ಸೋಮವಾರಪೇಟೆ, ಜೂ. 2: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಯೋಗ ವಿಜ್ಞಾನಗಳ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ, ಉಜಿರೆಯ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಧರ್ಮಸ್ಥಳ ಮಂಜುನಾಥ ಶಿಕ್ಷಣ ಸಂಸ್ಥೆ, ಶಾಂತಿವನ ಟ್ರಸ್ಟ್ ಹಾಗೂ ಸೋಮವಾರಪೇಟೆ ನಿರಂತರ ಯೋಗ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸೋಮವಾರಪೇಟೆಯಲ್ಲಿ ಉಚಿತ ಯೋಗ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಇಲ್ಲಿನ ಪ್ರಜಾಪಿತ ಬ್ರಹ್ಮ ಕುಮಾರೀಸ್ ವಿದ್ಯಾಲಯ ಆವರಣದಲ್ಲಿ ಶಿಬಿರಕ್ಕೆ ಚಾಲನೆ ನೀಡಿದ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ವೈದ್ಯೆ ಮಂಜುಶ್ರೀ ಮಾತನಾಡಿ, ನಿತ್ಯ ಧ್ಯಾನ ಹಾಗೂ ಯೋಗ ಮಾಡುವದರಿಂದ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಯಾಗುವದ ರೊಂದಿಗೆ ಜೀವನದ ಕೊನೆಯವರೆಗೆ ಹರ್ಷೋಲ್ಲಾಸದಿಂದಿರಬಹುದು ಎಂದರು. ಯೋಗಕ್ಕೆ ಪುರಾತನ ಇತಿಹಾಸವಿದ್ದು, ಯೋಗದ ಬಗ್ಗೆ ಈಗಲೂ ಕೂಡ ಸಂಶೋಧನೆಗಳು ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಹಿನ್ನೆಲೆ ಜೂನ್ 21ನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ವಿಶ್ವವೇ ಆಚರಿಸುತ್ತಿರುವದು ಪ್ರಶಂಸನೀಯ ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಮಾತನಾಡಿ, ಆಧುನಿಕತೆಗೆ ಮಾರು ಹೋಗಿ, ಜಂಜಾಟದ ಜೀವನ ನಡೆಸುತ್ತಿರುವ ಮನುಷ್ಯರಿಗೆ ಯೋಗ, ಧ್ಯಾನಗಳಿಂದ ಮಾತ್ರ ನೆಮ್ಮದಿ ಕಾಣಲು ಸಾಧ್ಯ ಎಂದರು. ವೇದಿಕೆಯಲ್ಲಿ ಸ್ಥಳೀಯ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಮಚಂದ್ರ, ವೈದ್ಯಕೀಯ ತಜ್ಞ ಡಾ. ಸಂಗಮೇಶ್, ಸಹಾಯಕ ಯೋಗ ತರಬೇತುಗಾರ್ತಿ ಡಾ. ಸೋನಿ, ನಿರಂತರ ಯೋಗ ಸಂಸ್ಥೆಯ ಕಿಬ್ಬೆಟ್ಟ ಗಣೇಶ್, ಜೇಸಿ ಸಂಸ್ಥೆಯ ಮಾಜಿ ವಲಯ ಉಪಾಧ್ಯಕ್ಷೆ ಎ.ಆರ್. ಮಮತ, ರೋಟರಿ ಸಂಸ್ಥೆಯ ಪದಾಧಿಕಾರಿ ಎ. ಮಂಜು ನೀಲಕಂಠ ಉಪಸ್ಥಿತರಿದ್ದರು.