ಮಡಿಕೇರಿ, ಮೇ 26: ಕೊಡಗಿನ ಮುಖಾಂತರ ಕರ್ನಾಟಕ-ಕೇರಳ ನಡುವೆ ಸಂಪರ್ಕ ಕಲ್ಪಿಸುವ ಶತಮಾನಗಳ ಹಿನ್ನೆಲೆಯ ಮಾಕುಟ್ಟ ಗಡಿ ಕೂಟುಹೊಳೆಗೆ ಅಡ್ಡಲಾಗಿ ನಿರ್ಮಾಣ ಹಂತದಲ್ಲಿರುವ ನೂತನ ಸೇತುವೆ ಕಾಮಗಾರಿ ವಿವಾದವು ಕೇಂದ್ರದ ರಾಷ್ಟ್ರೀಯ ವನ್ಯಜೀವಿ ಮಂಡಳಿ ಮೆಟ್ಟಿಲೇರಿದೆ. ವೀರಾಜಪೇಟೆ ಅರಣ್ಯ ಉಪವಿಭಾಗದ ಬ್ರಹ್ಮಗಿರಿ ವನ್ಯಜೀವಿ ಅರಣ್ಯ ಪ್ರದೇಶದಲ್ಲಿರುವ ಕೂಟುಹೊಳೆಗೆ ಅಡ್ಡಲಾಗಿ ಈ ಸೇತುವೆ ನಿರ್ಮಾಣಕ್ಕೆ ಕೇರಳ ಲೋಕೋಪ ಯೋಗಿ ಇಲಾಖೆ ಮುಂದಾಗಿದೆ.ಈ ಸಂಬಂಧ ಈಗಾಗಲೇ ಮಾಕುಟ್ಟ ಗಡಿಭಾಗದ ತನಕ ಕೆಲಸವನ್ನು ಮುಂದುವರಿಸಿದ್ದು, ಕೂಟುಹೊಳೆಯ ಮಧ್ಯದ ತನಕ ಸೇತುವೆ ನಿರ್ಮಾಣ ಮುಗಿಯುವ ಹಂತ ತಲಪಿದೆ. ಇತ್ತ ಅರಣ್ಯ ಇಲಾಖೆಯಿಂದ ಕೊಡಗಿನ ಗಡಿ ಅಂಚಿನಲ್ಲಿರುವ ಜಾಗದೊಂದಿಗೆ ಹೊಳೆಯ ಮಧ್ಯಭಾಗದ ತನಕ ಕರ್ನಾಟಕ ರಾಜ್ಯಕ್ಕೆ ಸೇರಿದ ಸ್ವತ್ತು ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.

ಅರಣ್ಯ ವನ್ಯಜೀವಿ ಧಾಮವಿರುವ ಕಾರಣ ಬೃಹತ್ ಸೇತುವೆ ಹಾಗೂ ಹೆದ್ದಾರಿಯನ್ನು ಏಕಪಕ್ಷೀಯವಾಗಿ ಕೇರಳ ಸರಕಾರ ಕೈಗೊಂಡಿರುವದು ಅಂತರರಾಜ್ಯ ಕಾನೂನು ಉಲ್ಲಂಘನೆಯೊಂದಿಗೆ ಅರಣ್ಯ ವನ್ಯಜೀವಿ ಪರಿಸರದ ಸಂರಕ್ಷಿತ ಪ್ರದೇಶ ಕಾಯ್ದೆಯ ವಿರುದ್ಧವೂ ಆಗಿದೆ ಎಂದು ಇಲಾಖಾಧಿಕಾರಿಗಳು ಗಮನ ಸೆಳೆದಿದ್ದಾರೆ.

ಹೀಗಾಗಿ ಸೇತುವೆ ನಿರ್ಮಾಣವನ್ನು ಸರಿ ಸುಮಾರು ಕೂಟುಹೊಳೆಯ ಮಧ್ಯಭಾಗದಲ್ಲಿ ಸ್ಥಗಿತಗೊಳಿಸಿರುವ ಕೇರಳ ಸರಕಾರದ ಲೋಕೋಪಯೋಗಿ ಇಲಾಖೆಯು ಕರ್ನಾಟಕ ಆಕ್ಷೇಪಣೆ ಸಂಬಂಧ ರಾಷ್ಟ್ರೀಯ ಅರಣ್ಯ ವನ್ಯಜೀವಿ ಮಂಡಳಿಯ ಮೊರೆ ಹೋಗಿದೆ. ಒಂದು ವೇಳೆ ರಾಷ್ಟ್ರೀಯ ಅರಣ್ಯ ವನ್ಯಜೀವಿ ಮಂಡಳಿಯಿಂದ ಹಸಿರು ನಿಶಾನೆ ಲಭಿಸಿದರೆ, ಮಾಕುಟ್ಟಕ್ಕೆ ನೂತನ ಸಂಪರ್ಕ ಸೇತುವೆ ಪೂರ್ಣಗೊಳ್ಳಲಿದೆ.

ಅಲ್ಲದೆ, ಕೇವಲ ವನ್ಯಜೀವಿ ಮಂಡಳಿ ನಿಶಾನೆ ತೋರಿದರೆ ವಿವಾದ ಬಗೆಹರಿಯದು, ಅನಂತರದಲ್ಲಿ ಕರ್ನಾಟಕ ಲೋಕೋಪಯೋಗಿ ಹಾಗೂ ಕಂದಾಯ ಭೂಮಿ ಮತ್ತು ಜಲ ಮಂಡಳಿಯ ಆಕ್ಷೇಪಿಸಿದಂತೆ ವಿವಾದ ಬಗೆಹರಿಸಿಕೊಂಡು ಮಾಕುಟ್ಟ ಬಳಿ ಸೇತುವೆ ಪೂರೈಸಬೇಕಿದೆ.

ಕೇರಳದಿಂದ ಕೂಟುಹೊಳೆ ಸೇತುವೆಗೆ ಕರ್ನಾಟಕದ ಆಕ್ಷೇಪ

(ಮೊದಲ ಪುಟದಿಂದ) ಈಗಷ್ಟೇ ಕರ್ನಾಟಕದಲ್ಲಿ ಚುನಾವಣೆ ಮುಗಿದು ನೂತನ ಸರಕಾರವು ಅಸ್ತಿತ್ವ ಪಡೆದಿರುವ ಮೇರೆಗೆ ಈ ಚುನಾವಣೆಯ ಕಾರಣ ಕಳೆದ ಮೂರು ತಿಂಗಳಿನಿಂದ ಕೇರಳ ಸರಕಾರ ಸೇತುವೆ ಕಾಮಗಾರಿ ಮುಂದುವರಿಸಲು ವಿಳಂಬವಾಗಿದೆ ಎಂದು ತಿಳಿದು ಬಂದಿದೆ.

ಹೀಗಾಗಿ ಪ್ರಸಕ್ತ ಕೇಂದ್ರ ವನ್ಯಜೀವಿ ಮಂಡಳಿಯ ಮುಖಾಂತರ ಉಭಯ ಕಡೆ ಅಧಿಕಾರಿಗಳು ಮಾಕುಟ್ಟ ನೂತನ ಸಂಪರ್ಕ ಸೇತುವೆಯ ತಕರಾರು ಸಂಬಂಧ ಕಾನೂನಿನ ಚೌಕಟ್ಟಿನಲ್ಲಿ ವ್ಯವಹರಿಸುತ್ತಿರುವದಾಗಿ ‘ಶಕ್ತಿ’ಗೆ ಅಧಿಕೃತ ಮೂಲಗಳಿಂದ ಗೊತ್ತಾಗಿದೆ. ಅಲ್ಲದೆ ಉಭಯ ರಾಜ್ಯಗಳ ಗಡಿ ಸರಹದ್ದು ಮತ್ತು ಸೇತುವೆ ನಿರ್ಮಾಣ ಸಂಬಂಧ ಜಂಟಿ ಸರ್ವೆ ನಡೆಸಿರುವದಾಗಿ ದೃಢಪಟ್ಟಿದೆ.

1920ರ ಕಾಲಘಟ್ಟದಲ್ಲಿ ಬ್ರಿಟಿಷ್ ಆಳ್ವಿಕೆಯ ಸಂದರ್ಭ ಕೊಡಗು - ಕೇರಳ ಗಡಿ ಸೇತುವೆಯು ಈಗಿರುವ ಸ್ಥಿತಿಯಲ್ಲಿ ವಾಹನ ಸಂಪರ್ಕ ಕಲ್ಪಿಸಲು ಕೂಟುಹೊಳೆಗೆ ಅಡ್ಡಲಾಗಿ ನಿರ್ಮಿಸಿರುವದು ಕಂಡುಬಂದಿದೆ. ಈ ಸೇತುವೆ ತೀರಾ ಕಿರಿದಾಗಿರುವ ಕಾರಣ ನೂತನ ಸೇತುವೆ ಸಾಕಷ್ಟು ವಿಸ್ತಾರದೊಂದಿಗೆ ನಿರ್ಮಾಣ ಹಂತದಲ್ಲಿದೆ.