ವೀರಾಜಪೇಟೆ, ಜೂ. 2: ವೀರಾಜಪೇಟೆ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ನಿರಂತರವಾಗಿ ಕಡಿತಗೊಳ್ಳುತ್ತಿದ್ದು, ಗ್ರಾಹಕರು ಪರದಾಡುವ ಸ್ಥಿತಿಯಲ್ಲಿದ್ದಾರೆ. ವೀರಾಜಪೇಟೆ ವಿಭಾಗದಲ್ಲಿ ಮುಂದಿನ 15 ದಿನಗಳಲ್ಲಿ ವಿದ್ಯುತ್ ಸಮಸ್ಯೆ ಸರಿಪಡಿಸದಿದ್ದರೆ ವೀರಾಜಪೇಟೆಯ ಸೆಸ್ಕ್ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವದು ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ತಿಂಗಳಿಂದ ವೀರಾಜಪೇಟೆ ವಿಭಾಗಕ್ಕೆ ಒಳಪಡುವ 30 ಕ್ಕೂ ಅಧಿಕ ಗ್ರಾಮಗಳಿಗೆ ವಿದ್ಯುತ್ ಸಂಪರ್ಕದಲ್ಲಿ ಅಡಚಣೆಯಗುತ್ತಿದೆ. ಇದರಿಂದ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಕಾಕೋಟುಪರಂಬು, ಅರಮೇರಿ, ಮೈತಾಡಿ, ಚಾಮಿಯಾಲ ಗ್ರಾಮಗಳಲ್ಲಿ ರಸ್ತೆಯ ಬದಿಯಲ್ಲಿ ವಿದ್ಯುತ್ ಸಂಪರ್ಕದ ತಂತಿಗಳು ತೀರಾ ಕೆಳಮಟ್ಟದಲ್ಲಿದ್ದು ಮೃತ್ಯುವಿಗೆ ಆಹ್ವಾನ ನೀಡುತ್ತಿದೆ. ಸಹಾಯಕ ಅಭಿಯಂತರರಿಗೆ ಲಿಖಿತ ಮನವಿ ಸಲ್ಲಿಸಿದರೂ ತಮಗೇನೂ ಅರಿಯದ ರೀತಿಯಲ್ಲಿ ವರ್ತಿಸುತ್ತಾರೆ.

ಚಿಕ್ಕಪೇಟೆಯಿಂದ ಬಿಟ್ಟಂಗಾಲದವರೆಗೆ ಮುಖ್ಯ ರಸ್ತೆಗಳಲ್ಲಿ ಮಾತ್ರ ಹಳೆಯ ಕಂಬಗಳನ್ನು ಬದಲಾಯಿಸಲಾಗಿದೆ. ಗ್ರಾಮಗಳಲ್ಲಿ ಕಂಬಗಳು 200 ಮೀಟರ್‍ಗಳಿಗೊಂದು ಇದ್ದು ಅಲ್ಲಿಯೇ ವಿದ್ಯುತ್ ಸಂಪರ್ಕದ ಸಮಸ್ಯೆ ಉಂಟಾಗುತ್ತಿದೆ. ಇದನ್ನು ಇಲಾಖೆಗೆ ತಿಳಿಸಿದರೆ ಪ್ರತಿಕ್ರಿಯೆ ಇಲ್ಲ. ಈ ಬಗ್ಗೆ ದೂರು ನೀಡಲಾಗುವದು ಎಂದು ಹೇಳಿದರು.

ನಗರ ಸಮಿತಿ ಅಧ್ಯಕ್ಷ ಎಸ್.ಹೆಚ್. ಮಂಜುನಾಥ್ ಮಾತನಾಡಿ, ವಿದ್ಯುತ್ ಕಡಿತದಿಂದಾಗಿ ಪಟ್ಟಣ ಪಂಚಾಯಿತಿಗೂ ನಲ್ಲಿ ನೀರು ಪೂರೈಕೆಯಲ್ಲಿ ನಿರಂತರ ವ್ಯತ್ಯಯ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ನಾಗರಿಕರು ಪಟ್ಟಣ ಪಂಚಾಯಿತಿಯ ಅಧಿಕಾರಿಗಳನ್ನು ನಿಂದಿಸುತ್ತಿದ್ದಾರೆ. ಅಧಿಕಾರಿಗಳು ಪಟ್ಟಣ ಪಂಚಾಯಿತಿಯ ನೀರು ಪೂರೈಕೆಗೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಸಂಘಟನೆಯ ಸದಸ್ಯ ಲೋಕೇಶ್ ಮಾತನಾಡಿ, ವಿದ್ಯುತ್ ಸಂಪರ್ಕದ ಅಡಚಣೆಯಿಂದಾಗಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್, ಎಕ್ಸರೇ ಇತರ ಅಗತ್ಯ ವಿದ್ಯುತ್ ಚಾಲಿತ ಕೇಂದ್ರಗಳು ಮುಚ್ಚುವ ಪರಿಸ್ಥಿತಿ ಎದುರಾಗುತ್ತಿದೆ. ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ಯಾವದೇ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲದಂತಾಗಿದೆ. ಸಾರ್ವಜನಿಕ ಸೇವಾ ಸಂಸ್ಥೆಗಳು ನಿರ್ದಿಷ್ಟವಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಗೋಷ್ಠಿಯಲ್ಲಿ ಸಂಘಟನೆಯ ನಗರ ಸಂಚಾಲಕ ಮತ್ಯಾಸ್, ನೆಲ್ಲಮಕ್ಕಡ ಶಿವಪ್ಪ, ಸಂದೇಶ್ ಉಪಸ್ಥಿತರಿದ್ದರು.