ಮಡಿಕೇರಿ, ಜೂ. 2: ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಕಾವೇರಿ ಮತ್ತು ಬಂಗಾಳ ಕೊಲ್ಲಿ ಸಂಗಮಿಸುವ ಪೂಂಪ್ ಹಾರ್‍ವರೆಗೆ ಹಮ್ಮಿಕೊಳ್ಳಲಾಗಿದ್ದ ವಾಹನ ಜಾಥಾ ಯಶಸ್ವಿಯಾಗಿದ್ದು, ಕಾವೇರಿ ನದಿಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸಂಘಟನೆ ಸಫಲವಾಗಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 24 ರಂದು ತಲಕಾವೇರಿಯಿಂದ ಆರಂಭಗೊಂಡ ಜಾಥಾ ಜಲಾನಯನ ಪ್ರದೇಶದ ಜಿಲ್ಲೆಗಳಾದ ಕೊಡಗು, ಮೈಸೂರು, ಮಂಡ್ಯ, ಧರ್ಮಪುರಿ, ಸೇಲಂ, ಈರೋಡ್, ತಿರುಚರಾಪಳ್ಳಿ, ತಂಜಾವೂರು, ಶ್ರೀರಂಗಂ ಮೂಲಕ ಹಾದು ಅಂತಿಮವಾಗಿ ಕಾವೇರಿ ಮತ್ತು ಬಂಗಾಳಕೊಲ್ಲಿ ಸಂಗಮಿಸುವ ಪೂಂಪ್‍ಹಾರ್‍ನಲ್ಲಿ ಸಮಾರೋಪ ಗೊಂಡಿತು ಎಂದರು. ಕಾವೇರಿ ನದಿ ಹರಿಯುವ ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವದರೊಂದಿಗೆ ಪುರಾತನ ದೇವಾಲಯಗಳಲ್ಲಿ ತಂಗುವ ಮೂಲಕ ಕಾವೇರಿ ಜಲಾನಯನ ಪ್ರದೇಶದ ಜನರಲ್ಲಿ ಕಾವೇರಿ ನದಿಯ ಬಗ್ಗೆ ಧರ್ಮ ಪ್ರಜ್ಞೆಯ ಜಾಗೃತಿ ಮೂಡಿಸಲಾಗಿದೆ ಎಂದು ನಾಚಪ್ಪ ತಿಳಿಸಿದರು.

ಸೃಷ್ಟಿ, ನೀರು ಜೀವನಕ್ಕೆ ಅವಿನಾಭಾವ ನಂಟಿದ್ದು, ಇಂದು ಅಂತಹ ಪುಣ್ಯನದಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿಗೆ ತಲಪಿದೆ. ಅದನ್ನು ಸಂರಕ್ಷಿಸಬೇಕಾದರೆ ಅಸಾಧಾರಣವಾದ ಕ್ರಮ ಕೈಗೊಳ್ಳಬೇಕಾಗುತ್ತದೆ. ಕಾವೇರಿ ನದಿ ವೇದ ಕಾಲದ ಏಳು ಪವಿತ್ರ ಜೀವನದಿಗಳಲ್ಲಿ ಒಂದಾಗಿದ್ದು, ವೇದ ಕಾಲದ ಸಪ್ತ ನದಿಗಳ ಕುರಿತಾಗಿರುವ ಸಂಸ್ಕøತ ಶ್ಲೋಕದಲ್ಲಿ ಇದನ್ನು ಪ್ರಸ್ತಾಪಿಸಲಾಗಿದೆ. ಭಾರತದಲ್ಲೂ ಹಿಂದೂ ದೇವತೆಗಳಿಗೆ ನೀಡಿರುವ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನವನ್ನು ಗಂಗಾ, ಯಮುನಾ ನದಿಗಳಿಗೆ ಉತ್ತರಾಖಂಡ ಸರಕಾರ ಹಾಗೂ ನರ್ಮದೆಗೆ ಮಧ್ಯಪ್ರದೇಶ ಸರಕಾರಗಳು ನೀಡಿದೆ. ಎಲ್ಲಾ ನದಿಗಳಿಗೆ ತನ್ನದೇ ಆದ ಧರ್ಮಪ್ರಜ್ಞೆ ಮತ್ತು ಮಹತ್ವವಿದ್ದು, ಕರ್ನಾಟಕ ರಾಜ್ಯದಲ್ಲಿ ಕಾವೇರಿ ನದಿಯನ್ನು ಮಾತೃಸ್ಥಾನದಲ್ಲಿಡುವ ಕಾರ್ಯ ನಡೆದಿಲ್ಲವೆಂದು ನಾಚಪ್ಪ ಬೇಸರ ವ್ಯಕ್ತಪಡಿಸಿದರು.

ಇತರ ರಾಜ್ಯಗಳಲ್ಲಿ ನದಿ ಮೂಲಗಳ ಬಗ್ಗೆ ರಾಜಕೀಯ ಬದ್ಧತೆಯನ್ನು ಪ್ರದರ್ಶಿಸಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಆ ರೀತಿಯ ಪೂರಕ ವಾತಾವರಣಗಳು ಸೃಷ್ಟಿಯಾಗುತ್ತಿಲ್ಲ. ಇದೇ ಕಾರಣಕ್ಕೆ ಕಾವೇರಿ ನದಿಗೂ ಶಾಸನ ಬದ್ಧ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸುತ್ತಿರುವದಾಗಿ ಅವರು ಸ್ಪಷ್ಟಪಡಿಸಿದರು.

ವಿಶ್ವಸಂಸ್ಥೆಯ ನದಿ ನೀರು ಹಂಚಿಕೆ ನ್ಯಾಯ ಮಂಡಳಿಯಿಂದ ಹಿಡಿದು ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಜ್ಞಾಪನಾಪತ್ರ ರವಾನಿಸಿದ್ದು, ಇದೀಗ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಾವೇರಿಯ ಉಗಮಸ್ಥಾನವಾದ ತಲಕಾವೇರಿಯಿಂದ ಸಮುದ್ರ ಸೇರುವ ಪೂಂಪ್‍ಹಾರ್‍ವರೆಗೆ ವಾಹನ ಜಾಥಾ ಆಯೋಜಿಸಿ ಯಶಸ್ವಿಯಾಗಿದ್ದೇವೆ. ತಮಿಳುನಾಡಿನ ವಿವಿಧೆಡೆ ಜಾಥಾ ತೆರಳಿದಾಗ ಅಲ್ಲಿನ ಜನ ಅತಿ ಗೌರವದಿಂದ ನಮ್ಮನ್ನು ಬರಮಾಡಿಕೊಂಡಿದ್ದಾರೆ. ಕಾವೇರಿ ಮಾತೆಯ ಬಗ್ಗೆ ಭಕ್ತಿಭಾವವನ್ನು ಪ್ರದರ್ಶಿಸಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದ ನಾಚಪ್ಪ ಜೀವನದಿಯ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದರು.

ಪೂಂಪ್‍ಹಾರ್‍ವರೆಗೆ ನಡೆದ ಜಾಗೃತಿ ಜಾಥಾದಲ್ಲಿ ಪ್ರಮುಖ ಮೂರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ನಿರ್ಣಯ: ಗಂಗೆ, ಯಮುನೆ ಮತ್ತು ನರ್ಮದೆಯ ಮಾದರಿಯಲ್ಲಿ ಜೀವನದಿ ಕಾವೇರಿಗೂ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ನೀಡಬೇಕು. 1956 ರವರೆಗೆ ಕೊಡಗು ಹೊಂದಿದ್ದ ಭೂ ರಾಜಕೀಯ ನೆಲೆಗೆ ಸ್ವಾಯತ್ತತೆಯನ್ನು ಕಲ್ಪಿಸುವದರ ಮೂಲಕ ಲೋಕ ಕಲ್ಯಾಣಕ್ಕಾಗಿ ಕಾವೇರಿ ನದಿ ಯಾವದೇ ತಾರತಮ್ಯವಿಲ್ಲದೆ ನಿರಂತರವಾಗಿ ಹರಿಯುವಂತೆ ಸಮೃದ್ಧಿಗೊಳಿಸಲು ಅವಕಾಶ ಕಲ್ಪಿಸಬೇಕು. ಕಾವೇರಿ ನದಿ ಹುಟ್ಟುವ ಪವಿತ್ರ ತಲಕಾವೇರಿ ಮತ್ತು ಬಂಗಾಳಕೊಲ್ಲಿ ಸಂಗಮಿಸುವ ಪೂಂಪ್‍ಹಾರ್ ಪ್ರದೇಶವನ್ನು ಪವಿತ್ರ ತೀರ್ಥ ಕ್ಷೇತ್ರವೆಂದು ಪರಿಗಣಿಸಬೇಕೆಂದು ನಿರ್ಣಯ ಕೈಗೊಂಡಿರುವದಾಗಿ ಎನ್.ಯು. ನಾಚಪ್ಪ ತಿಳಿಸಿದರು.

ಕಾವೇರಿ ನದಿ ಪಾತ್ರಗಳು ಬತ್ತಿ ಹೋದರೆ ವಿನಾಶದ ಮುನ್ಸೂಚನೆ ಎಂದು ಅಭಿಪ್ರಾಯಪಟ್ಟ ಅವರು ಕಾವೇರಿ ನದಿಯನ್ನು ಉಳಿಸಲು ಸಿಎನ್‍ಸಿ ಹೋರಾಟದೊಂದಿಗೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕರೆ ನೀಡಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಮೂಕೊಂಡ ದಿಲೀಪ್, ಚಂಬಂಡ ಜನತ್ ಕುಮಾರ್ ಹಾಗೂ ಪುಲ್ಲೇರ ಕಾಳಪ್ಪ ಉಪಸ್ಥಿತರಿದ್ದರು.