ಕುಶಾಲನಗರ, ಜೂ. 1: ಖಾಸಗಿ ಬಸ್ ಒಂದು ಬ್ರೇಕ್ ವೈಫಲ್ಯದಿಂದ ಅಂಗಡಿ ಮಳಿಗೆಗೆ ನುಗ್ಗಿದ್ದು ಪಾದಚಾರಿಯೊಬ್ಬ ಮೃತಪಟ್ಟ ದುರ್ಘಟನೆ ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಕುಶಾಲನಗರ ಗುಂಡುರಾವ್ ಬಡಾವಣೆಯ ಯುವಕ ರಾಜೇಶ್ (17) ಸ್ಥಳದಲ್ಲೇ ಮೃತಪಟ್ಟಿದ್ದು, ಬಸ್ ಚಾಲಕ ಮೋಹನ್ ತೀವ್ರ ಗಾಯಗೊಂಡು ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕೊಂಡೊಯ್ಯಲಾಗಿದೆ. ಬಸ್ ರಿಪೇರಿಗೆಂದು ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬ್ರೇಕ್ ವೈಫಲ್ಯದ ಮಾಹಿತಿ ದೊರೆತ ಬಸ್‍ನ ಕ್ಲೀನರ್ ಬಸ್‍ನಿಂದ ಹೊರಕ್ಕೆ ಜಿಗಿದು ಅಪಾಯದಿಂದ ಪಾರಾಗಿದ್ದಾನೆ.

ಐಬಿ ರಸ್ತೆಯಿಂದ ಮುಖ್ಯರಸ್ತೆಗೆ ಬರುತ್ತಿದ್ದ ಖಾಸಗಿ ಬಸ್ (ಕೆಎ.19.ಬಿ.9469) ಏಕಾಏಕಿ ಚಾಲಕನ ಹತೋಟಿಗೆ ಸಿಗದೆ ಮುಖ್ಯರಸ್ತೆಯಲ್ಲಿ ಎದುರು ಭಾಗದಲ್ಲಿದ್ದ ರಂಗನಾಥ ಎಂಟರ್‍ಪ್ರೈಸಸ್ ಅಂಗಡಿ ಮಳಿಗೆಗೆ ನುಗ್ಗಿ ನಿಂತಿದೆ. ಡಿಕ್ಕಿಯಾದ ರಭಸಕ್ಕೆ ರಸ್ತೆ ಬದಿಯಲ್ಲಿ ತೆರಳುತ್ತಿದ್ದ ನಾಗರಿಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೂ ರಾಜೇಶ್ ಬಸ್‍ಗೆ ಸಿಲುಕಿದ್ದಾನೆ. ಎದೆ, ಮತ್ತಿತರ ಭಾಗಗಳಿಗೆ ತೀವ್ರ ಗಾಯಗಳುಂಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತನ ಜೊತೆಗಿದ್ದ ಇಬ್ಬರು ಅಪಘಾತದಿಂದ ತಪ್ಪಿಸಿಕೊಂಡಿದ್ದಾರೆ. ಮೃತ ರಾಜೇಶ್ ಗುಂಡುರಾವ್ ಬಡಾವಣೆಯ ನಿವಾಸಿ ಗೋಪಿ ಎಂಬವರ ಪುತ್ರನಾಗಿದ್ದು ಪಟ್ಟಣದ ಹಣ್ಣಿನ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ. (ಮೊದಲ ಪುಟದಿಂದ) ಊಟಕ್ಕೆ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದ್ದು ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

ಮೃತ ಯುವಕ ಸಮೀಪದಲ್ಲಿದ್ದ ಹಣ್ಣಿನ ಅಂಗಡಿಯಲ್ಲಿ ಸಹಾಯಕ ನಾಗಿದ್ದು ಆಗಷ್ಟೆ ಅಂಗಡಿ ಮಾಲೀಕ ಮಸೀದಿಗೆ ತೆರಳಿದ ಹಿನ್ನೆಲೆಯಲ್ಲಿ ತಾನು ತನ್ನ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಶುಕ್ರವಾರ ವಾದ್ದರಿಂದ ಭಾರೀ ಸಂಖ್ಯೆಯಲ್ಲಿ ಮುಸಲ್ಮಾನರು ಪ್ರಾರ್ಥ ನೆಗೆ ತೆರಳುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದ್ದು ಅಚ್ಚರಿಯ ರೀತಿಯಲ್ಲಿ ಪಾರಾಗುವದರೊಂದಿಗೆ ಭಾರೀ ದುರಂತ ತಪ್ಪಿದೆ ಎನ್ನಬಹುದು.

ಈ ಸಂದರ್ಭ ಸಂಚಾರ ವ್ಯವಸ್ಥೆ ಸಂಪೂರ್ಣ ತೊಡಕಾಗಿ ಅಂದಾಜು 1 ಗಂಟೆ ಕಾಲ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ಥಳಕ್ಕೆ ವೃತ್ತ ನಿರೀಕ್ಷಕ ಕ್ಯಾತೆಗೌಡ, ಸಂಚಾರಿ ಠಾಣಾಧಿಕಾರಿ ನವೀನ್‍ಗೌಡ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿ ದಂತೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರತಿಭಟನೆ: ಮೃತ ಯುವಕನ ಕುಟುಂಬ ಸದಸ್ಯರು ಘಟನೆಗೆ ಆಕ್ರೋಷ ವ್ಯಕ್ತಪಡಿಸಿದ್ದು ಸಾವಿಗೆ ಕಾರಣವಾದ ಬಸ್‍ನ ಮಾಲೀಕ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದು ಸರಕಾರಿ ಆಸ್ಪತ್ರೆ ಎದುರುಗಡೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ರಸ್ತೆಯಲ್ಲಿ ತೆರಳುತ್ತಿದ್ದ ಖಾಸಗಿ ಬಸ್‍ಗಳನ್ನು ತಡೆಯಲು ಯತ್ನಿಸಿದ ಸಂದರ್ಭ ಪೊಲೀಸರು ಮಧ್ಯ ಪ್ರವೇಶಿಸಿ ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು.