ಮಡಿಕೇರಿ, ಮೇ 26 : ಭಾರತೀಯ ಸೇನಾ ಮಂತ್ರಾಲಯ ಹಾಗೂ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ವತಿಯಿಂದ ಮಾಜಿ ಸೈನಿಕರ ಸಮಾವೇಶವು ತಾ. 27 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ ನಡೆಯಲಿದೆ.

ಸಮಾವೇಶದಲ್ಲಿ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್, ಸದರನ್ ಕಮಾಂಡ್ ಲೆ. ಜನರಲ್ ಡಿ.ಆರ್. ಸೋನಿ, ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಸದರನ್ ಕಮಾಂಡ್ ಲೆ. ಜನರಲ್ ಎಸ್.ಟಿ. ಉಪಾಸನಿ, ಜನರಲ್ ಆಫೀಸರ್ ಕಮಾಂಡಿಂಗ್ ದಕ್ಷಿಣ ಪ್ರಾಂತ್ಯ, ಮೇಜರ್ ಜನರಲ್ ಸಂಜೀವ್ ನರೈನ್ ಹಾಗೂ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾದ ನಿವೃತ್ತ ಸೈನಿಕರು ಇತರರು ಪಾಲ್ಗೊಳ್ಳಲಿದ್ದಾರೆ.

ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರು, ಅಭಿಲೇಖಾ ಕಾರ್ಯಾಲಯ ಮತ್ತು ಪಿಂಚಣಿಗೆ ಸಂಬಂಧಿಸಿದಂತೆ ಕುಂದುಕೊರತೆ ಬಗ್ಗೆ ಮುಕ್ತವಾಗಿ ಚರ್ಚಿಸಿ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಮಾಜಿ ಸೈನಿಕರ ರ್ಯಾಲಿ ಆಯೋಜಿಸಲಾಗಿದೆ. ತಮ್ಮ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಲು ಮತ್ತು ಕಲ್ಯಾಣ ಹಾಗೂ ಪುನರ್ವಸತಿಗೆ ಸಂಬಂಧಿಸಿದಂತೆ ವಿಸ್ತರಿಸಲಾಗುವ ಎಲ್ಲಾ ಸೌಲಭ್ಯಗಳ ಮಾಹಿತಿಗಾಗಿ ಸಮಾವೇಶದಲ್ಲಿ ಮುಕ್ತವಾಗಿ ಪಾಲ್ಗೊಂಡು ಮಾಹಿತಿ ಪಡೆಯಬಹುದಾಗಿದೆ.

ಸಮಾವೇಶವು ಅಂದು ಬೆಳಿಗ್ಗೆ 9 ಗಂಟೆಗೆ ಮಾಜಿ ಸೈನಿಕರ ಹೆಸರು ನೋಂದಣಿ ಕಾರ್ಯ ನಡೆಯಲಿದೆ. ಮಾಜಿ ಸೈನಿಕರು ಮತ್ತು ಅವಲಂಬಿತರಿಗೆ ಆರೋಗ್ಯ ತಪಾಸಣೆ, ದಂತ ಪರೀಕ್ಷೆ ಉಚಿತ ಶಿಬಿರ ನಡೆಯಲಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಭಾರತೀಯ ಸೇನಾ ವಿಭಾಗ ಕೋರಿದೆ.