ಕಾಲಕಾಲಕ್ಕೆ ವಸಂತನ ಆಗಮನ ನಮಗೆ ಕೊಡುವ ಉತ್ಸಾಹದಂತೆ. ಶಾಲೆಗಳ ಆರಂಭ ಕಾಲವೂ ಕೂಡಾ ಶೈಕ್ಷಣಿಕ ವರ್ಷದ ವಸಂತ ಕಾಲ. ಇದೀಗ 2018-19ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭದಲ್ಲಿದ್ದೇವೆ. ಮತ್ತೆ ಹೊಸ ಹೊಸ ಆಲೋಚನೆಗಳು, ಕ್ರಿಯಾಯೋಜನೆಗಳು, ಗುರಿಗಳು, ಹೊಸ ಹುರುಪು ಹೀಗೆ ಒಂದೇ... ಎರಡೇ...ಶಾಲೆಗಳೆಲ್ಲಾ ಶುಚಿಯಾಗಿ ಮಾವಿನ ಎಲೆಗಳ ತೋರಣಗಳಿಂದ ಅಲಂಕಾರಗೊಂಡು, ಬಾಳೆಗಿಡದ ಸಿಂಗಾರವು, ರಂಗವಲ್ಲಿಯ ಹೊಸ ವರ್ಷದ ಪ್ರಾರಂಭೋತ್ಸವದ ಚಿತ್ತಾರಗಳಿಂದ ಅಣಿಗೊಳ್ಳುತ್ತದೆ. ಕೆಲಕಾಲದ ವಿರಾಮದಿಂದ ಚೆನ್ನಾಗಿ ರಿಲಾಕ್ಸ್ ಆದ ಎಳೆ ಮನಸ್ಸುಗಳ ನವೋಲ್ಲಾಸ. ಹೊಸ ಬಟ್ಟೆ, ಚಪ್ಪಲಿ ತೊಟ್ಟು ಹೇಳಿದರೂ, ಕೇಳಿದರೂ ಮುಗಿಯದಷ್ಟು ವಿಶೇಷದ ಕಂತೆಗಳು. ಹೊಸ ಹೊಸ ವಿಚಾರಗಳು, ಅನುಭವಗಳ ಜೊತೆಗೆ ಹಿಂದಿನ ತರಗತಿ ಬಿಟ್ಟು ದೊಡ್ಡ ತರಗತಿಗೆ ಏರಿದ ಹೆಮ್ಮೆ ಅಥವಾ ಸ್ವಲ್ಪ ಖುಷಿಯ ಜಂಭವೋ?

ಇನ್ನು ಶಿಕ್ಷಕರ ಓಡಾಟವಂತೂ ನಿಜಕ್ಕೂ ವಸಂತ ಋತುವನ್ನು ಬರಮಾಡುವ ಹಾಗೆಯೇ. ಹೊಸವರ್ಷದ ಹೊಸತನದ ಪ್ರಫುಲ್ಲತೆಯನ್ನು ಮೈಗೂಡಿಸಿಕೊಳ್ಳುತ್ತಲೇ ಬಂದ ಮಕ್ಕಳನ್ನು ಮಾತನಾಡಿಸಿ, ವಿಶೇಷಗಳನ್ನು ವಿಚಾರಿಸುತ್ತಾ ಶಾಲೆಯನ್ನು ಮಕ್ಕಳೊಡನೆ ಸೇರಿ ಅಲಂಕರಿಸುವ ಸಂಭ್ರಮ. ಜೊತೆಗೆ ಮೊದಲ ದಿನದ ಸಿಹಿಯೂಟದ ಸಿದ್ಧತೆಯ ಸಡಗರ. (ಮೊದಲ ಪುಟದಿಂದ) ತರಗತಿ ಕೋಣೆ, ಶಾಲಾ ಕಛೇರಿಯನ್ನು ಸ್ವಚ್ಛಗೊಳಿಸುವ ಧಾವಂತ. ತರಗತಿ ವೇಳಾಪಟ್ಟಿಯಿಂದ ಪ್ರಾರಂಭವಾಗುವ ಮತ್ತೆಲ್ಲಾ ಪೂರ್ವ ಸಿದ್ಧತೆಗಳನ್ನು ಆರಂಭದ ಹುರುಪಿನೊಂದಿಗೆ ಸಲೀಸಾಗಿ ನೆರವೇರಿಸುವ ಉತ್ಸಾಹ.

ಕಳೆದ ಶೈಕ್ಷಣಿಕ ಸಾಲಿನ ಸಾಧಕ ಬಾಧಕಗಳನ್ನು ಮನದೊಳಗೆ ನ್ಯಾಯೀಕರಿಸಿ ಮುಂದೆ ಹೇಗೆ? ಏನು? ಎಂದು ಹೊಸ ಬದಲಾವಣೆಯನ್ನು ತರುವ ಪ್ರಯತ್ನದ ಯೋಜನೆಗಳು. ಈ ಕಳೆದ ಸಾಲಿನಲ್ಲಿ ನಿತ್ಯ ಪಠ್ಯಕ್ರಮದ ಜೊತೆಗೆ ಕಲಿಕೋತ್ಸವ, ಪ್ರತಿಭಾ ಕಾರಂಜಿ, ಕ್ರೀಡೋತ್ಸವ, ವಿಜ್ಞಾನಮೇಳ, ಪ್ರವಾಸ, ಆಕಾಶವಾಣಿ ಕಾರ್ಯಕ್ರಮ, ಮಕ್ಕಳ ಸಂತೆ, ವಸ್ತು ಪ್ರದರ್ಶನ, ಹಸ್ತ ಪ್ರತಿಗಳ ಬಿಡುಗಡೆ, ವಿವಿಧ ಸಂಘಗಳ ರಚನೆ ಮತ್ತು ಕಾರ್ಯಕ್ರಮ, ರಾಷ್ಟ್ರೀಯ ಹಬ್ಬಗಳು, ಶಾಲಾ ವಾರ್ಷಿಕೋತ್ಸವ ಅಬ್ಬಬ್ಬಾ...! ಎಷ್ಟೊಂದು ಚಟುವಟಿಕೆಗಳನ್ನು ಪೂರೈಸಿ ಯಶಸ್ವಿ ಕಂಡಿದ್ದೆವು?

‘ಥಿou hಚಿve ಣo ಜಡಿeಚಿm, ಥಿouಡಿ ಜಡಿeಚಿm ಛಿಚಿಟಿ ಛಿome ಣಡಿue’ ಎಂಬ ಕಲಾಂ ವಾಣಿಯಂತೆ ಈ ವರ್ಷವೂ ಅದೇನೇನೋ ಹೊಸ ಹೊಸ ಕನಸು. ಕುತೂಹಲದಿಂದ ಅರಳುವ ಕಣ್ಣುಗಳಿಗೆ ಮತ್ತಷ್ಟು ಕುತೂಹಲ ಉಣಬಡಿಸುವ ಬಯಕೆ. ಆರಂಭದ ಉತ್ಸಾಹ ವರ್ಷದ ಕೊನೆವರೆಗೂ ಇರಲಿ ಎಂಬ ಸ್ವಾಗತ.

ಪ್ರತಿವರ್ಷದಂತೆ ಯಾವದೇ ಎಡರು ತೊಡರುಗಳಿಲ್ಲದೆ ಸುಸೂತ್ರವಾಗಿ ಜವಬ್ದಾರಿಯನ್ನು ನಿಭಾಯಿಸುವ ಶಕ್ತಿ ಕೊಡಲಿ ಎಂಬ ಪ್ರಾರ್ಥನೆಯ ಜೊತೆಯಲ್ಲಿ ಆರೋಗ್ಯ ಭಾಗ್ಯವೂ ಕೂಡಾ.

ಎಲ್ಲರೂ ಒಟ್ಟಾಗಿ ಸೇರಿ ಈ ನವ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭೋತ್ಸವದ ತೇರನ್ನು ಒಟ್ಟಾಗಿ ಎಳೆಯೋಣ. ಕಳೆದ ಸಾಲಿನ ಫಲಿತಾಂಶ ಮೀರಿಸಿ ಮತ್ತಷ್ಟು ಹೆಜ್ಜೆಯನ್ನು ಮುಂದಕ್ಕಿಡೋಣ... ಈ ಸಾಲಿನ ಪ್ರತಿ ಹೆಜ್ಜೆಯಲ್ಲೂ ನಲಿವಿನ, ಗೆಲುವಿನ ಗೆಜ್ಜೆನಾದವಿರಲಿ.

?ಸುನಿತಾ ಲೋಕೇಶ್, ಕುಶಾಲನಗರ