ಸೋಮವಾರಪೇಟೆ, ಮೇ 31: ತಮ್ಮ ಸಮುದಾಯದ ಆಚಾರ ವಿಚಾರಗಳನ್ನು ಉಳಿಸಿಕೊಳ್ಳು ವದರೊಂದಿಗೆ, ಜನಾಂಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಆದಿದ್ರಾವಿಡ ಸಮಾಜ ಬಾಂಧವರು ಚಿಂತನೆ ಹರಿಸಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು.
ಕೊಡಗು ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಎಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಸಮೀಪದ ಮಾದಾಪುರ ಶ್ರೀಮತಿ ಚೆನ್ನಮ್ಮ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ 3ನೇ ವರ್ಷದ ಜಿಲ್ಲಾಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮುದಾಯದ ಸಂಘಟನೆಗಳು ಆಯಾ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಪೂರ್ವಿಕರು ಉಳಿಸಿ ಬೆಳೆಸಿದ ಸಂಸ್ಕøತಿ, ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೂ ತಲಪಿಸಬೇಕು. ಸಮುದಾಯದ ಯಾವೊಬ್ಬ ಮಗುವೂ ಶಿಕ್ಷಣದಿಂದ ವಂಚಿತರಾಗದಂತೆ ಜಾಗ್ರತೆ ವಹಿಸಬೇಕು ಎಂದರು.
ಸಮುದಾಯಗಳಲ್ಲೇ ಒಡಕುಂಟು ಮಾಡುವ ಯತ್ನಗಳೂ ನಡೆಯುತ್ತಿದ್ದು, ಯಾವ ಸಂಘಟನೆ ತಮ್ಮ ಸಮಾಜಕ್ಕೆ ಒಳಿತನ್ನು ಬಯಸುತ್ತದೆ ಎಂಬದನ್ನು ಮನಗಂಡು ಆದಿದ್ರಾವಿಡ ಸಮಾಜ ಬಾಂಧವರು ಮುಂದಡಿಯಿಡಬೇಕು. ಸಮಾಜಗಳ ನಡುವೆ ಕಂದಕ ಸೃಷ್ಟಿಸುವ ಸಂಘಟನೆಗಳಿಂದ ದೂರ ಇರಬೇಕು ಎಂದು ಕಿವಿಮಾತು ನುಡಿದರು.
ಕಾರ್ಯಕ್ರಮದಲ್ಲಿ ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮ ಚಂದ್ರ, ಮಾಜಿ ಸದಸ್ಯ ನವೀನ್ ಡಿಸೋಜ, ಮಾದಾಪುರ ಗ್ರಾ.ಪಂ. ಸದಸ್ಯ ಉಮೇಶ್, ಸಂಘದ ಜಿಲ್ಲಾಧ್ಯಕ್ಷ ಜನಾರ್ಧನ್, ಉಪಾಧ್ಯಕ್ಷ ಕುಶಾಲಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷ ಶಿವಪ್ಪ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ರಾಮು, ಕ್ರೀಡಾ ಸಮಿತಿ ಅಧ್ಯಕ್ಷ ವಿಶ್ವನಾಥ್, ಜಿಲ್ಲಾ ಕಾರ್ಯದರ್ಶಿ ಸುದೀಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
3ನೇ ವರ್ಷದ ಕ್ರೀಡಾಕೂಟದ ಅಂಗವಾಗಿ ನಡೆಸಲಾದ ಕ್ರಿಕೆಟ್, ಫುಟ್‍ಬಾಲ್, ವಾಲಿಬಾಲ್, ಹಗ್ಗಜಗ್ಗಾಟ, ಗುಡ್ಡಗಾಡು ಓಟ ಸೇರಿದಂತೆ ಇನ್ನಿತರ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.