ಸಿದ್ದಾಪುರ, ಜೂ. 1: ಕಾಡಾನೆ ಧಾಳಿಯಿಂದ ಕೂದಲೆಳೆಯ ಅಂತರದಿಂದ ಕಾರ್ಮಿಕ ಮಹಿಳೆಯೋರ್ವರು ಪಾರಾದ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಕರಡಿಗೋಡು ಗ್ರಾಮದ ನಡಿಕೇರಿಯಂಡ ವಿಕ್ರಂ ಅಯ್ಯಪ್ಪ ಎಂಬವರ ಕಾಫಿ ತೋಟದಲ್ಲಿ ಕೆಲಸಕ್ಕೆ ಬರುತ್ತಿದ್ದ ಸಿದ್ದಾಪುರದ ಸರೋಜಿನ ಎಂಬ ಮಹಿಳೆ ವಿಕ್ರಂ ಅವರ ಮನೆಯ ಬಳಿ ಬರುತ್ತಿದ್ದಂತೆ ಅವರ ಕಾಫಿ ತೋಟದಿಂದ ಏಕಾಏಕಿ ಕಾಡಾನೆಯೊಂದು ಪ್ರತ್ಯಕ್ಷಗೊಂಡು ಸರೋಜಿನಿ ಮೇಲೆ ಧಾಳಿ ನಡೆಸಲು ಮುಂದಾಯಿತು ಎನ್ನಲಾಗಿದೆ.

ಕಾಡಾನೆ ಬರುವ ಶಬ್ಧಕೇಳಿ ಎಚ್ಚೆತ್ತುಕೊಂಡ ಸರೋಜಿನಿ ಅಲ್ಲಿಂದ ಓಡಿದ್ದು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಕಾರ್ಮಿಕ ಮಹಿಳೆಗೆ ಯಾವದೇ ಅಪಾಯ ಸಂಭವಿಸಿಲ್ಲ. ಇದಾದ ಬಳಿಕ ಮತ್ತೊಮ್ಮೆ ಕಾಡಾನೆ ಹಿಂಡು ಮಧ್ಯಾಹ್ನ ಕಾಫಿ ತೋಟಕ್ಕೆ ಆಗಮಿಸಿ ರಾಜಾರೋಷವಾಗಿ ಸುತ್ತಾಡುತ್ತಿದ್ದವು ಎಂದು ವಿಕ್ರಂ ತಿಳಿಸಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಆರ್.ಆರ್.ಟಿ. ತಂಡ ಸ್ಥಳಕ್ಕೆ ಭೇಟಿ ನೀಡಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದರು. - ವಾಸು