಭಿಸುವ ಉದ್ದೇಶವಿದ್ದು, ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವದು ಎಂದರು.
ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಸುನಿಲ್ ಕುಮಾರ್, ಪ್ರಕಾಶ್ ಆಚಾರ್ಯ, ಕವಿತಾ ಕಾವೇರಮ್ಮ ಹಾಗೂ ದೇವಾಲಯದ ವ್ಯವಸ್ಥಾಪಕ ಎಸ್.ಎಸ್. ಸಂಪತ್ ಕುಮಾರ್ ಉಪಸ್ಥಿತರಿದ್ದರು.