ಮಡಿಕೇರಿ, ಜೂ. 2: ನೂತನವಾಗಿ ನಿರ್ಮಾಣಗೊಂಡಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಬಸ್‍ಗಳು ಬಂದು ಹೋಗುವ ಮಾರ್ಗದ ಕುರಿತು ಪೊಲೀಸ್ ಇಲಾಖೆಯು ನೀಲಿ ನಕಾಶೆಯೊಂದನ್ನು ರೂಪು ಗೊಳಿಸಿದೆ. ಈ ಮೂಲಕ ನೂತನ ಬಸ್ ನಿಲ್ದಾಣಕ್ಕೆ ವಾಹನಗಳು ಬರುವ ಮಾರ್ಗ ಹಾಗೂ ನಿಲ್ದಾಣದಿಂದ ಹಿಂತೆರಳುವ ರಸ್ತೆ ಮಾರ್ಗ ಸಂಬಂಧ ಸಾಕಷ್ಟು ಪರಿಶೀಲನೆ ನಡೆಸಲಾಗುತ್ತಿದೆ.ಮುಖ್ಯವಾಗಿ ಜಿಲ್ಲಾ ಕೇಂದ್ರ ಮಡಿಕೇರಿಗೆ ವಿವಿಧ ಮಾರ್ಗಗಳಲ್ಲಿ ಆಗಮಿಸುವ ಖಾಸಗಿ ಬಸ್‍ಗಳು ಪ್ರಮುಖವಾಗಿ ರಾಜಾಸೀಟ್ ರಸ್ತೆಯಲ್ಲಿ ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗೇರಿರ ಮುತ್ತಣ್ಣ ವೃತ್ತ ಹಾದು ಹೋಗುವ ದಿಸೆಯಲ್ಲಿ ಗಮನ ಹರಿಸಲಾಗುತ್ತಿದೆ.
ರಾಜಾಸೀಟ್‍ನಿಂದ ಬರುವಾಗ ರಾಡ್ರಿಗಸ್ ಕಟ್ಟಡ ಬಳಿ ಎದುರಾಗಲಿರುವ ಕಿಷ್ಕಿಂದೆ ಹಾಗೂ ಮುಂದುವರಿದು ಜೀವ ವಿಮಾ ಕಚೇರಿ ತನಕವೂ ಸಾಕಷ್ಟು ಕಿರಿಕಿರಿ ಎದುರಾಗುವ ಸನ್ನಿವೇಶವಿದೆ. ಒಂದು ವೇಳೆ ಎಲ್ಲ ಖಾಸಗಿ ಬಸ್‍ಗಳು ಈ ಮಾರ್ಗದಲ್ಲಿ ಹೊಸ ನಿಲ್ದಾಣಕ್ಕೆ ಬರುವಂತಾದರೆ ಏಕಮುಖ ಸಂಚಾರಕ್ಕೆ ಒತ್ತು ನೀಡಲಾಗುತ್ತದೆ. ಇನ್ನು ಹೊಸ ನಿಲ್ದಾಣದಿಂದ ಹೊರ ಹೋಗುವ ಬಸ್‍ಗಳು ವಿಜಯ ವಿನಾಯಕ ದೇವಾಲಯ ಎದುರು ಕಾಲೇಜು ರಸ್ತೆ ಬಳಸಿಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬದಿಯಿಂದ ತೆರಳುವಂತಾದರೆ ಪ್ರತ್ಯೇಕವಾಗಿ ಏಕ ಮುಖ ಸಂಚಾರ ವ್ಯವಸ್ಥೆ ರೂಪಿಸಲಾಗುತ್ತದೆ.
ದಿನಗಳು ಉರುಳಿದಂತೆ ಮಡಿಕೇರಿಯಲ್ಲಿ ಹೆಚ್ಚುತ್ತಿರುವ ವಾಹನಗಳ ದಟ್ಟಣೆ ಹಾಗೂ ಪ್ರವಾಸಿಗಳ ಸಹಿತ ಜನಸಾಂದ್ರತೆಯನ್ನು ಗಮನದಲ್ಲಿ ಇರಿಸಿಕೊಂಡಿರುವ ಪೊಲೀಸ್ ಇಲಾಖೆ ಈ ಕುರಿತು ಗಂಭೀರ ಚಿಂತನೆ ನಡೆಸುತ್ತಿದೆ. ಕೈಗಾರಿಕಾ ಬಡಾವಣೆ ರಸ್ತೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನದಂತೆ ನೀಲ ನಕಾಶೆ ಸಿದ್ಧಗೊಳಿಸಲಾಗುತ್ತಿದ್ದು, ಪ್ರೊಬೆಷನರಿ ಎಸ್ಪಿ ಯತೀಶ್, ಡಿವೈಎಸ್ಪಿ ಕೆ.ಎಸ್. ಸುಂದರರಾಜ್, ನಗರ ಪೊಲೀಸ್ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಗೆ ಇವರುಗಳು ಮಾರ್ಗ ಕುರಿತು ಸಮಾಲೋಚನೆ ನಡೆಸಿದರು.
ಪೊಲೀಸ್ ಇಲಾಖೆಯಿಂದ ರೂಪಿಸಲಾಗುವ ರಸ್ತೆ ಮಾರ್ಗಸೂಚಿಯು ಅಂತಿಮಗೊಂಡ ಬಳಿಕ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಜನಪ್ರತಿನಿಧಿಗಳು,
(ಮೊದಲ ಪುಟದಿಂದ) ವಿವಿಧ ಇಲಾಖೆಗಳ ಅಧಿಕಾರಿಗಳು, ವಾಣಿಜ್ಯೋಧ್ಯಮಿ ಸಹಕಾರ ಸಂಘದ ಪ್ರತಿನಿಧಿಗಳ ಸಹಿತ ಸಾರ್ವಜನಿಕ ಅಭಿಪ್ರಾಯ ಕ್ರೋಢೀಕರಿಸಿ ಅಂತಿಮವಾಗಿ ಸಂಚಾರ ವ್ಯವಸ್ಥೆ ರೂಪಿಸಲಾಗುವದು ಎಂದು ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.
ಈಗಾಗಲೇ ಹಿಂದಿನ ಸರಕಾರದ ಜಿಲ್ಲಾ ಉಸ್ತುವಾರಿ ಸಚಿವರು ನೂತನ ಬಸ್ ನಿಲ್ದಾಣ ಉದ್ಘಾಟಿಸಿದ್ದು, ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಸಧ್ಯದ ಮಟ್ಟಿಗೆ ಪೂರೈಸಲಾಗುತ್ತಿದೆ. ಆ ಬೆನ್ನಲ್ಲೇ ಸಂಚಾರ ಮಾರ್ಗ ಕುರಿತು ಯೋಜನೆ ರೂಪುಗೊಳ್ಳುತ್ತಿದ್ದು, ಇನ್ನಷ್ಟೇ ಎಲ್ಲವೂ ಅಂತಿಮ ಸ್ವರೂಪ ಪಡೆದುಕೊಳ್ಳಬೇಕಿದೆ. ಒಟ್ಟಿನಲ್ಲಿ ಮುಂಗಾರು ಮಳೆ ತೀವ್ರಗೊಳ್ಳುವ ಮುನ್ನ ನೂತನ ಬಸ್ ನಿಲ್ದಾಣ ಮುಖಾಂತರ ಖಾಸಗಿ ಬಸ್‍ಗಳ ಸಂಚಾರ ವ್ಯವಸ್ಥೆಗೆ ತಯಾರಿ ನಡೆಯುತ್ತಿದೆ.