ಮಡಿಕೇರಿ, ಜೂ. 1: ಕೊಡಗಿನ ಕುಲಮಾತೆ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಆಕೆ ಉದ್ಭವಿಸಿದ ಪವಿತ್ರ ಕುಂಡಿಕೆಯ ಜೀರ್ಣೋದ್ಧಾರ ಕೆಲಸ ಸಮರ್ಪಕವಾಗಿ ಆಗಿದೆ. ಕಳೆದ 12 ವರ್ಷಗಳ ಹಿಂದೆ ಕ್ಷೇತ್ರದ ದೇವತೆಗಳಾದ ಮಹಾಗಣಪತಿ ಮತ್ತು ಅಗಸ್ತ್ಯೇಶ್ವರ ದೇಗುಲಗಳ ಜೀರ್ಣೋದ್ಧಾರ ನಡೆದ ಸಂದರ್ಭ ಕಾವೇರಿ ಕುಂಡಿಕೆಯ ಕೆಲಸವನ್ನೂ ಕೂಡ ಶಾಸ್ತ್ರೋಕ್ತವಾಗಿಯೇ ನಿರ್ವಹಿಸಲಾಗಿತ್ತು ಎಂಬದಾಗಿ ಆಗಿನ ಪುನರ್ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷರಾಗಿದ್ದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ “ಶಕ್ತಿ” ಯೊಂದಿಗೆ ತಮ್ಮ ದೈವಾನುಭವವನ್ನು ಹಂಚಿಕೊಂಡಿದ್ದಾರೆ.

ಇದೀಗ ಕ್ಷೇತ್ರದಲ್ಲಿ 12 ವರ್ಷಗಳ ಬಳಿಕ ಬ್ರಹ್ಮ ಕಲಶ ನೆರವೇರಿಸುವ ಸಲುವಾಗಿ ಅಷ್ಟಮಂಗಲ ಪ್ರಶ್ನೆಯನ್ನು ನಡೆಸಲಾಗುತ್ತಿದೆ. ಈ ಸಂದರ್ಭ ಕ್ಷೇತ್ರದಲ್ಲಿ ನಿರ್ವಹಿಸಬೇಕಾದ ದೈವಿಕ ಕಾರ್ಯಗಳಿಗೆ ಮಾರ್ಗದರ್ಶನ ಪಡೆಯಲಾಗುತ್ತಿದೆ. ಕುಂಡಿಕೆ ವಿಚಾರ ಚರ್ಚೆಗೆ ಬಂದಾಗ ಕೆಲವೊಂದು ಸಂಶಯಗಳು ಎದುರಾಗಿದೆ. ಈ ಬಗ್ಗೆ ಯಾವದೇ ಆತಂಕ ಬೇಡ ಎಂದು ಮೊಣ್ಣಪ್ಪ ತಿಳಿಸಿದ್ದಾರೆ. ಆಗ ಕ್ಷೇತ್ರದ ಹಿರಿಯ ತಂತ್ರಿಗಳಾಗಿದ್ದ ಈಗ ದಿವಂಗತರಾಗಿರುವ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ ಅವರ ಸಮ್ಮುಖದಲ್ಲಿಯೇ ಕುಂಡಿಕೆ ಕೆಲಸ ನಡೆದಿದೆ. ಆದರೆ, ಆ ಕೆಲಸವನ್ನು ಕೈಗೆತ್ತಿಕೊಳ್ಳುವ

(ಮೊದಲ ಪುಟದಿಂದ) ಮುನ್ನ ಕುಂಡಿಕೆ ಹಿಂಬದಿಯಲ್ಲಿ ಅಡ್ಡಲಾಗಿ ಒಂದು “ಬೀಮ್” ನಿರ್ಮಿಸಲಾಗಿತ್ತು. ಕ್ಷೇತ್ರ ತಂತ್ರಿಯವರು ಇದಕ್ಕೆ ತೀವ್ರ ಅಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ನೀರಿನ ಮೂಲಕ್ಕೆ ಧಕ್ಕೆಯಾಗುತ್ತದೆ. ಅದನ್ನು ತೆಗೆಸಿದರೆ ಮಾತ್ರ ತಾನು ಕುಂಡಿಕೆಯ ದುರಸ್ತಿ ಕೆಲಸದಲ್ಲಿ ಪಾಲ್ಗೊಳ್ಳುವದಾಗಿ ಅವರು ಅಸಮಾಧಾನದಿಂದಲೇ ಹೊರ ನಡೆದಿದ್ದರು.

ಇದರಿಂದ ಎಚ್ಚೆತ್ತುಕೊಂಡ ಇಂಜಿನಿಯರ್ ವಿಭಾಗದ ಪ್ರಮುಖರು ಬಳಿಕ “ಬೀಮ್” ಅನ್ನು ತೆಗೆದು ಹಾಕಿದರು. ಇದರಿಂದ ಕುಂಡಿಕೆ ಕೆಲಸಕ್ಕೆ ನಿರಾಳವಾಯಿತು ಬಳಿಕ ತಂತ್ರಿಯವರು ಕುಂಡಿಕೆ ಕೆಲಸ ನಿರ್ವಹಣೆಯ ಉಸ್ತುವಾರಿ ವಹಿಸಿಕೊಂಡರು. ಅದಕ್ಕೂ ಮುನ್ನ ಪರಿಣಿತ ಭೂವಿಜ್ಞಾನಿಗಳನ್ನು ಕರೆಸಲಾಯಿತು.

ವಿಜ್ಞಾನಿಗಳ ಸಲಹೆ, ಮಾರ್ಗದರ್ಶನದಿಂದ ಹಾಗೂ ಶಾಸ್ತ್ರೋಕ್ತ ಕ್ರಮದಿಂದ ಕುಂಡಿಕೆಯ ಕೆಲಸ ಪ್ರಾರಂಭಿಸಲಾಯಿತು. ರಾಜ್ಯದ ಲೋಕೋಪಯೋಗಿ ಇಲಾಖಾ ಮುಖ್ಯ ಅಭಿಯಂತರರಾಗಿದ್ದ (ಈಗ ನಿವೃತ್ತ) ಮೂಲತ: ತಲಕಾವೇರಿಯವರೇ ಆದ ಟಿ.ಡಿ.ಮನಮೋಹನ್ ಹಾಜರಿದ್ದರು. ವಿಶೇಷವಾಗಿ ಲ್ಯಾಟರೈಟ್ ಕೆಂಪು ಕಲ್ಲುಗಳನ್ನು ಕ್ರಮಬದ್ಧವಾಗಿ ಅಳವಡಿಸಲಾಯಿತು. 11/2 x 11/2 ಅಡಿ ಅಳತೆಯ ಕಲ್ಲುಗಳನ್ನು ತರಿಸಿ ಶಾಸ್ತ್ರೋಕ್ತ ಕ್ರಮದಲ್ಲಿ ತಂತ್ರಿಗಳು, ಭೂವಿಜ್ಞಾನಿಗಳು, ಇಂಜಿನಿಯರ್‍ಗಳ ಮಾರ್ಗದರ್ಶನದಲ್ಲಿ ಕಲ್ಲುಗಳನ್ನು ಜೋಡಿಸಲಾಯಿತು. ಆಗ ಕುಂಡಿಕೆಯ ಒಳ ಭಾಗ ಸೀಸ ಪದಾರ್ಥಗಳು, ಚಿನ್ನದ ನಾಣ್ಯಗಳು ಕಂಡುಬಂದವು ಅವುಗಳನ್ನು ತೆಗೆಯಲಾಯಿತು. ಕೆಳ ಭಾಗದಲ್ಲಿ ಹೂಳೆತ್ತÀ್ತಲಾಯಿತು. ಆಗ ನೀರಿನ ಒರತೆ ಕ್ಷೀಣವಾಗಿದ್ದುದು ಕಂಡುಬಂದಿತು. ಎಲ್ಲವನ್ನೂ ಶುದ್ಧೀಕರಿಸಿ ಕ್ರಮ ಬದ್ಧವಾಗಿ ಕಲ್ಲುಗಳನ್ನು ಜೋಡಿಸುತ್ತಿದ್ದಂತೆ ನೀರಿನ ಒರತೆ ಹೆಚ್ಚಾಗತೊಡಗಿತು. ಮೂರು ದಿನಗಳ ಕಾಲ ಕ್ಷೇತ್ರ ದರ್ಶನಕ್ಕೆ ಪ್ರವೇಶ ನಿಷಿದ್ಧಗೊಳಿಸಿ ಅತ್ಯಂತ ಜಾಗರೂಕತೆಯಿಂದ ಕುಂಡಿಕೆ ಕೆಲಸ ನಿರ್ವಹಿಸಲಾಗಿದೆ ಎಂದು ಮೊಣ್ಣಪ್ಪ ವಿವರಿಸಿದರು.

ಮತ್ತೆ ಈ ಕುಂಡಿಕೆಯನ್ನು ಜೀರ್ಣೋದ್ಧಾರ ಮಾಡುವ ಅಗತ್ಯವಿಲ್ಲ. ಈ ಬಗ್ಗೆ ಗೊಂದಲ ಬೇಡ ಎಂದು ಅವರು ಸಲಹೆಯತ್ತಿದ್ದಾರೆ.

ಸ್ನಾನದ ಕೊಳ ಮತ್ತು ಕುಂಡಿಕೆಗೆ ಸಂಪರ್ಕವಿದೆ. ಕುಂಡಿಕೆಯ ಕೆಲಸ ನಿರ್ವಹಿಸುವಾಗ ಇದು ಸ್ಪಷ್ಟ ಗೋಚರವಾಗಿದೆ. ಕೊಳದಲ್ಲಿ ನೀರು ಕಡಿಮೆಯಾದರೆ ಕುಂಡಿಕೆಯಲ್ಲಿಯೂ ನೀರು ಕಡಿಮೆಯಾಗುವದು ಸಹಜ. ಹೀಗಾಗಿ ಬೇಸಿಗೆಯಲ್ಲಿ ಮೊದಲಿನಿಂದಲೂ ನೀರಿನ ಪ್ರಮಾಣ ತಗ್ಗಿರುತ್ತದೆ. ಕೊಳದಲ್ಲಿನ ನೀರಿನ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದು ಮೊಣ್ಣಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕ್ಷೇತ್ರದ ಅರ್ಚಕರಿಂದಲೇ ಪೂಜೆಯಾಗಲಿ

ಅನ್ನದಾತೆ ಕಾವೇರಿಯ ಸನ್ನಿಧಿಯಲ್ಲಿ ಮಾತೆ ಕಾವೇರಿಗೆ ಸಂಬಂಧಿಸಿದ ಸ್ತೋತ್ರ ಪಠನಗಳ ಮೂಲಕವೇ ಅರ್ಚಕರಿಂದ ಭಕ್ತಿ ಭಾವದಲ್ಲಿ ಪೂಜಾದಿಗಳು ನೆರವೇರಬೇಕು. ಕಾವೇರಿ ಪುರಾಣ ದಲ್ಲಿಯೂ ಈ ಸ್ತೋತ್ರಗಳ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಅಗಸ್ತ್ಯೇಶ್ವರ ಮತ್ತು ಗಣಪತಿ ಗುಡಿಗಳಲ್ಲಿಯೂ ಕ್ರಮಬದ್ಧವಾಗಿ ಪೂಜೆ ನಡೆಯಬೇಕು. ಅಲ್ಲದೆÉ, ಕ್ಷೇತ್ರಕ್ಕೆ ಸಂಬಂಧಿಸಿದ ಅರ್ಚಕರೇ ಪೂಜೆ ನೆರವೇರಿಸಬೇಕು. ಇದರಲ್ಲಿ ಲೋಪವಿರಬಾರದು ಎಂದು ಈ ಹಿಂದೆ ಕೇಳಲಾಗಿದ್ದ ಅಷ್ಟ ಮಂಗಲ ಪ್ರಶ್ನೆಯಲ್ಲಿಯೂ ಉಲ್ಲೇಖವಾಗಿತ್ತು. ಆದರೆ, ಕೆÀಲವು ಅರ್ಚಕರು ತಮ್ಮ ಸರದಿಯಲ್ಲಿ ಹೊರಗಿನಿಂದ ಬಾಡಿಗೆ ಅರ್ಚಕರನ್ನು ಕರೆ ತರುತ್ತಿದ್ದಾರೆ. ಇದರಿಂದಾಗಿ ಸಾಂಪ್ರದಾಯಿಕ ಪೂಜೆಯಲ್ಲಿ ಲೋಪವುಂಟಾಗುತ್ತಿದೆ. ಅಲ್ಲದೆ ಕ್ಷೇತ್ರಕ್ಕೆ ಅಗತ್ಯವಾದ ಮಂತ್ರ ಪಠನದಲ್ಲಿ ವ್ಯತ್ಯಾಸವಾಗುತ್ತಿದೆ ಈ ದಿಸೆÀಯಲ್ಲಿ ಅರ್ಚಕರು ಗಮನ ಹರಿಸಿ ಯಾವದೇ ಲೋಪವುಂಟಾಗದಂತೆ ಪೂಜಾದಿ ಗಳನ್ನು ನಡೆಸುವಂತೆಯೂ ಮೊಣ್ಣಪ್ಪ ಸಲಹೆಯಿತ್ತಿದ್ದಾರೆ.