ಮಡಿಕೇರಿ, ಜೂ. 2: ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರನ್ನು, ಹಾಡಿ ಮಂದಿಯನ್ನು ಕೊಂಡೊಯ್ಯಲು ಸಂಚರಿಸುತ್ತಿದ್ದ ಖಾಸಗಿ ಮೋಟಾರ್ ಬೋಟ್‍ಗಳ ಸಂಚಾರಕ್ಕೆ ಅರಣ್ಯ ಇಲಾಖೆ ತಡೆ ಒಡ್ಡಿದುದು ಕಾನೂನು ಬಾಹಿರವಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸ್ಥಳೀಯ ಅರಣ್ಯ ಅಧಿಕಾರಿಗಳು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಬೋಟ್ ಮಾಲೀಕರುಗಳ ಪರವಾಗಿ ಕೆ.ಎಸ್. ರತೀಶ್ ‘ಶಕ್ತಿ’ಯೊಂದಿಗೆ ದೂರಿದ್ದಾರೆ. ಇದರಲ್ಲಿ ಸ್ಥಳೀಯ ಅರಣ್ಯಾಧಿಕಾರಿಗಳ ಸ್ವಹಿತಾಸಕ್ತಿ ಅಡಗಿದೆ ಎಂದು ಆರೋಪಿಸಿದ್ದಾರೆ. ಇತ್ತೀಚೆಗೆ ಜಿಲ್ಲಾಡಳಿತ ರ್ಯಾಫ್ಟಿಂಗ್ ರದ್ದುಗೊಳಿಸಿದ ಬಳಿಕ ಈ ಉದ್ಯಮವನ್ನು ನಂಬಿದ್ದ ಅನೇಕ ಕುಟುಂಬಗಳು ಬೀದಿ ಪಾಲಾಗಿವೆ. ಬೋಟಿಂಗ್ ಅನ್ನು ಜಲ್ಲಾಡಳಿತ ರದ್ದು ಮಾಡಿಲ್ಲ. ಮೋಟಾರ್ ಬೋಟಿಂಗ್‍ಗೆ ನಾವು ಕಾರವಾರ ಬಂದರು ಅಧಿಕಾರಿಗಳಿಂದ ‘ಬೋಟ್ ಸೆರಾಂಗ್’ ಅನುಮತಿ ಹೊಂದಿದ್ದೇವೆ, ಸ್ಥಳೀಯ ಪಂಚಾಯಿತಿಯ ನಿರಾಪೇಕ್ಷಣಾ ದೃಢೀಕರಣ ಪತ್ರವೂ ಲಭ್ಯವಿದೆ. ಅಲ್ಲದೆ, ಈ ಹಿಂದಿನ ಕೊಡಗು ಜಿಲ್ಲಾಧಿಕಾರಿ ಶ್ರೀಕಾಂತ್ ವಾಲಗದ್ ಅವರು ನೀಡಿದ ಅನುಮತಿಯೂ ನಮ್ಮ ಬಳಿಯಿದೆ. ಕಳೆದ ಕೆಲವು ಅವಧಿಯಲ್ಲಿ ಕಾವೇರಿಯಲ್ಲಿ ನೀರು ಕಡಿಮೆಯಾದುದರಿಂದ ನಾವು ಬೋಟಿಂಗ್ ನಿಲ್ಲಸಿದ್ದೆವು. ಇದೀಗ ಮಳೆಯಿಂದಾಗಿ ನೀರಿನ ಪ್ರಮಾಣ ಅಧಿಕವಾಗಿದ್ದು ನಿನ್ನೆ ದಿನ ಪ್ರವಾಸಿಗರೂ ಅಧಿಕವಿದ್ದುದರಿಂದ ನಾವು ಬೋಟಿಂಗ್‍ಗೆ ಸಿದ್ಧತೆ ನಡೆಸಿದ್ದೆವು. ಅಷ್ಟರಲ್ಲಿ ನಮ್ಮದೇ ಎರಡು ಮೋಟಾರ್ ಬೋಟ್‍ಗಳಿವೆ. ‘ನೀವು ಬೋಟಿಂಗ್ ಮಾಡಲು ಬಿಡುವದಿಲ್ಲ’ ಎಂದು ಅರಣ್ಯಾಧಿಕಾರಿಗಳು ನಮಗೆ ತಾಕೀತು ಮಾಡಿದರು. ನಾವು ಸಂಬಂಧಿತ ಎಲ್ಲ ದಾಖಲೆಗಳನ್ನು ನೀಡಿದರೂ ಪರಿಗಣಿಸದೆ ಅವಮಾನ ಮಾಡಿದ್ದಾರೆ. ಇದರಿಂದ ನಾವು ತೀರ ನೊಂದಿದ್ದೇವೆ. ಬೋಟ್‍ಗಳ ಖರೀದಿಗೆ ಬಂಡವಾಳ ಹೂಡಿದ್ದೇವೆ. ಪರಿಣಿತ ಸಿಬ್ಬಂದಿಗಳಿಗೆ ವೇತನ ನೀಡುತ್ತಿದ್ದೇವೆ. ಮೊದಲೇ ರ್ಯಾಫ್ಟಿಂಗ್ ಇಲ್ಲದೆ ದುಸ್ಥಿತಿಯಲ್ಲಿರುವ ಸ್ಥಳೀಯ ಮಂದಿ ಈಗ ಬೋಟಿಂಗ್ ಕೂಡ ಮಾಡ ಬಾರದು ಎಂದು ಅರಣ್ಯಾಧಿಕಾರಿಗಳು ಸ್ವಹಿತಾಸಕ್ತಿಯಿಂದ ನಮ್ಮನ್ನು ತಡೆದಿರುವದನ್ನು
(ಮೊದಲ ಪುಟದಿಂದ) ನಾವು ಖಂಡಿಸುತ್ತೇವೆ ಎಂದು ರತೀಶ್ ‘ಶಕ್ತಿ’ ಯೊಂದಿಗೆ ತಿಳಿಸಿದ್ದಾರೆ, ಕೂಡಲೇ ಈ ರೀತಿಯ ದಬ್ಬಾಳಿಕೆಯನ್ನು ಅರಣ್ಯ ಇಲಾಖೆ ಕೈ ಬಿಡುವಂತೆ ಆಗ್ರಹಿಸಿದ್ದಾರೆ.
ಈ ಬೆಳವಣಿಗೆ ಬಗ್ಗೆ ಜಿಲ್ಲಾ ಉಪ ವಿಭಾಗಾಧಿಕಾರಿ ರಮೇಶ್ ಕೋನ ರೆಡ್ಡಿ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ತನ್ನ ಗಮನಕ್ಕೆ ಈ ವಿಚಾರ ಬಂದಿಲ್ಲ. ಈ ಕುರಿತು ಮಾಹಿತಿ ಸಂಗ್ರಹಿಸಿ ಸರಿಪಡಿಸಲು ಪ್ರಯತ್ನಿಸುವದಾಗಿ ಅವರು ಭರವಸೆಯಿತ್ತರು. ದುಬಾರೆ ಸಾಕಾನೆ ಶಿಬಿರಕ್ಕೆ ನದಿ ಮೂಲಕ ತೆರಳಲು ಬೋಟ್‍ಗಳನ್ನು ಬಳಸಲಾಗುತ್ತಿದ್ದು ಕಳೆದ ಹಲವು ವರ್ಷಗಳಿಂದ ಒಟ್ಟು 5 ಬೋಟ್‍ಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಇವುಗಳಲ್ಲಿ ದುಬಾರೆ ಗ್ರಾಮ ಅರಣ್ಯ ಸಮಿತಿಯ ವತಿಯಿಂದ ಎರಡು ಮೋಟಾರ್ ಬೋಟ್‍ಗಳು ಸಂಚರಿಸುತ್ತಿದ್ದು ಉಳಿದಂತೆ ಖಾಸಗಿ ಸಂಸ್ಥೆಗಳು ಪ್ರವಾಸಿಗರನ್ನು ಕೊಂಡೊಯ್ಯುತ್ತಿದ್ದ ಬೋಟ್‍ಗಳನ್ನು ಇದೀಗ ತಡೆಹಿಡಿಯಲಾಗಿದೆ. ಇಂದು ತಮ್ಮ ಬಳಿಯಿದ್ದ ಎಲ್ಲ ಅಧಿಕೃತ ದಾಖಲೆಗಳನ್ನು ರತೀಶ್ ಅವರು ‘ಶಕ್ತಿ’ಗೆ ಒದಗಿಸಿದ್ದಾರೆ. ಆದರೂ ಸ್ಥಳೀಯ ಅರಣ್ಯಾಧಿಕಾರಿಗಳು ಯಾವ ಲೋಪಗಳನ್ನು ಹೊರಿಸಿ ಈ ಬೋಟಿಂಗ್ ಪ್ರಕ್ರಿಯೆ ನಿಲ್ಲಿಸಿದ್ದಾರೆ ಎಂಬದು ನಿಜಕ್ಕೂ ಪ್ರಶ್ನಾರ್ಹವಾಗಿದೆ..ಅಲ್ಲದೆ ಈಗ ಅರಣ್ಯ ಸಮಿತಿ ಎನ್ನುವ ಹೆಸರಿನಲ್ಲಿ ಎರಡು ಬೋಟ್‍ಗಳನ್ನು ನಡೆಸುತ್ತಿರುವ ಮಂದಿ ಯಾವದೇ ಇನ್ಶುರೆನ್ಸ್ ಮಾಡಿಸಿಲ್ಲ ಎಂದು ಖಾಸಗಿ ಬೋಟ್ ಮಾಲೀಕರು ಆರೋಪಿಸಿದ್ದಾರೆ. ಖಾಸಗಿ ಮಾಲೀಕರು ರೂ. 20 ಲಕ್ಷ ಇನ್ಶುರೆನ್ಸ್ ಮಾಡಿಸಿರುವ ದಾಖಲಾತಿ ಯನ್ನು ‘ಶಕ್ತಿ’ಗೆ ನೀಡಿದ್ದಾರೆ. ಇನ್ಶುರೆನ್ಸ್ ಇಲ್ಲದೆ ಈಗ ಚಲಿಸುತ್ತಿರುವ ಬೋಟ್‍ಗಳಲ್ಲಿ ತೆರಳುವವರಿಗೆ ಮಳೆಗಾಲದಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಯಾವ ಪರಿಹಾರವಿದೆ? ಎಂಬದು ಇವರುಗಳ ಪ್ರಶ್ನೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯ ಇಲಾಖೆ ಸಹಾಯಕ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ಪ್ರವಾಸಿಗರಿಗೆ ಯಾವದೇ ರೀತಿಯ ತೊಂದರೆಯಾಗದಂತೆ ಗ್ರಾಮ ಅರಣ್ಯ ಸಮಿತಿಗೆ ಸೇರಿದ 2 ಮೋಟಾರ್ ಬೋಟ್‍ಗಳು ಕೆಲಸ ನಿರ್ವಹಿಸುತ್ತಿವೆ ಎಂದಿದ್ದಾರೆ.