ಮಡಿಕೇರಿ, ಜೂ. 1: ಮೋದೂರು, ಕಡಗದಾಳು, ಹೆರೂರು ಸುತ್ತಮುತ್ತ ಸುಳಿದಾಡುತ್ತಾ, ಕಾಫಿ ತೋಟಗಳಲ್ಲಿ ರೈತರ ಕೃಷಿ ಫಸಲು ನಾಶಗೊಳಿಸುತ್ತಿರುವ ಸುಮಾರು 17 ಕಾಡಾನೆಗಳ ಹಿಂಡನ್ನು ಮೀನುಕೊಲ್ಲಿ ಅರಣ್ಯದೊಳಗೆ ಹಿಮ್ಮೆಟ್ಟಿಸಲು ಕಾರ್ಯಾಚರಣೆ ನಡೆಸಲಾಯಿತು.ಸುಂಟಿಕೊಪ್ಪ ಸುತ್ತಮುತ್ತಲಿನ ಈ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಾವಳಿ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ದೊಂದಿಗೆ ಇಲಾಖೆ ಅಧಿಕಾರಿಗಳ ಗಮನ ಸೆಳೆದಿದ್ದರು. ಈ ಸಂಬಂಧ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಅವರ ಗಮನ ಸೆಳೆದಿದ್ದರು.ಆ ಬಗ್ಗೆ ಕೆಳ ಹಂತದ ಅಧಿಕಾರಿ ಗಳೊಂದಿಗೆ ಚರ್ಚಿಸಿರುವ ಡಿಎಫ್‍ಓ ಮಂಜುನಾಥ್, ಕಾಫಿ ತೋಟಗಳಲ್ಲಿ ಹಲಸು, ಮಾವು, ಅತ್ತಿ ಹಣ್ಣು, ಬಾಳೆಯನ್ನು ನಾಶಗೊಳಿಸುತ್ತಾ ಆಹಾರಕ್ಕಾಗಿ ಸುಳಿದಾಡುತ್ತಿರುವ ಕಾಡಾನೆ ಹಿಂಡನ್ನು ಮೀನುಕೊಲ್ಲಿ ಅರಣ್ಯದತ್ತ ಹಿಮ್ಮೆಟ್ಟಿಸಲು ಸೂಚಿಸಿದ್ದಾರೆ.

ಹೀಗಾಗಿ ಇಂದು ಅರಣ್ಯ ಇಲಾಖೆಯ ವಿವಿಧ ಅಧಿಕಾರಿಗಳ ತಂಡ 50ಕ್ಕೂ ಅಧಿಕ ಸಿಬ್ಬಂದಿ ಗಳೊಂದಿಗೆ ವಿವಿಧ ದಿಕ್ಕುಗಳಲ್ಲಿ ನಾಕಾಬಂಧಿ ನಡೆಸುವ ಮೂಲಕ ದುಬಾರೆ ದಾಟಿಸಿ ಮೀನುಕೊಲ್ಲಿ ಅರಣ್ಯದತ್ತ ಕಾಡಾನೆಗಳನ್ನು ಓಡಿಸಲು ಮುಂದಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಅರಣ್ಯಾಧಿ ಕಾರಿಗಳಾದ ಚಿಣ್ಣಪ್ಪ, ಅರುಣ್, ರಂಜನ್ ಚಂಗಪ್ಪ ಸೇರಿದಂತೆ ಹೆಚ್ಚಿನ ಅರಣ್ಯ ಸಿಬ್ಬಂದಿ ಪಾಲ್ಗೊಂಡು ಕಾಡಾನೆಗಳನ್ನು ಮೀನುಕೊಲ್ಲಿ ಅರಣ್ಯದತ್ತ ಹಿಮ್ಮೆಟ್ಟಿಸಲು ಶ್ರಮಿಸಿದರು.

ಕಳೆದ ಅನೇಕ ದಿನಗಳಿಂದ ಸುಮಾರು 14 ಕಾಡಾನೆಗಳ ಹಿಂಡು ಸಾರ್ವಜನಿಕವಾಗಿ ಕಾಣಿಸಿಕೊಂಡು ಭಯದ ವಾತಾವರಣೆ ಸೃಷ್ಟಿಸಿದ್ದವು. ಇಂದು ಕಾರ್ಯಾಚರಣೆ ವೇಳೆ ಬೇರೆ ಬೇರೆ ದಿಕ್ಕುಗಳಲ್ಲಿ ಬೀಡು ಬಿಟ್ಟಿದ್ದ 17 ಕಾಡಾನೆಗಳು ಗೋಚರಿಸಿದ್ದು, ತೋಟದೊಳಗಿನಿಂದ ಹಿಮ್ಮೆಟ್ಟಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.