ಮಡಿಕೇರಿ, ಮೇ 26: ಪತಂಜಲಿ ಮಹರ್ಷಿ ಪ್ರಣೀತ ಯೋಗಾಸನಗಳು ಸರ್ವರೋಗ ನಿವಾರಕವಾಗಿವೆ. ಪುರಾತನ ಕಾಲದ ಯೋಗಾಸನಗಳು ಪ್ರಚಲಿತದಲ್ಲಿಯೂ ಪ್ರಯೋಜನಕಾರಿ ಯಾಗಿವೆ ಎಂದು ಇಲ್ಲಿನ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಉದ್ಘಾಟನೆಗೊಂಡ ಉಚಿತ ಯೋಗ ಶಿಬಿರದಲ್ಲಿ ಅತಿಥಿ ಪ್ರಮುಖರು ಅಭಿಪ್ರಾಯಪಟ್ಟರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾ ವಿದ್ಯಾಲಯ, ಭಾರತ ಸರಕಾರದ ಆಯುಷ್ ಮಂತ್ರಾಲಯ, ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯ ವತಿಯಿಂದ ಮುಂದಿನ ಒಂದು ತಿಂಗಳು ಉಚಿತ ಯೋಗ ಶಿಬಿರ ಏರ್ಪಟ್ಟಿದೆ.

ಉದ್ಘಾಟನೆಯನ್ನು ‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರು ನೆರವೇರಿಸಿದರು. ಅತಿಥಿಗಳಾಗಿ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕಾರ್ಯದರ್ಶಿ ಬಿ.ಕೆ. ಅರುಣ್ ಕುಮಾರ್, ಆಯುಷ್ ವೈದ್ಯರಾದ ಡಾ. ಶುಭ ಪಾಲ್ಗೊಂಡಿದ್ದರು. ಈ ಪ್ರಮುಖರು ಮಾತನಾಡಿ, ಮಾನವ ತನ್ನ ನಿತ್ಯದ ಒತ್ತಡದಲ್ಲಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದು, ಇದರ ನಿವಾರಣೆಗೆ ಯೋಗಾಭ್ಯಾಸದ ಅಗತ್ಯತೆ ಕುರಿತು ಸಮರ್ಥಿಸಿ ಮಾತನಾಡಿದರು. ನಿತ್ಯ ಪುನಶ್ಚೇತನಕ್ಕಾಗಿ ಯೋಗಾಭ್ಯಾಸ ಸುಲಭೋಪಾಯವಾಗಿದೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಯೋಗ ಗುರುಗಳಾದ ಬಾಹುಬಲಿ ಹಾಗೂ ದೀಪಕ್ ಉಪಸ್ಥಿತರಿದ್ದರು. ಮಡಿಕೇರಿಯ ಯೋಗ ಗುರು ಮಹೇಶ್ ಅವರಿಂದ ಪ್ರಾಸ್ತಾವಿಕ, ಗೀತಾ ಗಿರೀಶ್ ನಿರೂಪಣೆ ಹಾಗೂ ಕೃಪಾ ದೇವರಾಜ್ ವಂದನಾರ್ಪಣೆ ನೆರವೇರಿಸಿದರು.