ಶನಿವಾರಸಂತೆ, ಜೂ. 2: ಬೀಗ ಹಾಕಿ ಮನೆ ಮುಂಭಾಗದ ಕಂಬದ ಬಳಿಯೇ ಇಟ್ಟು ಹೋಗಿದ್ದ ಕೀಯಿಂದಲೇ ಬೀಗ ತೆಗೆದು ಮನೆ ಒಳನುಗ್ಗಿದ ಕಳ್ಳರು ಬೀರುವಿನಲ್ಲಿದ್ದ ರೂ. 45 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಸಮೀಪದ ಮೂದರವಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸುನಿಲ್ ಕುಮಾರ್ ಆಚಾರ್ ಬೆಳಿಗ್ಗೆ ಮಕ್ಕಳಿಬ್ಬರನ್ನು ಶಾಲೆಗೆ ಕಳುಹಿಸಿದ ನಂತರ ಪತ್ನಿ ಮನೆಗೆ ಬೀಗ ಹಾಕಿ ಕೀಯನ್ನು ಮುಂದಿನ ಕಂಬದ ಬಳಿ ಇರಿಸಿ ಕೂಲಿ ಕೆಲಸಕ್ಕೆಂದು ತೆರಳಿದ ಸಂದರ್ಭ ಘಟನೆ ನಡೆದಿದೆ.

ಸಂಜೆ ಮಕ್ಕಳನ್ನು ಕರೆದುಕೊಂಡು ಸುನಿಲ್‍ಕುಮಾರ್ ಪತ್ನಿಯೊಂದಿಗೆ ಮನೆಗೆ ಬಂದು ಬೀಗ ತೆಗೆದು ಒಳ ಹೋದಾಗ ಬೀರುವಿನಲ್ಲಿ ಬಾಗಿಲು ತೆರೆದಿರುವದು ಗೋಚರಿಸಿದೆ. ಡ್ರಾಯರ್ ತೆರೆದಿದ್ದು ಅದರಲ್ಲಿ ಇಟ್ಟಿದ್ದ ಚಿನ್ನದ 2 ಜತೆ ಓಲೆ-ಜುಮುಕಿ, ಮಾಟಿ, ಚಿನ್ನದ ಬ್ರಾಸ್‍ಲೆಟ್, ಬೆಳ್ಳಿ ಕಾಲು ಚೈನ್, ಬೆಳ್ಳಿದೀಪ ಹಾಗೂ ನಗದು ರೂ. 450 ಕಳುವಾಗಿರುವದು ಕಂಡುಬಂದಿದೆ.

ಕಳವು ಮಾಡಿದ ಆರೋಪಿಯನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವಂತೆ ಸುನಿಲ್ ಕುಮಾರ್ ಆಚಾರ್ ದೂರು ನೀಡಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.