ಗೋಣಿಕೊಪ್ಪಲು, ಜೂ. 2: ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರುದ್ರಬೀಡು ಗ್ರಾಮದ ಕಾಫಿ ಬೆಳೆಗಾರ ಆಲೇಮಾಡ ಹರೀಶ್ ಎಂಬವರ ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಹರೀಶ್ ಅವರ ಕಾಫಿ ತೋಟವನ್ನು ಸಂಪೂರ್ಣ ಧ್ವಂಸ ಮಾಡಿದೆ. ತೋಟದಲ್ಲಿರುವ ಬಾಳೆ, ತೆಂಗು, ಅಡಿಕೆ ಗಿಡಗಳು ನೆಲ ಕಚ್ಚಿದ್ದು ಕಾಡಾನೆ ಹಿಂಡು ಕಾಫಿ ತೋಟದಲ್ಲೇ ಕಾಲ ಕಳೆಯುತ್ತಿದ್ದು, ಸ್ಥಳಕ್ಕೆ ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಭೇಟಿ ನೀಡಿದರು.

ಸುದ್ದಿ ತಿಳಿದ ಜೆ.ಡಿ.ಎಸ್.ನ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಶನಿವಾರ ಮುಂಜಾನೆ ವೇಳೆ ರೈತ ಹರೀಶ್ ಮನೆಗೆ ತೆರಳಿ ತೋಟದಲ್ಲಿ ನಷ್ಟಗೊಂಡಿರುವ ಬೆಳೆಗಳ ಬಗ್ಗೆ ಮಾಹಿತಿ ಪಡೆದರು. ಸ್ಥಳದಿಂದ ತಿತಿಮತಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸ್ಥಳಕ್ಕೆ ಆಗಮಿಸುವಂತೆ ಮನವಿ ಮಾಡಿದರು.ದೂರವಾಣಿ ಕರೆಗೆ ಸ್ಪಂಧಿಸಿದ ತಿತಿಮತಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಶಿವಶಂಕರ್, ಆರ್‍ಎಫ್‍ಓ ಅಶೋಕ್, ಡಿಆರ್‍ಎಫ್‍ಒ ಐಚಂಡ ಗಣಪತಿ ಹಾಗೂ ತಂಡ ಸಂಕೇತ್ ಪೂವಯ್ಯ (ಮೊದಲ ಪುಟದಿಂದ) ಅವರೊಂದಿಗೆ ಕಾಡಾನೆ ಹಿಂಡು ವಾಸ್ತವ್ಯ ಹೂಡಿರುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಈ ಸಂದರ್ಭ ಮಾಹಿತಿ ನೀಡಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಶಿವಶಂಕರ್, ಈ ಭಾಗದಲ್ಲಿ ಎರಡು ದಿನಗಳಿಂದ ಆನೆಯ ಹಿಂಡು ನೆಲೆಸಿವೆ. ಇವುಗಳನ್ನು ಸ್ಥಳಾಂತರ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ತೋಟದ ಸಮೀಪ ದಟ್ಟಾರಣ್ಯ ಇರುವದರಿಂದ ಇವುಗಳನ್ನು ಓಡಿಸಲು ಕಷ್ಟವಾಗುತ್ತಿದೆ. ಮುಂಜಾಗೃತಾ ಕ್ರಮವಾಗಿ ಮೂರು ಅರಣ್ಯ ಇಲಾಖೆಯ ಸಿಬ್ಬಂದಿಯ ವಿಶೇಷ ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ತೋಟದಲ್ಲಿ ಇರುವ ಕಾಡಾನೆ ನಾಡಿಗೆ ಬರದಂತೆ ಎಚ್ಚರಿಕೆಯಿಂದ ಕಾವಲು ಹಾಕಲಾಗಿದೆ. ಕಾಡಾನೆಗಳು ಹಿಂಡಾಗಿರುವದರಿಂದ ಒಂದೇ ಸ್ಥಳದಲ್ಲಿ ನೆಲೆಯೂರಿವೆ. ಇನ್ನು ಮೂರು ದಿನದ ಒಳಗೆ ಇವುಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡಲಾಗುವದೆಂದು ಮಾಹಿತಿ ನೀಡಿದರು.

ಈಗಾಗಲೇ ರೈತರಾದ ಅಲೇಮಾಡ ಹರೀಶ್ ಅವರ ತೋಟದಲ್ಲಿದ್ದ ಬಾಳೆ, ತೆಂಗು, ಅಡಿಕೆ ಗಿಡಗಳು ಆನೆ ಧಾಳಿಯಿಂದ ನಷ್ಟ ಸಂಭವಿಸಿದ್ದು, ಕೂಡಲೇ ನೊಂದಿರುವ ರೈತನಿಗೆ ಪರಿಹಾರ ವಿತರಿಸಲು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಕಾಡಾನೆ ಓಡಿಸುವ ಸಂದರ್ಭ ಹೆಚ್ಚಿನ ನಿಗಾವಹಿಸುವಂತೆ ತಿಳಿಸಿದರು. ಭೇಟಿಯ ವೇಳೆ ತೋಟ ಮಾಲೀಕ ಅಲೇಮಾಡ ಹರೀಶ್ ಹಾಗೂ ಕುಟುಂಬ ಅರಣ್ಯ ಇಲಾಖೆ ಸಿಬ್ಬಂದಿ ಸಂಜು ಮತ್ತಿತರರು ಹಾಜರಿದ್ದರು.