ಮಡಿಕೇರಿ, ಮೇ 26: ಕಳೆದ ಕೆಲವು ದಿನಗಳಿಂದ ತಲಕಾವೇರಿ ಕ್ಷೇತ್ರದಲ್ಲಿ ನಡೆಯುತ್ತಿದ್ದ ಅಷ್ಟಮಂಗಲ ಪ್ರಶ್ನೆಯಲ್ಲಿ ಅನೇಕ ವಿದ್ಯಮಾನಗಳ ಬಗ್ಗೆ ಮಾರ್ಗದರ್ಶನ ಕಂಡುಬಂದಿದೆ. ಇದರಲ್ಲಿ ಪ್ರಮುಖವಾಗಿ ಕಂಡುಬಂದಿರುವ ನ್ಯೂನತೆ, ಸಮಸ್ಯೆಗಳ ಕುರಿತು ಜ್ಯೋತಿಷಿಗಳು ಹಾಗೂ ತಂತ್ರಿಯವರ ಮಾರ್ಗದರ್ಶನ ಪಡೆಯಲಾಗುತ್ತಿದೆ. ಈ ಬಗ್ಗೆ ದೇವಾಲಯ ವ್ಯವಸ್ಥಾಪನಾ ಸಮಿತಿಯಿಂದ ಇನ್ನು ಯಾವದೇ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ ಎಂದು ಸಮಿತಿಯ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಮಾಹಿತಿಯಿತ್ತಿದ್ದಾರೆ.

‘ಶಕ್ತಿ’ಯೊಂದಿಗೆ ಮಾತನಾಡಿದ ಅವರು ಬ್ರಹ್ಮಗಿರಿ ಶಿಖರವನ್ನು ಏರುವ ಕುರಿತು ಪ್ರಶ್ನೆಯಲ್ಲಿ ಕಂಡುಬಂದಿದೆ. ಸಪ್ತರ್ಷಿಗಳ ಮತ್ತು ಮುಖ್ಯವಾಗಿ ಅಗಸ್ತ್ಯರ ಆವಾಸ ಸ್ಥಾನವಾಗಿದೆ ಎಂಬ ಕುರಿತು ಜ್ಯೋತಿಷಿಗಳು ವಿವರಿಸಿದ್ದಾರೆ. ಪಾವಿತ್ರ್ಯತೆಯ ಕಾರಣ ಬ್ರಹ್ಮಗಿರಿಗೆ ಹತ್ತಬೇಕಾದರೆ ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕು ಎಂಬ ಕುರಿತು ರಾಶಿಫಲದಲ್ಲಿ ಗೋಚರವಾಗಿದೆ. ಈ ಬಗ್ಗೆ ಜ್ಯೋತಿಷಿಗಳು ತಿಳಿಸಿದ್ದಾರೆ.

ಅದೇ ರೀತಿ ತಲಕಾವೇರಿಯ ಕೊಳದಲ್ಲಿ ಸ್ನಾನ ಮಾಡುವ ಬಗ್ಗೆಯೂ ಯಾವ ಕ್ರಮ ಅನುಸರಿಸ ಬೇಕು ಎಂಬ ಬಗ್ಗೆಯೂ ರಾಶಿಫಲ ದಲ್ಲಿ ಗೋಚರವಾಗಿದೆ. ಮುಖ್ಯವಾಗಿ ಕ್ಷೇತ್ರದ ಪಾವಿತ್ರ್ಯತೆ ಯನ್ನು ಉಳಿಸಿಕೊಳ್ಳಬೇಕೆನ್ನುವ ಅಗತ್ಯತೆ ಬಗ್ಗೆ ಜ್ಯೋತಿಷಿಗಳು ನಿರ್ದೇಶನವಿತ್ತಿದ್ದಾರೆ. ತಲಕಾವೇರಿಯ ಭಾಗಮಂಡಲ ಕ್ಷೇತ್ರಗಳು ದೈವಸಾನ್ನಿಧ್ಯದ ಯಾತ್ರಾ ಸ್ಥಳಗಳೇ ಹೊರತು, ಪ್ರವಾಸೀ ತಾಣವಾಗಬಾರದು ಎನ್ನುವದಿಷ್ಟೇ ರಾಶಿಫಲದಲ್ಲಿ ಗೋಚರವಾಗುತ್ತಿರುವ ಮಾಹಿತಿಗಳಾಗಿವೆ. ಮುಂದಿನ ತಿಂಗಳು ಮತ್ತೆ ಕ್ಷೇತ್ರದಲ್ಲಿ ಪ್ರಶ್ನೆ ಮುಂದುವರಿಯಲಿದೆ. ಅಂತಿಮವಾಗಿ ಜ್ಯೋತಿಷಿಗಳು ಎಲ್ಲಾ ದೋಷಗಳ ಪರಿಹಾರಕ್ಕೂ ಮಾರ್ಗೋಪಾಯ ಸೂಚಿಸುತ್ತಾರೆ. ಅಲ್ಲದೆ ಕ್ಷೇತ್ರದಲ್ಲಿ ಕಂಡುಬಂದ ಎಲ್ಲಾ ದೋಷಗಳಿಗೂ ಸಂಪೂರ್ಣ ಪರಿಹಾರ ದೊರಕುವ ಶುಭ ಸೂಚನೆಯೂ ಕೂಡ ರಾಶಿಫಲದಲ್ಲಿ ಲಭ್ಯವಾಗಿದೆ. ಇದರಿಂದಾಗಿ ಭಕ್ತಾದಿಗಳು ಯಾವದೇ ಆತಂಕ ಪಡಬೇಕಿಲ್ಲ ಎಂದು ಅಧ್ಯಕ್ಷರು ಅಭಿಪ್ರಾಯಪಟ್ಟರು. ಪ್ರಶ್ನೆ ಮುಕ್ತಾಯಗೊಂಡ ಬಳಿಕ ಕ್ಷೇತ್ರ ತಂತ್ರಿಗಳ ಸಮ್ಮುಖದಲ್ಲೇ ಸಮಿತಿ ಮತ್ತಿತರ ಪ್ರಮುಖರ ಸಲಹೆ ಪಡೆದು ಯಾವದೇ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಮ್ಮಯ್ಯ ಖಚಿತಪಡಿಸಿದರು.