ಮಡಿಕೇರಿ, ಜೂ. 1 : ದಕ್ಷಿಣ ಕೊಡಗಿನ ಶ್ರೀಮಂಗಲ ಸಮೀಪದ ಟಿ. ಶೆಟ್ಟಿಗೇರಿಯ ಮಾಯಣಮಾಡ ಮಂದಯ್ಯ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಗೆ ದಾಖಲಾದರೆ ವಿದ್ಯಾರ್ಥಿಗಳಿಗೆ ರು.1000 ಪ್ರೋತ್ಸಾಹಧನ ದೊರಕುತ್ತದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಶಾಲೆಯ ದಾನಿಗಳಿಂದಲೇ ಈ ಯೋಜನೆ ಮಾಡಲಾಗಿದೆ.ದಾನಿಗಳಾದ ಮಾಯಣಮಾಡ ಎಂ. ಪೂಣಚ್ಚ ಅವರು ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಪ್ರೋತ್ಸಾಹಧನ ವಿತರಿಸಲು ಮುಂದಾಗಿದ್ದಾರೆ. ಪ್ರಸ್ತುತ ಶಾಲೆಯಲ್ಲಿ ಒಟ್ಟು 88 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ವರ್ಷ 8ನೇ ತರಗತಿಗೆ 25 ಮಕ್ಕಳು ದಾಖಲಾಗಿದ್ದರು. ಇದೀಗ 2018-19ನೇ ಸಾಲಿನ ಶೈಕ್ಷಣಿಕ ಅವಧಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ (ಮೊದಲ ಪುಟದಿಂದ) ವಿದ್ಯಾರ್ಥಿಗಳನ್ನು ದಾಖಲು ಮಾಡುವ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಲಾಗುತ್ತಿದೆ.2001ರಲ್ಲಿ ದಾನಿಗಳಾದ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಮಾಯಣಮಾಡ ಪೂಣಚ್ಚ ಅವರು ತಮ್ಮ ತಂದೆ ಮಾಯಣಮಾಡ ಮಂದಯ್ಯ ಹೆಸರಿನಲ್ಲಿ ರೂ. 22 ಲಕ್ಷ ವೆಚ್ಚದಲ್ಲಿ ಹಾಗೂ ಸರ್ಕಾರದ ಅನುದಾನದಿಂದ ಶಾಲೆಯನ್ನು ಸ್ಥಾಪನೆ ಮಾಡಿದ್ದರು. ಶಾಲೆಯನ್ನು ಅಂದಿನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಹೆಚ್.ವಿಶ್ವನಾಥ್ ಅವರು ಉದ್ಘಾಟಿಸಿದ್ದರು. ಮುಜರಾಯಿ ಇಲಾಖೆಯ ಸಚಿವೆ ಸುಮಾವಸಂತ್ ಅಧ್ಯಕ್ಷತೆ ವಹಿಸಿದ್ದರು. ಆರಂಭದಲ್ಲಿ ದಾನಿಗಳು ಇಲ್ಲಿ ಶಿಕ್ಷಕರನ್ನು ನಿಯೋಜಿಸಿ ಅವರಿಗೆ ಎರಡು ವರ್ಷ ವೇತನವನ್ನೂ ನೀಡಿ ಬಡ ಮಕ್ಕಳ ಶಿಕ್ಷಣಕ್ಕೆ ಕೈಜೋಡಿಸಿದ್ದರು. ನಂತರದಲ್ಲಿ ಸರ್ಕಾರದಿಂದ ಹೆಚ್ಚಿನ ಶಿಕ್ಷಕರನ್ನು ಶಾಲೆಗೆ ನಿಯೋಜಿಸಲಾಯಿತು.

ದಾನಿಗಳಾದ ಪೂಣಚ್ಚ ಅವರ ಪುತ್ರ ಪ್ರಶಾಂತ್ ಅವರು ಆಸ್ಟ್ರೇಲಿಯಾದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದು, ಅವರ ಸಲಹೆಯಂತೆ 8ನೇ ತರಗತಿಗೆ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ರೂ.1000 ನೀಡಲಾಗುತ್ತಿದೆ. ಇದೀಗ ಶಾಲೆ ಆರಂಭವಾಗಿದ್ದು, ಶಾಲೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಸದ್ಯದಲ್ಲೇ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ.