ಮಡಿಕೇರಿ, ಜೂ. 2: ತಲಕಾವೇರಿ - ಭಾಗಮಂಡಲ ತೀರ್ಥ ಕ್ಷೇತ್ರಕ್ಕೆ ಬರುವ ಭಕ್ತರ ಸಹಿತ ಯಾತ್ರಾರ್ಥಿಗಳಿಂದ ಅಲ್ಲಿನ ಗ್ರಾ.ಪಂ. ಪ್ರಮುಖರು ವಾಹನಗಳನ್ನು ರಸ್ತೆಯಲ್ಲಿ ಅಡ್ಡ ಹಾಕಿ ನಿಲುಗಡೆ ಶುಲ್ಕದ ಹೆಸರಿನಲ್ಲಿ ಅಕ್ರಮ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.
ಕೊಡಗು ಏಕೀಕರಣ ರಂಗದಿಂದ ದೂರು ಸಲ್ಲಿಸುವದರೊಂದಿಗೆ ಯಾವದೇ ನಿಲುಗಡೆ ವ್ಯವಸ್ಥೆ ಅಥವಾ ವಾಹನಗಳಲ್ಲಿ ಬರುವ ಯಾತ್ರಾರ್ಥಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸದಿದ್ದರು ಗ್ರಾ.ಪಂ.ನಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಗಮನ ಸೆಳೆದಿದ್ದು, ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿದೆ.
ಮೂಲಗಳ ಪ್ರಕಾರ ಭಾಗಮಂಡಲ-ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ, ಜಿಲ್ಲಾ ಆಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳಿಗೆ ಹಾಗೂ ತೀರ್ಥ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಂದ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ವಸೂಲಿ ಮಾಡುತ್ತಿರುವದು ಕಾನೂನು ಬಾಹಿರವೆಂದು ಏಕೀಕರಣ ರಂಗದ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಜಿಲ್ಲಾಡಳಿತದಿಂದ ಗ್ರಾ.ಪಂ.ನಿಂದ ವಾಹನ ನಿಲುಗಡೆ ಶುಲ್ಕ ವಸೂಲಿ ಮಾಡದಂತೆ ಸಂಬಂಧಪಟ್ಟವರಿಗೆ ನಿರ್ದೇಶಿಸಿ ದ್ದರೂ, ಬಳಿಕ ಟೆಂಡರ್ ಪ್ರಕ್ರಿಯೆಯೊಂದಿಗೆ ನ್ಯಾಯಾಲಯದ ಆದೇಶ ಪ್ರಕಾರ ಒಂದು ವರ್ಷದ ಮಟ್ಟಿಗೆ ವಾಹನ ನಿಲುಗಡೆ ಶುಲ್ಕ ಪಡೆಯಲು ಗ್ರಾ.ಪಂ. ಆಡಳಿತ ಅನುಮತಿ ಹೊಂದಿಕೊಂಡಿತ್ತು.
ಆ ಮೇರೆಗೆ ಕಳೆದ ಮಾರ್ಚ್ 31ಕ್ಕೆ ಗ್ರಾ.ಪಂ. ಅವಧಿ ಮುಗಿದಿದೆಯಾದರೂ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಕಾನೂನು ಬಾಹಿರವಾಗಿ ಮತ್ತೆ ರಸ್ತೆಯಲ್ಲೇ ವಾಹನಗಳನ್ನು ಅಡ್ಡಗಟ್ಟಿ ಕಳೆದ ಎರಡು ತಿಂಗಳಿನಿಂದ ಹಣ ವಸೂಲಿ ಮಾಡುತ್ತಿರುವದಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತಗೊಂಡಿದೆ.
ಈ ಕಾರಣಕ್ಕಾಗಿ ಏಕೀಕರಣ ರಂಗದ ಪ್ರಮುಖರು ಸಂಬಂಧಿಸಿದ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವದರೊಂದಿಗೆ ಅಕ್ರಮ ವಸೂಲಿ ವಿರುದ್ಧ ಕಾನೂನು ಕ್ರಮದ ಭರವಸೆ ನೀಡಿದ್ದಾರೆ ಎಂದು ಏಕೀಕರಣ ರಂಗದ ಪ್ರಮುಖ ತಮ್ಮು ಪೂವಯ್ಯ ಖಚಿತಪಡಿಸಿದ್ದಾರೆ. ರಂಗದಿಂದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆ ಮತ್ತು ತಾ.ಪಂ. ಆಡಳಿತ ಅಧಿಕಾರಿಗೆ ಸೂಕ್ತ ಕ್ರಮಕ್ಕೆ ಕೋರಲಾಗಿದೆ ಎಂದು ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ.