ಮಡಿಕೇರಿ, ಮೇ 26: ವೀರಾಜಪೇಟೆ ಸಮೀಪದ ಚೆಯ್ಯಂಡಾಣೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರಂತರ ರೈತರ ಕೃಷಿ ಫಸಲು ನಾಶಗೊಳಿಸುತ್ತಾ ಜನತೆಗೆ ಉಪದ್ರ ನೀಡುತ್ತಿರುವ ಮೂರು ಪುಂಡಾನೆಗಳ ಸೆರೆಗೆ ಅರಣ್ಯ ಇಲಾಖೆಯು ಕ್ರಮಕೈಗೊಂಡಿದೆ.

ಈ ಸಂಬಂಧ ಕೇಂದ್ರದ ಅನುಮತಿಯನ್ನು ಪಡೆಯಲಾಗಿದ್ದು, ಕಾಡಾನೆಗಳ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲು ಮುಂದಾಗುವಷ್ಟರಲ್ಲಿ ವರುಣ ಅಡ್ಡಿಯಾದಂತಿದೆ. ಪ್ರಸಕ್ತ ವಾತಾವರಣದಲ್ಲಿ ಕಾರ್ಯಾಚರಣೆಗೆ ಸಾಧ್ಯವಾಗದು ಎಂದು ಅರಣ್ಯ ಇಲಾಖೆಯ ಮೂಲಗಳಿಂದ ಗೊತ್ತಾಗಿದೆ.

ಈ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯ ಕ್ರಿಸ್ತರಾಜ್ ಬಳಿ ಪ್ರತಿಕ್ರಿಯೆ ಬಯಸಿದಾಗ, ಸಾಕಷ್ಟು ದಿನಗಳಿಂದ ಗ್ರಾಮಗಳಲ್ಲಿ ಸುಳಿದಾಡುತ್ತಿದ್ದ ಮೂರು ಪುಂಡಾನೆಗಳು ಮರಳಿ ಕಾಡಿಗೆ ತೆರಳಿರುವ ಮಾಹಿತಿ ನೀಡಿದರು. ಅಲ್ಲದೆ ಚೆಯ್ಯಂಡಾಣೆ ಸುತ್ತ ಮುತ್ತ ದಟ್ಟ ಕಾಡು ಹಾಗೂ ಇಳಿಜಾರು ಬೆಟ್ಟ ಪ್ರದೇಶವಿರುವ ಕಾರಣ ಅವುಗಳ ಚಲನವಲನ ಕಂಡುಹಿಡಿಯುವದು ಕಷ್ಟವೆಂದು ವಿವರಿಸಿದರು.

ಹಾಗಾಗಿ ಮಳೆಗಾಲದಲ್ಲಿ ಕಾರ್ಯಾಚರಣೆ ಕೈಗೊಳ್ಳದೆ, ರೈತರಿಗೆ ಉಪದ್ರ ನೀಡದಂತೆ ನಿಗಾ ವಹಿಸಲಾಗುವದು ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಮಳೆಗಾಲದ ಬಳಿಕ ಸಾಕಾನೆಗಳು ಮೈಸೂರು ದಸರಾ ಮುಗಿಸಿಕೊಂಡು ಬರುವ ಹೊತ್ತಿಗೆ ಪುಂಡಾನೆಗಳ ಚಲನವಲನ ನೋಡಿಕೊಂಡು ಅವುಗಳ ಸೆರೆಗೆ ಮುಂದಾಗುವದಾಗಿ ಸುಳಿವು ನೀಡಿದರು.

ಈಗಾಗಲೇ ಮೋದೂರು ಬಳಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಸಲಗ ಸೆರೆಯಾಗಿದ್ದು, ಮಳೆಗಾಲದಲ್ಲಿ ರೈತರ ದೂರುಗಳು ಬಂದರೆ, ಅರಣ್ಯಕ್ಕೆ ಹಿಮ್ಮೆಟ್ಟಿಸಲು ಸಿಬ್ಬಂದಿಗಳು ಗಮನ ಹರಿಸುವದಾಗಿಯೂ ಸ್ಪಷ್ಟಪಡಿಸಿದರು.

ಹೆರೂರಿನಲ್ಲಿ ಕಾಡಾನೆ ಹಿಂಡು: ಈ ನಡುವೆ ಮೋದೂರುವಿನಲ್ಲಿ ಸಲಗವನ್ನು ಇತ್ತೀಚೆಗೆ ಸೆರೆ ಹಿಡಿದ ಬೆನ್ನಲ್ಲೇ, ಸುಂಟಿಕೊಪ್ಪ ಬಳಿಯ ಹೇರೂರು ಗ್ರಾಮದ ತೋಟಗಳಲ್ಲಿ ದೈತ್ಯ ಸಲಗಗಳ ಸಹಿತ ಕಾಣಿಸಿಕೊಂಡಿರುವ ಹಿಂಡು ಬೆಳೆಗಾರರಲ್ಲಿ ಭಯ ಹುಟ್ಟಿಸಿವೆ.

ತೋಟಗಳ ನಡುವೆ ಹಲಸು, ಮಾವು, ಬಾಳೆ ಇತ್ಯಾದಿ ಮೆಲ್ಲುತ್ತಾ ಸ್ವಚ್ಛಂಧವಾಗಿ ಅಡ್ಡಾಡುತ್ತಿರುವ ಗಜಪಡೆ ಪಟಾಕಿ ಇತ್ಯಾದಿಗೂ ಬೆದರದೆ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಅರಣ್ಯ ಅಧಿಕಾರಿಗಳು ಹೆರೂರು ವ್ಯಾಪ್ತಿಯಲ್ಲಿ ನಿರಂತರ ಸುಳಿದಾಡುತ್ತಿರುವ ಕಾಡಾನೆಗಳ ಬಗ್ಗೆ ಯಾವದೇ ಕ್ರಮಕೈಗೊಂಡಿಲ್ಲವೆಂದು ಅಳಲು ತೋಡಿಕೊಂಡಿರುವ ಬೆಳೆಗಾರರು, ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ಕಾಡಾನೆಗಳನ್ನು ಹಿಮ್ಮೆಟ್ಟಿಸಬೇಕೆಂದು ‘ಶಕ್ತಿ’ ಮೂಲಕ ಆಗ್ರಹಪಡಿಸಿದ್ದಾರೆ.