ಸುಂಟಿಕೊಪ್ಪ, ಜೂ. 1: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಕೊಡಗರಹಳ್ಳಿ, ಕಂಬಿಬಾಣೆ, ಮತ್ತಿಕಾಡು, ಶಾಂತಗೇರಿ, ಎಮ್ಮೆಗುಂಡಿ, ನೆಟ್ಲಿ ಎ, ನೆಟ್ಲಿ ಬಿ, ಪನ್ಯ, ಕೆಂಚಟ್ಟಿ, ಮಂಜಿಕೆರೆ ಹಾಗೂ ಕಾನ್ಬೈಲು ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರು, ಸಾರ್ವಜನಿಕರು ಆತಂಕ ಪಡುವಂತಾಗಿದೆÀ.
ಕೊಡಗರ ಹಳ್ಳಿ ಗ್ರಾಮ ಪಂಚಾಯಿತಿಯ ಕೆ.ಸಿ.ಅಚ್ಚಯ್ಯ ಅವರ ಕಾವೇರಿ ತೋಟಕ್ಕೆ ಕಾಡಾನೆಗಳು ಲಗ್ಗೆಯಿಡುತ್ತಿದ್ದು, ಕಾಫಿ ಗಿಡ, ತೆಂಗಿನ ಗಿಡ, ತೋಟದ ಬೇಲಿ, ಪೈಪ್, ಸಪೋಟ ಹಣ್ಣುಗಳನ್ನು ತಿಂದು ನಾಶಪಡಿಸಿ ತೋಟದಲ್ಲಿ ಟಿಕಾಣಿ ಹೂಡಿವೆ ಎಂದು ಕೆ.ಸಿ.ಅಚ್ಚಯ್ಯ ಅವರು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ. ಕಾನ್ಬೈಲು ಗ್ರಾಮ ಪಂಚಾಯಿತಿಯ ಶಾಂತಗೇರಿ. ಎಮ್ಮೆಗುಂಡಿ. ಮಂಜಿಕೆರೆ ಕಾನ್ಬೈಲು. ಲೆಬ್ಬೆ. ನೆಟ್ಲಿ ಬಿ. ಈ ಭಾಗದಲ್ಲಿ 1 ಕಾಡಾನೆ ಬಂದು ದಾಂಧಲೆ ನಡೆಸುತ್ತಿದ್ದು, ಕಾಫಿ ಗಿಡಗಳನ್ನು ತುಳಿದು ನಾಶಪಡಿಸಿದೆ. ಎಮ್ಮೆಗುಂಡಿಯ ಸಣ್ಣು ಎಂಬವರ ಮನೆ ಸಮೀಪದಲ್ಲಿದ್ದ ಬಾಳೆಗಿಡ ತಿಂದು ಹಾಕಿದೆ. ಸಂಜೆ 4 ಗಂಟೆಯ ನಂತರ ಈ ವಲಯದಲ್ಲಿ ಸಾರ್ವಜನಿಕರು, ಶಾಲಾ ಮಕ್ಕಳು, ವಾಹನ ಸವಾರರು ಭಯ ಭೀತರಾಗಿದ್ದಾರೆ. ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಕೂಡಲೇ ಕಾಡಿಗೆ ಅಟ್ಟುವ ಕೆಲಸ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.