ಕೂಡಿಗೆ, ಜೂ. 1: ಹಾರಂಗಿ ಅಣೆಕಟ್ಟೆಯಿಂದ ಕುಡಿಯುವ ನೀರಿಗಾಗಿ, ಅಲ್ಲದೆ, ಅಣೆಕಟ್ಟೆಯ ದುರಸ್ತಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಮೇಲಾಧಿಕಾರಿಗಳ ಆದೇಶದಂತೆ ಅಣೆಕಟ್ಟೆಯ ಸುರಕ್ಷಿತ ಮೂರು ಬಾಗಿಲುಗಳ ಮೂಲಕ ನೀರನ್ನು ನದಿಗೆ ಹರಿಸಿದ ಪರಿಣಾಮ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನೀರಿಲ್ಲದೆ ಸಾವಿರಾರು ಸಂಖ್ಯೆಯ ಮೀನುಗಳು ಸಾವನ್ನಪ್ಪಿರುವ ಘಟನೆ ಕಳೆದೆರಡು ದಿನಗಳ ಹಿಂದೆ ನಡೆದಿದೆ.
ನದಿಗೆ ನೀರು ಹರಿಸಿದ ಪರಿಣಾಮ ಹಿನ್ನೀರು ಪ್ರದೇಶದಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದು, ಹಿನ್ನೀರಿನ ಪ್ರದೇಶದಲ್ಲಿ ನೀರು ಸಂಪೂರ್ಣ ಬತ್ತಿ ಬರಡಾಗಿದೆ. ನೀರಿನ ಕೊರತೆಯಿಂದ ಲೆಕ್ಕವಿಲ್ಲದಷ್ಟು ಮೀನುಗಳು ಸತ್ತುಹೋಗಿವೆ. ಹಿನ್ನೀರಿನ ಪ್ರದೇಶಗಳಾದ ಸಜ್ಜಳ್ಳಿ, ಹೇರೂರು, ಗರಗಂದೂರು, ನಾಕೂರು ಪ್ರದೇಶಗಳಲ್ಲಿ ಸತ್ತ ಮೀನುಗಳ ದುರ್ವಾಸನೆ ಹೆಚ್ಚಾಗಿದೆ.
ಈ ಪ್ರದೇಶದಲ್ಲಿ 50 ವರ್ಷಗಳಿಂದ ಮೀನುಗಾರಿಕೆ ಮೂಲಕ ಬದುಕು ಸಾಗಿಸುತ್ತಿದ್ದ ಬೆಸ್ತರ ಕುಟುಂಬಗಳು ನೀರು ಮತ್ತು ಮೀನು ಇಲ್ಲದೆ ಹೊತ್ತು ಕೂಳಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲಸವಿಲ್ಲದೆ ಅಲೆದಾಡುವ ಪ್ರಸಂಗ ಎದುರಾಗಿದೆ.