ಕುಶಾಲನಗರ, ಮೇ 26: ಮಂಗಳೂರು-ಬೆಂಗಳೂರು ಸಂಪರ್ಕಿಸುವ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿಯ ಕಾಂಕ್ರಿಟ್ ಕಾಮಗಾರಿ ಜೂನ್ 15ರ ವೇಳೆಗೆ ಸಂಪೂರ್ಣಗೊಳ್ಳಲಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಶಿರಾಡಿಘಾಟ್ ಹೆದ್ದಾರಿ ವಾಹನ ಸಂಚಾರಕ್ಕೆ ಮುಕ್ತಗೊಂಡು ಜಿಲ್ಲೆಯ ಹೆದ್ದಾರಿ ಸಂಚಾರ ಸುಗಮಗೊಳ್ಳಲಿದೆ.

ಶಿರಾಡಿಘಾಟ್ ಎರಡನೇ ಹಂತದಲ್ಲಿ 12.38 ಕಿಮೀ ಕಾಂಕ್ರಿಟ್ ಕಾಮಗಾರಿ ಹಿನ್ನೆಲೆ ಕಳೆದ ಕೆಲವು ತಿಂಗಳಿನಿಂದ ಈ ಮಾರ್ಗಕ್ಕೆ ಪರ್ಯಾಯವಾಗಿ ಸಂಪಾಜೆ, ಮಡಿಕೇರಿ ಮೂಲಕ ಕುಶಾಲನಗರ ಮಾರ್ಗವಾಗಿ ವಾಹನಗಳು ಸಂಚರಿಸುತ್ತಿವೆ. ಇದೀಗ ಅಲ್ಪ ಪ್ರಮಾಣದ ಕಾಮಗಾರಿ ಬಾಕಿ ಉಳಿದಿದ್ದು, ಮೇ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವನ್ನು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಜನವರಿ 20 ರಿಂದ ಆ ಭಾಗದಲ್ಲಿ ಸಂಚರಿಸುತ್ತಿದ್ದ ವಾಹನಗಳು ಜಿಲ್ಲೆಯ ಮಾರ್ಗವಾಗಿ ಬೆಂಗಳೂರು ಹಾಸನ ಕಡೆಗೆ ಸಾಗುತ್ತಿವೆ. ಮಳೆ ಸುರಿದ ಹಿನ್ನೆಲೆ ಘಾಟ್ ಪ್ರದೇಶದಲ್ಲಿ ಕಾಮಗಾರಿಗೆ ತೊಡಕುಂಟಾಗಿದೆ. ಇದೀಗ ಕಾಮಗಾರಿ ಮುಗಿದ ಕೂಡಲೇ ರಸ್ತೆ ಬದಿಯಲ್ಲಿ ಫಲಕಗಳ ಅಳವಡಿಕೆ, ರಸ್ತೆಗೆ ರಿಫ್ಲೆಕ್ಟರ್‍ಗಳನ್ನು ಅಳವಡಿಸುವ ಕಾಮಗಾರಿ ನಡೆಯಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಿರಾಡಿಘಾಟ್ ಕಾಮಗಾರಿ ಅಂದಾಜು ರೂ 74 ಕೋಟಿ ವೆಚ್ಚದಲ್ಲಿ ನಡೆಸಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಕಾಂಕ್ರಿಟ್ ಕೆಲಸ ನಡೆಯುತ್ತಿದ್ದು, ಮುಂದಿನ ಜೂನ್ 15ರ ವೇಳೆಗೆ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ. - ಸಿಂಚು