ಮಡಿಕೇರಿ, ಮೇ 29: ಬೇಸಿಗೆ ರಜೆ ಮುಗಿದು ನಿನ್ನೆಯಿಂದಲೇ ಶಾಲೆಗಳು ಆರಂಭವಾಗಬೇಕಿತ್ತಾದರೂ, ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಇಂದಿನಿಂದ ಅಧಿಕೃತವಾಗಿ ಶಾಲೆಗಳು ಜಿಲ್ಲೆಯಲ್ಲಿ ಕಾರ್ಯಾರಂಭಗೊಂಡಿವೆ.ಮೊದಲ ದಿನವಾದ ಇಂದು ಒಟ್ಟು ಜಿಲ್ಲೆಯಲ್ಲಿ ಶೇ. 40 ರಷ್ಟು ಮಕ್ಕಳು ಹಾಜರಾಗಿದ್ದರು. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುಳಾ ಅವರು ‘ಶಕ್ತಿ’ಗೆ ಖಚಿತಪಡಿಸಿದ್ದಾರೆ. ವಿವಿಧೆಡೆ ಮಳೆಯಿಂದಾಗಿ ಹಾಜರಾತಿಯಲ್ಲಿ ಕುಸಿತ ಕಂಡುಬಂದಿದ್ದು, ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿರುವದಾಗಿ ಡಿಡಿಪಿಐ ತಿಳಿಸಿದ್ದಾರೆ.ಕೊಡಗಿನಲ್ಲಿ 167 ಪ್ರೌಢಶಾಲೆ ಹಾಗೂ 443 ಪ್ರಾಥಮಿಕ (ಮೊದಲ ಪುಟದಿಂದ) ಶಾಲೆಗಳಿದ್ದು, ಎಲ್ಲ ಶಾಲೆಗಳಲ್ಲೂ ಶಾಲಾ ಪ್ರಾರಂಭೋತ್ಸವವನ್ನು ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.ಕುಶಾಲನಗರ: ಸರಕಾರಿ ಶಾಲೆಗಳು ಹಲವು ಸಮಸ್ಯೆ ಹಾಗೂ ಸವಾಲುಗಳೊಂದಿಗೆ ಕಾರ್ಯನಿರ್ವಹಿಸುವದರೊಂದಿಗೆ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೊರಹೊಮ್ಮಿಸುವಲ್ಲಿ ಮಾದರಿಯಾಗುತ್ತಿದೆ ಎಂದು ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ರಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.2018-19ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳ ಕೊರತೆಯಿಂದ ಹಲವು ಸರಕಾರಿ ಶಾಲೆಗಳು ಈಗಾಗಲೆ ಮುಚ್ಚಲ್ಪಟ್ಟಿವೆ. ಇದರೊಂದಿಗೆ ಖಾಸಗಿ ಶಾಲೆಗಳ ಅನಾರೋಗ್ಯ ಪೈಪೋಟಿ ಕೂಡ ಸರಕಾರಿ ಶಾಲೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಟಿ. ಶ್ರೀನಿವಾಸ್, ಎರಡು ಶತಮಾನಗಳನ್ನು ಕಂಡ ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮುಂದಿನ ದಿನಗಳಲ್ಲಿ ಕೇವಲ ನೆನಪಾಗಿ ಉಳಿಯುವ ದಿನಗಳು ದೂರವಿಲ್ಲ. 2 ಸಾವಿರದಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಪ್ರಸಕ್ತ 350ಕ್ಕೆ ಕುಸಿದಿರುವದು ಅತ್ಯಂತ ವಿಷಾದನೀಯ ಸಂಗತಿ ಎಂದರು.

ಇದೇ ಸಂದರ್ಭ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳ ವಿತರಣೆ ನಡೆಯಿತು.

ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ನಸೀಮ, ಸದಸ್ಯೆ ಸಾಹಿನ, ಮುಖ್ಯ ಶಿಕ್ಷಕ ಪ್ರಕಾಶ್ ಮತ್ತಿತರರು ಇದ್ದರು.

ಸೋಮವಾರಪೇಟೆ: ಬೇಸಿಗೆ ರಜೆ ಮುಗಿದು ಇಂದು ಶಾಲೆಗಳು ಪ್ರಾರಂಭವಾಗಿದ್ದು, ಬ್ಯಾಗ್ ಹೆಗಲಿಗೇರಿಸಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಪದಾಧಿಕಾರಿಗಳು ನಗುಮುಖದೊಂದಿಗೆ ಬರಮಾಡಿಕೊಂಡರು.

ಶಾಲಾ ಗೇಟ್‍ಗಳಿಗೆ ತಳಿರು ತೋರಣ ಕಟ್ಟಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸುವ ಮೂಲಕ ಪ್ರಸಕ್ತ ಸಾಲಿನ ಶೈಕ್ಷಣಿಕ ತರಗತಿಗಳಿಗೆ ಸ್ವಾಗತ ಕೋರಿದರು. ನಿನ್ನೆಯಿಂದಲೇ ಶಾಲೆಗಳು ಪ್ರಾರಂಭವಾಗಬೇಕಿದ್ದರೂ, ಕರ್ನಾಟಕ ಬಂದ್‍ನಿಂದಾಗಿ ಹಲವಷ್ಟು ಶಾಲೆಗಳು ನಿನ್ನೆ ತೆರೆದಿರಲಿಲ್ಲ. ಈ ಹಿನ್ನೆಲೆ ಇಂದು ಬಹುತೇಕ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಸಮಾರಂಭ ನಡೆಯಿತು.

ಕೂಡಿಗೆ: ಕೂಡಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮ ಮತ್ತು ವಿಶೇಷ ದಾಖಲಾತಿ ಆಂದೋಲನಾ ಕಾರ್ಯಕ್ರಮ ನಡೆಯಿತು.

ಶಾಲೆಯ ಮುಖ್ಯ ಶಿಕ್ಷಕಿ ವಾಣಿ ವಿಶೇಷ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿ, ಉತ್ತಮ ಶಿಕ್ಷಣವನ್ನು ಪಡೆಯಲು ಸರ್ಕಾರಿ ಶಾಲೆಗೆ ಮಕ್ಕಳನ್ನು ಹೆಚ್ಚಾಗಿ ದಾಖಲಾತಿ ಮಾಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ನಂತರ ‘ನಮ್ಮ ನಡಿಗೆ ಶಾಲೆ ಕಡೆಗೆ’ ಎಂಬ ಘೋಷಣೆಯೊಂದಿಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಸಾರ್ವಜನಿಕರಲ್ಲಿ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡುವದರ ಬಗ್ಗೆ ಅರಿವು ಮೂಡಿಸಿದರು.

ಈ ಸಂದರ್ಭ ಸಹ ಶಿಕ್ಷಕಿ ಭಾಗ್ಯ, ವಿಜಯಲಕ್ಷ್ಮಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು ಇದ್ದರು.

ವೀರಾಜಪೇಟೆ: ಅನೇಕ ವರ್ಷಗಳಿಂದಲೂ ಸರಕಾರ ವಿವಿಧ ಯೋಜನೆಗಳ ಮೂಲಕ ಸರಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುತ್ತಿರುವದರಿಂದ ಶಾಲೆಗಳಿಗೆ ಉತ್ತಮ ಫಲಿತಾಂಶ ಬರುತ್ತಿದೆ. ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗೆ ಮುಕ್ತ ಮನಸ್ಸಿನಿಂದ ಸೇರಿಸಬಹುದು ಎಂದು ಸರ್ವ ಶಿಕ್ಷಣ ಅಭಿಯಾನದ ಬಿ.ಆರ್.ಪಿ. ಅಧಿಕಾರಿ ಜೈಸಿ ಹೇಳಿದರು.

ಶಾಲಾ ಪ್ರಾರಂಭೋತ್ಸವದ ಅಂಗವಾಗಿ ವಿದ್ಯಾಥಿಗಳನ್ನು ಶಾಲೆಗೆ ಸ್ವಾಗತಿಸಲು ಇಲ್ಲಿನ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಸರ್ವ ಶಿಕ್ಷಣ ಅಭಿಯಾನದಿಂದ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು ಮಾತನಾಡಿದರು.

ಅತಿಥಿಯಾಗಿ ಆಗಮಿಸಿದ್ದ ಜೂನಿಯರ್ ಕಾಲೇಜಿನ ಪ್ರೌಢಶಾಲೆ ಶಿಕ್ಷಕಿ ಪ್ರತೀಕ ಮಾತನಾಡಿ ವಿದ್ಯೆ ಎನ್ನುವದು ಮಾನವ ಜೀವನದ ಅಂತ್ಯದವರೆಗಿರುವ ಶಾಶ್ವತ ಸಂಪತ್ತು. ಸಮಾಜದಲ್ಲಿ ಇದನ್ನು ಪ್ರತಿಯೊಬ್ಬರು ಸಂಪಾದಿಸಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಫಿಲೋಮಿನ ನರೋನ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಸರ್ವ ಶಿಕ್ಷಣ ಅಭಿಯಾನದ ಅಜಿತ್, ವೆಂಕಟೇಶ್, ಅನುಸೂಯ, ಶಿಕ್ಷಕೆ ಪೂರ್ಣಿಮಾ ಉಪಸ್ಥಿತರಿದ್ದರು.

ಸಮಾರಂಭದ ನಂತರ ಶಾಲೆಗೆ ಹಾಜರಾದ ಎಲ್ಲ ಮಕ್ಕಳಿಗೆ ಅತಿಥಿಗಳು ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಿದರು.

ಮಡಿಕೇರಿ: ಬಿಳಿಗೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಶಾಲಾ ಆಡಳಿತ ಮಂಡಳಿ, ಪೋಷಕರು ಹಾಗೂ ಶ್ರೀ ಭಗವತಿ ಯುವಕ ಸಂಘದ ಪದಾಧಿಕಾರಿಗಳು ಸೇರಿ ಶಾಲಾ ಆವರಣವನ್ನು ಶುಚಿಗೊಳಿಸಿ, ತಳಿರು ತೋರಣಗಳಿಂದ ಶೃಂಗರಿಸಿ ಹೊಸದಾಗಿ ಶಾಲೆಗೆ ಸೇರಿದ ವಿದ್ಯಾರ್ಥಿಗಳು ಹಾಗೂ ಹಳೇ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.

ಈ ಸಂದರ್ಭ ಶ್ರೀ ಭಗವತಿ ಯುವಕ ಸಂಘದ ವತಿಯಿಂದ ಶಾಲೆಗೆ ಅಡುಗೆ ಮಾಡುವ ದೊಡ್ಡದಾದ ಗ್ಯಾಸ್‍ಸ್ಟವ್‍ನ್ನು ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ಆಡಳಿತ ಮಂಡಳಿ , ಶ್ರೀ ಭಗವತಿ ಯುವಕ ಸಂಘದ ಅಧ್ಯಕ್ಷ ಮಂಡುವಂಡ ಟಾಟಾ ದೇವಯ್ಯ, ಉಪಾಧ್ಯಕ್ಷ ಪಿ.ಎ. ರಾಘವ, ಕಾರ್ಯದರ್ಶಿ ಬಿ.ಎಸ್. ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಗುಡ್ಡೆಹೊಸೂರು: ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ದಾಖಲಾತಿ ಆಂದೋಲದ ಅಂಗವಾಗಿ ಶಾಲಾ ಮಕ್ಕಳು ಮತ್ತು ಶಿಕ್ಷಕ ವೃಂದ ಸೇರಿ ಊರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಶಾಲಾ ಪ್ರಾರಂಭವನ್ನು ವಿಶೇಷವಾಗಿ ಆಚರಿಸಿದರು.

ಸುಂಟಿಕೊಪ್ಪ : ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು.

ಶಾಲೆಯ ಪ್ರವೇಶ ದ್ವಾರದಲ್ಲಿ ಹಸಿರು ತಳಿರು ತೋರಣಗಳಿಂದ ಅಲಂಕರಿಸಿ ಶಿಕ್ಷಕರು ವಿದ್ಯಾರ್ಥಿಗಳನ್ನು ಶಾಲೆಗೆ ಬರಮಾಡಿಕೊಂಡು ಶೈಕ್ಷಣಿಕ ಸಾಲಿಗೆ ಸ್ವಾಗತಿಸಿದರು.

ನಂತರ ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಪಾಯಸದೊಂದಿಗೆ ಬಿಸಿಯೂಟ ನೀಡಲಾಯಿತು.ಶಾಲಾ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಶಿಕ್ಷಕರು ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು. ನಂತರ ಎಂದಿನಂತೆ ಶಿಕ್ಷಕರು ಮಕ್ಕಳಿಗೆ ಪಾಠ ಪ್ರವಚನ ಆರಂಭಿಸಿದರು.

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕಗಳನ್ನು ಮುಖ್ಯ ಶಿಕ್ಷಕಿ ಸಿ.ಎ.ಗೀತಾ ವಿತರಿಸಿದರು.ಎಸ್ ಡಿಎಂಸಿ ಉಪಾಧ್ಯಕ್ಷೆ ಪ್ರೇಮ, ಸದಸ್ಯರಾದ ಪುಷ್ಪ, ಕಾವೇರಿ, ಶಿಕ್ಷಕ ಪಿ.ಇ.ನಂದ, ಇತರರು ಇದ್ದರು.

ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಿ ಮಾತನಾಡಿದ ಮುಖ್ಯ ಶಿಕ್ಷಕ ಬಾಲಕೃಷ್ಣ ಅವರು, ವಿದ್ಯಾರ್ಥಿಗಳು ಸರ್ಕಾರದಿಂದ ಉಚಿತವಾಗಿ ನೀಡುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದರು.ಜಿಲ್ಲಾ ಪ್ರೌಢÀಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಶಿಕ್ಷಕ ಟಿ.ಜಿ.ಪ್ರೇಮ್ ಕುಮಾರ್ ಮಾತನಾಡಿದರು. ಶಿಕ್ಷಕ ಎಸ್.ಟಿ.ವೆಂಕಟೇಶ್ ಸ್ವಾಗತಿಸಿ, ವಂದಿಸಿದರು.