ಮರಗೋಡು, ಮೇ 31: ಕಳೆದ ಶುಕ್ರವಾರ ರಾತ್ರಿ ಜಿಲ್ಲೆಯಾದ್ಯಂತ ಭಾರೀ ಬಿರುಗಾಳಿ ಸಹಿತ ಮಳೆ ಬಿದ್ದು ಇನ್ನಿಲ್ಲದ ಅವಾಂತರ ಸೃಷ್ಟಿಯಾಗಿತ್ತು. ಈ ಸಂದರ್ಭ ಮರಗೋಡು ಗ್ರಾಮ ವ್ಯಾಪ್ತಿಯಲ್ಲೇ 10ಕ್ಕೂ ಅಧಿಕ ಕಡೆ ಮರಗಳು ಉರುಳಿ ಬಿದ್ದು ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಈ ಘಟನೆ ನಡೆದು ಒಂದು ವಾರವಾದರೂ ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನೂ ವಿದ್ಯುತ್ ವ್ಯವಸ್ಥೆ ಸರಿಪಡಿಸಲು ಚೆಸ್ಕಾಂಗೆ ಸಾಧ್ಯವಾಗಿಲ್ಲ. ವಿದ್ಯುತ್ ಇಲ್ಲದೆ ಮರಗೋಡು ಗ್ರಾಮ ವಾಪ್ತಿ ಜನರ ಬದುಕು ದಯನೀಯವಾಗಿದೆ.

ಬಹಳಷ್ಟು ಜನರು ಪಂಚಾಯಿತಿ ಪೂರೈಸುವ ಕುಡಿಯುವ ನೀರನ್ನೇ ಅವಲಂಬಿಸಿದ್ದಾರೆ. ಆದರೆ ಇಲ್ಲಿನ ಟ್ರಾನ್ಸ್‍ಫಾರ್ಮರ್ ಕೆಲಸ ನಿಲ್ಲಿಸಿರುವದರಿಂದ ಕುಡಿಯಲೂ ನೀರಲ್ಲದೆ ಪರದಾಡುತ್ತಿದ್ದಾರೆ. ಸ್ನಾನವಂತೂ ಎರಡು ಮೂರು ದಿನಗಳಿಗೊಮ್ಮೆ ಮಾಡುವಂತಾಗಿದೆ. ಮತ್ತೆ ಕೆಲವರು ಸಂಬಂಧಿಕರ ಮನೆಗೆ ತೆರಳಿ ಸ್ನಾನ ಮಾಡಿ ಬರುತ್ತಿದ್ದಾರೆ!. ಟಿವಿ, ಫ್ರಿಡ್ಜು, ಮಿಕ್ಸಿ, ವಾಷಿಂಗ್ ಮೆಷೀನ್, ವೈಫೈ, ಮೋಟಾರ್, ಯುಪಿಎಸ್ ಎಲ್ಲವೂ ಕೆಲಸವಿಲ್ಲದೆ ಖಾಲಿ ಬಿದ್ದಿವೆ. ಕೆಲ ಸ್ಥಿತಿವಂತರು ಬಾಡಿಗೆ ಜನರೇಟರ್ ತಂದು ಕೆಲ ಗಂಟೆಗಳ ಕಾಲ ಬಾವಿಯಿಂದ ನೀರೆತ್ತಿಕೊಳ್ಳುತ್ತಿದ್ದಾರೆ. ಎಪಿಎಲ್ ಕಾರ್ಡುಗಳಿಗೆ ಸೀಮೆ ಎಣ್ಣೆ ಕೂಡ ದೊರೆಯುವದಿಲ್ಲವಾದ್ದರಿಂದ ಮೊಂಬತ್ತಿಗಳ ಮಸುಕು ಬೆಳಕಲ್ಲೇ ಜನರು ಮಗುಮ್ಮಾಗಿ ಕುಳಿತುಕೊಳ್ಳುವಂತಾಗಿದೆ.

ಖಾಲಿ ಬಿದ್ದಿರುವ ಹೋಂಸ್ಟೇಗಳು

ಮರಗೋಡು ವ್ಯಾಪ್ತಿಯಲ್ಲಿ ಏನಿಲ್ಲವೆಂದರೂ 30ಕ್ಕೂ ಅಧಿಕ ಹೋಂಸ್ಟೇಗಳಿವೆ. ಆದರೆ ವಿದ್ಯುತ್ ಮತ್ತು ನೀರಿಲ್ಲದೇ ಇರುವದರಿಂದ ಮಾಲೀಕರು ಹೋಂಸ್ಟೇಗಳಿಗೆ ಅತಿಥಿಗಳನ್ನು ಕರೆಸುವ ಧೈರ್ಯ ಮಾಡುತ್ತಿಲ್ಲ. ಹಾಗಾಗಿ ಕಳೆದ ಒಂದು ವಾರದಿಂದ ಹೋಂಸ್ಟೇಗಳು ಖಾಲಿ ಬಿದ್ದಿವೆ. ಜನರೇಟರ್ ವ್ಯವಸ್ಥೆ ಇರುವ ಒಂದೆರಡು ಹೋಂಸ್ಟೇಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ಬಹುತೇಕ ಹೋಂಸ್ಟೇಗಳು ಆರ್ಥಿಕ ನಷ್ಟ ಅನುಭವಿಸುತ್ತಿವೆ.

ಕೇವಲ ಒಂದು ಮಳೆಗೆ ಆದ ಅವಾಂತರವನ್ನೇ ಜಿಲ್ಲಾಡಳಿತಕ್ಕೆ ಸರಿಪಡಿಸಲಾಗಿಲ್ಲ. ಇನ್ನೂ ಮಳೆಗಾಲದಲ್ಲಿ ಮೂರು ತಿಂಗಳು ಹೇಗಪ್ಪಾ ಬದುಕು ಎಂದು ಜನರು ಚಿಂತೆ ಪಡುತ್ತಿದ್ದಾರೆ. ಈ ಸಮಸ್ಯೆ ಕುರಿತು ಚೆಸ್ಕಾಂ ಮುಖ್ಯ ಎಂಜಿನೀಯರ್ ಸೋಮಶೇಖರ್ ಅವರ ಗಮನ ಸೆಳೆದಾಗ, ಇಗಾಗಲೇ ಸರಿಪಡಿಸಿದ್ದೇವೆ ಎಂಬ ಉತ್ತರ ಸಿಕ್ಕಿತು. ಬಹುಶಃ ಕೆಳಹಂತದ ಸಿಬ್ಬಂದಿ ಅವರಿಗೆ ತಪ್ಪು ಮಾಹಿತಿ ನೀಡಿದ್ದಿರಬೇಕು. ಏಳು ದಿನಗಳಾದರೂ ಒಂದು ಗ್ರಾಮದ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸಲು ನಮ್ಮ ಆಡಳಿತ ವರ್ಗಕ್ಕೆ ಸಾಧ್ಯವಾಗಿಲ್ಲ ಎಂದಾದರೆ ಎಂತಹ ಒಂದು ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಎಂಬದೇ ಪ್ರಶ್ನೆಯಾಗಿದೆ.

- ಗೋಪಾಲ್ ಸೋಮಯ್ಯ