ಮಡಿಕೇರಿ, ಜೂ. 2: ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿರುವ ನೀಲಮಣಿ ಎಸ್.ರಾಜು ಅವರ ಆಗಮನ ನಿರೀಕ್ಷೆಯಲ್ಲಿ ಜಿಲ್ಲಾ ಪೊಲೀಸರು ಕಾಯುತ್ತಾ ಬಸವಳಿದ ಪ್ರಸಂಗ ಎದುರಾಯಿತು. ಇಂದು ಬೆಳಿಗ್ಗೆ 8 ಗಂಟೆಗೆ ರಾಜಧಾನಿ ಬೆಂಗಳೂರಿನಿಂದ ಕೊಡಗಿಗೆ ರಾಜ್ಯ ಪೊಲೀಸ್ ಮುಖ್ಯಸ್ಥರ ಆಗಮನ ಸಂದೇಶ ಲಭಿಸಿತ್ತು.

ಅಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಎಲ್ಲ ಡಿವೈಎಸ್ಪಿಗಳು, ವೃತ್ತ ನಿರೀಕ್ಷಕರು, ಪ್ರೊಬೆಷನರಿ ಎಸ್ಪಿ ಸೇರಿದಂತೆ, ಜಿಲ್ಲಾ ಪೊಲೀಸ್ ಸಶಸ್ತ್ರದಳ ಹಾಗೂ ವಾದ್ಯ ತಂಡ ಸಹಿತ ಪೊಲೀಸ್ ಕೇಂದ್ರ ಕಚೇರಿಯಲ್ಲಿ ರಾಜ್ಯ ವರಿಷ್ಠರಿಗೆ ಗೌರ ರಕ್ಷೆ ನೀಡುವ ಮೂಲಕ ಬರಮಾಡಿಕೊಳ್ಳಲು ಕಾತರರಾಗಿದ್ದರು.

ಬೆಳಗ್ಗಿನ ಉಪಹಾರಕ್ಕೂ ಪುರುಸೊತ್ತು ಇಲ್ಲದಂತೆ ಕೊಡಗಿಗೆ ಪ್ರಪ್ರಥಮವಾಗಿ ಆಗಮಿಸುತ್ತಿರುವ ನೀಲಮಣಿ ಎಸ್. ರಾಜು ಅವರ ಸ್ವಾಗತ ತಯಾರಿಯಲ್ಲಿದ್ದ ಬಳಗಕ್ಕೆ ಮಧ್ಯಾಹ್ನ ಊಟದ ಹೊತ್ತು ಮೀರಿ 2.30ರ ವೇಳೆಗೆ ನಿರಾಶೆ ಕಾದಿತ್ತು. ರಾಜ್ಯ ಮುಖ್ಯಸ್ಥರನ್ನು ಹೆದ್ದಾರಿ ಮಧ್ಯೆ ಮಡಿಕೇರಿ ಪುರಪ್ರವೇಶ ಹಾದಿಯಲ್ಲಿ ಬರ ಮಾಡಿಕೊಂಡಾಗ ಅವರು ನೇರವಾಗಿ ಕ್ಲಬ್ ಮಹೇಂದ್ರಕ್ಕೆ ತೆರಳಿದರು. ಅಲ್ಲಿ ವಾಸ್ತವ್ಯ ಹೊಡಿದ್ದರಿಂದ, ಜಿಲ್ಲಾ ಕೇಂದ್ರ ಕಚೇರಿಗೆ ಹಿಂತೆರಳಿದ ಪೊಲೀಸ್ ಅಧೀಕ್ಷಕರಿಗೆ ಸನ್ನದ್ಧ ಸಿಬ್ಬಂದಿ ಪ್ರೊಬೆಷನರಿ ಎಸ್ಪಿ ಯತೀಶ್ ನೇತೃತ್ವದಲ್ಲಿ ಗೌರವರಕ್ಷೆ ಸಲ್ಲಿಸಿ ಆ ಬಳಿಕ ಹನಿ ಹನಿ ಮಳೆ ನಡುವೆ ಸ್ಥಳದಿಂದ ಕದಲಿದರು.