ಕುಶಾಲನಗರ, ಮೇ 26: ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ಮುಗಿಯುತ್ತಲೇ ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ಕೇಂದ್ರಗಳಿಗೆ ಪ್ರವಾಸಿಗರ ಸಂಖ್ಯೆ ಅಧಿಕಗೊಂಡಿರುವ ದೃಶ್ಯ ಗೋಚರಿಸಿದೆ. ಕುಶಾಲನಗರ ಕಾವೇರಿ ನಿಸರ್ಗಧಾಮ, ದುಬಾರೆ ಸಾಕಾನೆ ಶಿಬಿರ, ಬೈಲುಕೊಪ್ಪ ಗೋಲ್ಡನ್ ಟೆಂಪಲ್ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ವಾರಾಂತ್ಯದಲ್ಲಿ ಭೇಟಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಅಲ್ಪಸ್ವಲ್ಪ ಅನಾನುಕೂಲ ಉಂಟಾಗಿದೆ. ದುಬಾರೆ ಸಾಕಾನೆ ಶಿಬಿರಕ್ಕೆ ತೆರಳುವ ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರಸ್ತೆ ಕೆಸರುಮಯವಾಗಿತ್ತು. ನದಿ ದಾಟಲು ಮೋಟಾರ್ ಬೋಟುಗಳು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಪ್ರವಾಸಿಗರು ನದಿ ದಾಟಿ ತೆರಳುತ್ತಿದ್ದ ದೃಶ್ಯ ಕಂಡುಬಂತು.

ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಏರಿಕೆಯಾಗುತ್ತಿದ್ದು, ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ಭೇಟಿಯನ್ನು ಸಂಜೆ ವೇಳೆಯಲ್ಲಿ ಸ್ಥಗಿತಗೊಳಿಸಲಾಯಿತು. ರಸ್ತೆ ಕಾಮಗಾರಿ ಸಮರ್ಪಕವಾಗಿ ನಡೆಯದ ಹಿನ್ನೆಲೆಯಲ್ಲಿ ದುಬಾರೆಗೆ ಆಗಮಿಸುವ ಪ್ರವಾಸಿಗರ ವಾಹನಗಳಿ’ಗೆ ಸಂಚರಿಸಲು ಅನಾನುಕೂಲವಾಗುತ್ತಿದೆ ಎಂದು ಸ್ಥಳೀಯ ಉದ್ಯಮಿ ಕೆ.ಎಸ್. ರತೀಶ್ ‘ಶಕ್ತಿ’ಯೊಂದಿಗೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ನದಿ ದಾಟಲು ಮೋಟಾರ್ ಬೋಟ್ ಇಲ್ಲದ ಪ್ರವಾಸಿಗರಿಗೆ ಅನಾನುಕೂಲ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.

ನದಿ ನೀರು ಕಲುಷಿತಗೊಳ್ಳುವದರೊಂದಿಗೆ ನದಿಯ ನಡುವೆ ಇರುವ ನಡುಗಡ್ಡೆಗಳು ಸಂಪೂರ್ಣ ಕೊರೆತದಿಂದ ಮರಗಳು ನದಿ ಪಾಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮೇಲಧಿಕಾರಿಗಳ ಸೂಚನೆಯಂತೆ ಖಾಸಗಿ ಸಂಸ್ಥೆಗಳ ಮೋಟಾರ್ ಬೋಟ್‍ಗಳನ್ನು ರದ್ದುಗೊಳಿಸಲಾಗಿದೆ ಎಂದು ಅರಣ್ಯ ಇಲಾಖೆ ಸಹಾಯಕ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ಸ್ಪಷ್ಟನೆ ನೀಡಿದ್ದಾರೆ. ನದಿಯ ಎರಡೂ ಬದಿಗಳಲ್ಲಿ ಭಾರೀ ಮಣ್ಣು ಕೊರೆತ ಉಂಟಾಗಿದ್ದು ಬೃಹತ್ ಮರಗಳ ಬುಡದಲ್ಲಿನ ಮಣ್ಣು ಕರಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದು ಅಪಾಯದ ಅಂಚಿನಲ್ಲಿರುವದಾಗಿ ತಿಳಿಸಿದ್ದಾರೆ. ಸಾಕಾನೆ ಶಿಬಿರಕ್ಕೆ ತೆರಳಲು ತೂಗು ಸೇತುವೆ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದಿದ್ದಾರೆ.

ರಾಜಾಸೀಟ್‍ನಲ್ಲಿ...

ಪ್ರಮುಖ ಪ್ರವಾಸಿತಾಣ ಮಡಿಕೇರಿಯ ರಾಜಾಸೀಟ್‍ನಲ್ಲಿ ಕೂಡ ಪ್ರವಾಸಿಗರು ತುಂಬಿ ತುಳುಕಿದ್ದರು. ವಿವಿಧೆಡೆಗಳಿಂದ ಬಂದ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡರು.ಮಡಿಕೇರಿ: ಹೌದು ನಿನ್ನೆ ಸಂಜೆಗತ್ತಲೆಯಾಗುತ್ತಿದ್ದಂತೆಯೇ ಜಿಲ್ಲೆಯಾದ್ಯಂತ ದಿಢೀರ್ ಮಳೆಯಾಗುವದರೊಂದಿಗೆ ಸ್ಥಳೀಯರು ಬವಣೆ ಪಡುತ್ತಿದ್ದರು. ಇತ್ತ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಎಲ್ಲೆಡೆ ವಾಹನಗಳ ದಟ್ಟಣೆಯೊಂದಿಗೆ ‘ಟ್ರಾಫಿಕ್’ ಕಿರಿಕಿರಿಯಿಂದ ಒದ್ದಾಡುವಂತಾಯಿತು.

ಮಡಿಕೇರಿಯ ಪುಟ್ಟ ಪುಟ್ಟ ರಸ್ತೆಗಳಲ್ಲಿ ಮಳೆಯ ನಡುವೆ ಸಂಚರಿಸುತ್ತಿದ್ದ ವಾಹನಗಳ ಕಿರಿಕಿರಿಯಿಂದ ಒಂದು ರೀತಿ ಎಲ್ಲರು ತೊಂದರೆ ಅನುಭವಿಸುವದು ಗೋಚರಿಸಿತು. ಮುಖ್ಯ ರಸ್ತೆಗಳಲ್ಲಿ ಸಂಚಾರ ನಿಯಮ ಹಾದಿ ತಪ್ಪುವದರೊಂದಿಗೆ ಪ್ರವಾಸಿಗರು ಸಿಕ್ಕಸಿಕ್ಕ ಕಡೆ ವಾಹನಗಳನ್ನು ನಿಲ್ಲಿಸಿ ಹೊಟೇಲ್, ಮಳಿಗೆಗಳಿಗೆ ತೆರಳುತ್ತಿದ್ದ ದೃಶ್ಯ ಕಂಡುಬಂತು.

ಶನಿವಾರ ಬೆಳಿಗ್ಗೆಯಿಂದಲೇ ನಗರದ ಯಾವ ಮಾರ್ಗದಲ್ಲಿ ತೆರಳಿದರೂ, ವಾಹನ ದಟ್ಟಣೆಯಿಂದ ಸಂಚರಿಸುವದೇ ತ್ರಾಸದಾಯಕವಾಯಿತು. ಸಂಜೆಯಾಗುತ್ತಿದ್ದಂತೆಯೇ ವಿಪರೀತ ವಾಹನಗಳೊಂದಿಗೆ ಹೆದ್ದಾರಿಯಲ್ಲಿ ಭಾರೀ ಗಾತ್ರದ ವಾಹನ ಸಂಚಾರದೊಂದಿಗೆ ಸಾಲುಗಟ್ಟಲೆ ವಾಹನಗಳು ರೈಲ್ವೇ ಭೋಗಿಗಳಂತೆ ಭಾಸವಾಗುತ್ತಿತ್ತು. ಇದರೊಂದಿಗೆ ಜನ ಸಂದಣಿ ಅಧಿಕವಾಗಿ ಕಾಣಬಂತು. ಪೊಲೀಸ್ ಸಿಬ್ಬಂದಿ ಪರಿಸ್ಥಿತಿಯ ಒತ್ತಡದೊಂದಿಗೆ ಬವಣೆ ಅನುಭವಿಸುವದು ಗೋಚರಿಸಿತು.