ಮಡಿಕೇರಿ, ಜೂ. 2: ಸಾರಥಿ 4 ತಂತ್ರಾಂಶ ಬಳಸಿ ಮನೆಯಿಂದಲೇ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ರಾಷ್ಟ್ರದಾದ್ಯಂತ ಇಂದಿನಿಂದ ಜಾರಿಗೊಂಡಿದೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಗಂಗಾಧರ ತಿಳಿಸಿದ್ದಾರೆ.

ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನವಾಗಿ ಅಭಿವೃದ್ಧಿ ಪಡಿಸಿರುವ ತಂತ್ರಾಂಶ ಕುರಿತು ಮಾಹಿತಿ ನೀಡಿದರು. ವಾಹನ ಚಾಲನಾ ಪರವಾನಿಗೆ (ಡಿಎಲ್) ಅಥವಾ ಕಲಿಕಾ ಪರವಾನಿಗೆ (ಎಲ್‍ಎಲ್‍ಆರ್) ಪಡೆಯಲು ಬಯಸುವ ಸಾರ್ವಜನಿಕರು ಇನ್ನು ಮುಂದೆ ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಹಿಂದೆ “ಸಾರಥಿ 3” ಆ್ಯಪ್ ಬಳಸಲಾಗುತ್ತಿತ್ತು. ಅದರಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದರೂ ದಾಖಲಾತಿಗಳ ಪರಿಶೀಲನೆಗೆ ಕಚೇರಿಗೆ ಅಲೆಯಬೇಕಾಗಿತ್ತು. ಈಗ ಎಲ್ಲ ದಾಖಲೆಗಳನ್ನು ಆನ್‍ಲೈನ್‍ನಲ್ಲೇ ಸಲ್ಲಿಸಬಹುದು. ಬಳಿಕ ಅರ್ಜಿದಾರ ತನಗೆ ಅನುಕೂಲವಾದ ಸಮಯ ಹಾಗೂ ದಿನವನ್ನು ಇಲಾಖೆ ಪರೀಕ್ಷೆಗೆ ಕಾಯ್ದಿರಿಸಬಹುದು ಎಂದು ಮಾಹಿತಿ ನೀಡಿದರು.

ಸಾರಥಿ 4ರಲ್ಲಿ ಡಿಎಲ್ ಅಥವಾ ಎಲ್‍ಎಲ್‍ಆರ್ ಪಡೆಯಲು ಅರ್ಜಿ ಸಲ್ಲಿಸಿದ ನಂತರದಲ್ಲಿ ಪರೀಕ್ಷೆ ತೆಗೆದುಕೊಳ್ಳುವದು ಕಡ್ಡಾಯವಾಗಿದ್ದು, ಆನ್‍ಲೈನ್‍ನಲ್ಲಿ ಕನಿಷ್ಟ 15 ಪ್ರಶ್ನಾವಳಿಗೆ ಉತ್ತರಿಸಬೇಕು. ಈ ಪ್ರಕ್ರಿಯೆಯಲ್ಲಿ ಕನಿಷ್ಟ 10 ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸಿ ತೇರ್ಗಡೆ ಹೊಂದಿದಲ್ಲಿ ವಾಹನ ಚಾಲನಾ ಪರವಾನಿಗೆ ಸಿಗಲಿದೆ ಎಂದರು. ಸಾರಥಿ 4 ಸಂಬಧಿಸಿದಂತೆ hಣಣಠಿs://ಠಿಚಿಡಿivಚಿhಚಿಟಿ.gov.iಟಿ ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವನ್ನು ಕಲ್ಪಿಸಲಾಗಿದ್ದು, ಈ ಮೂಲಕ ಇಲಾಖೆಯನ್ನು ಕಾಗದ ಮುಕ್ತ ವಹಿವಾಟುವನ್ನಾಗಿ ಪರಿವರ್ತಿಸುವ ಪ್ರಕ್ರಿಯೆಗೆ ಮುಂದಾಗಿದ್ದು, ಈ ವ್ಯವಸ್ಥೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಹಕಾರ ಆಗಲಿದೆ ಎಂದು ಅವರು ತಿಳಿಸಿದರು. ಅರ್ಜಿದಾರರು ಚಾಲನಾ ಪರವಾನಿಗೆ ಅರ್ಜಿ ಸಲ್ಲಿಸಿದ ದಿನಾಂಕದಿಂದ ಚಾಲನಾ ಪರವಾನಿಗೆ ಪಡೆಯುವವರೆಗೂ ಮೊಬೈಲ್‍ನಲ್ಲೇ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು. ಮೋಟಾರು ವಾಹನ ನಿರೀಕ್ಷಕ ಜವರಯ್ಯ, ರೀಟಾ ಇತರರು ಇದ್ದರು.