ಮಡಿಕೇರಿ, ಮೇ 31: ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಜಿಲ್ಲೆಯಾದ್ಯಂತ ಒಂದು ವಾರಗಳ ಕಾಲ ವಿವಿಧ ಹಂತದಲ್ಲಿ ‘ಪರಿಸರ ಜಾಗೃತಿ’ ಬಗ್ಗೆ ನಿರಂತರ ಕಾರ್ಯಕ್ರಮ ಆಯೋಜಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸೂಚನೆ ನೀಡಿದ್ದಾರೆ.

ವಿಶ್ವ ಪರಿಸರ ದಿನಾಚರಣೆ ಆಯೋಜನೆ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಿಸರ ದಿನಾಚರಣೆ ಪ್ರಯುಕ್ತ ಶಾಲಾ-ಕಾಲೇಜುಗಳಲ್ಲಿ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ಪರಿಸರ ದಿನಾಚರಣೆಯಂದು ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಣೆ ಮಾಡುವಂತೆ ಪರಿಸರ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಜಿಲ್ಲಾ, ತಾಲೂಕು ಮತ್ತು ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವದು ಹಾಗೂ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಈ ಸಂಬಂಧ ಪ್ರವಾಸಿ ಕೇಂದ್ರಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಚೆಕ್ ಪೋಸ್ಟ್‍ಗಳಲ್ಲಿ ದೊಡ್ಡ ನಾಮಫಲಕ ಅಳವಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಲಾ-ಕಾಲೇಜು, ಆಸ್ಪತ್ರೆ, ಕಚೇರಿಗಳು, ವೈದ್ಯಕೀಯ ಕಾಲೇಜು, ಚಿಕ್ಕಅಳುವಾರ ವಿಶ್ವ ವಿದ್ಯಾನಿಲಯ ಕೇಂದ್ರ, ರಾಜಾಸೀಟು, ನ್ಯಾಯಾಲಯ ಆವರಣ ಹೀಗೆ ವಿವಿಧ ಕಡೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಬೇಕು. ಜೊತೆಗೆ ಕಚೇರಿ ಸುತ್ತಮುತ್ತ ಶುಚಿತ್ವ ಕಾಪಾಡಬೇಕು ಎಂದು ತಿಳಿಸಿದರು.

ಅರಣ್ಯ ಹಾಗೂ ಪರಿಸರ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕೈಜೋಡಿಸಿ ಪರಿಸರ ಸಪ್ತಾಹ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಬೇಕು ಎಂದು ಸಲಹೆ ಮಾಡಿದರು. ಪ್ಲಾಸ್ಟಿಕ್‍ನ್ನು ಒಂದೆಡೆ ಸಂಗ್ರಹಿಸಿ, ಬೇರೆಡೆಗೆ ಸಾಗಿಸಬೇಕು. ಅದನ್ನು ಬಿಟ್ಟು ಬೆಂಕಿಗೆ ಹಾಕಿ ಹೊಗೆ ಕುಡಿದರೆ ಕ್ಯಾನ್ಸರ್ ಬರುವದು ಖಂಡಿತಾ ಎಂದು ಜಿಲ್ಲಾಧಿಕಾರಿ ಅವರು ಎಚ್ಚರಿಕೆ ನೀಡಿದರು.

ಯಾವದೇ ಕ್ಷೇತ್ರದಲ್ಲಿ ಸಾಮಾಜಿಕ ಹೊಣೆಗಾರಿಕೆ ಪ್ರತಿಯೊಬ್ಬರಲ್ಲಿ ಇದ್ದಾಗ ಮಾತ್ರ ಬದಲಾವಣೆ ಕಾಣಲು ಸಾಧ್ಯ. ಜೊತೆಗೆ ಸಮಾಜದಲ್ಲಿನ ಎಲ್ಲರಲ್ಲಿಯೂ ಭಯವೂ ಇರಬೇಕು. ಇಲ್ಲದಿದ್ದಲ್ಲಿ ಬದಲಾವಣೆ ಅಸಾಧ್ಯ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅರಿವು ಮೂಡಿಸಿ, ನಂತರ ಬಳಕೆ ಮಾಡುವದು ಮುಂದುವರೆದಲ್ಲಿ ಶುಲ್ಕ ಪಾವತಿಸಲು ಸೂಚಿಸಿ ಎಂದು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪರಿಸರ ಅಧಿಕಾರಿ ಗಣೇಶನ್ ಅವರು ಪರಿಸರ ದಿನಾಚರಣೆ ಬಗ್ಗೆ ಮಾತನಾಡಿ, ಪ್ರಸಕ್ತ ವರ್ಷ ಪರಿಸರ ದಿನಾಚರಣೆಯನ್ನು ಪರಿಣಾಮ ಕಾರಿಯಾಗಿ ಆಯೋಜಿಸಬೇಕಿದೆ. ಆ ನಿಟ್ಟಿನಲ್ಲಿ ಜೂನ್ 1 ರಂದು ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಭೆ ಆಹ್ವಾನಿಸಲಾಗಿದೆ ಎಂದು ಅವರು ತಿಳಿಸಿದರು.

‘ಕೊಡಗು ಜಿಲ್ಲೆಯ ನಡೆ ಪ್ಲಾಸ್ಟಿಕ್ ಇಲ್ಲದ ಕಡೆಗೆ’ ಆ ನಿಟ್ಟಿನಲ್ಲಿ ವಿಶ್ವ ಪರಿಸರ ದಿನಾಚರಣೆಯಂದು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಿಂದ ರಾಜಾಸೀಟುವರೆಗೆ ವಾಕಥಾನ್ ಮತ್ತು ಮ್ಯಾರಥಾನ್ ಏರ್ಪಡಿಸಲಾಗುವದು ಎಂದು ಗಣೇಶನ್ ಮಾಹಿತಿ ನೀಡಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಮಾತನಾಡಿ, ಸಾಮಾಜಿಕ ಅರಣ್ಯ ವಿಭಾಗದಲ್ಲಿ ಸುಮಾರು 13 ಲಕ್ಷ ಗಿಡಗಳು ಇದ್ದು, ಆಯಾಯ ವ್ಯಾಪ್ತಿಯಲ್ಲಿರುವ ನರ್ಸರಿಗಳಲ್ಲಿ ಸಸಿಗಳನ್ನು ಪಡೆಯ ಬಹುದಾಗಿದೆ ಎಂದು ತಿಳಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಿಸ್ತುರಾಜ ಅವರು ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆ ತಡೆ ಸಂಬಂಧ ಹಲವು ಸಲಹೆ ನೀಡಿದರು.

ಜಿ.ಪಂ. ಉಪ ಕಾರ್ಯದರ್ಶಿ ಬಾಬು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಮಂಜುಳಾ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆಂಚಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಬಾಲಕೃಷ್ಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜಗನ್ನಾಥ್, ಪೌರಾಯುಕ್ತೆ ಬಿ. ಶುಭಾ, ನಗರಾಭಿವೃದ್ಧಿ ಕೋಶದ ಎಇಇ ಸ್ವಾಮಿ, ಪ.ಪಂ. ಮುಖ್ಯಾಧಿಕಾರಿಗಳಾದ ಶ್ರೀಧರ, ಹೇಮಕುಮಾರ್, ತಾ.ಪಂ. ಇಒಗಳಾದ ಚಿಟ್ಟಿಯಪ್ಪ, ಜಯಣ್ಣ, ಲಕ್ಷ್ಮಿ, ತೋಟಗಾರಿಕಾ ಇಲಾಖೆಯ ಚಂದ್ರಶೇಖರ, ಸ್ವಚ್ಛ ಭಾರತ್ ಅಭಿಯಾನದ ಸಮಾಲೋಚಕರಾದ ಸೂರಜ್, ಪೆಮ್ಮಯ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಣಜೂರು ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಆಶಾ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ ಪರಿಸರ ಜಾಗೃತಿ ಸಂಬಂಧ ಮಾಹಿತಿ ನೀಡಿದರು.