ಮಡಿಕೇರಿ, ಮೇ 26: ಕಳೆದೆರಡು ದಿನಗಳಿಂದ ರಾತ್ರಿ ವೇಳೆ ಜಿಲ್ಲೆಯಾದ್ಯಂತ ಭಾರೀ ಗುಡುಗು-ಸಿಡಿಲು ಸಹಿತ ಮಳೆಯಾಗುತ್ತಿದ್ದು, ಆಸ್ತಿ-ಪಾಸ್ತಿಗಳಿಗೆ ಹಾನಿಯುಂಟಾಗುತ್ತಿದೆ. ನಿನ್ನೆ ರಾತ್ರಿ ಕೂಡ ಗುಡುಗು-ಸಿಡಿಲಿನ ಮಳೆಯಾಗಿದ್ದು, ಅಲ್ಲಲ್ಲಿ ಮನೆ, ರಸ್ತೆ, ವಿದ್ಯುತ್ ಸಂಪರ್ಕಕ್ಕೆ ಹಾನಿಯಾಗಿದೆ.

ತೋಟ, ಅರಣ್ಯ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು, ಸಂಪರ್ಕ ಕಡಿತಗೊಂಡಿದ್ದು, ಮಡಿಕೇರಿ ನಗರ ಸೇರಿದಂತೆ ಬಹುತೇಕ ಗ್ರಾಮಗಳು ಗಾಡಾಂಧಕಾರದಲ್ಲಿ ಮುಳುಗಿವೆ.ಹಾಕತ್ತೂರು: ಹಾಕತ್ತೂರು ಬಳಿಯ ತೊಂಭತ್ತುಮನೆಯಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಮನೆಯೊಂದು ಕುಸಿದು ಬಿದ್ದಿದೆ. ನಷ್ಟ ಸಂಭವಿಸಿದೆ.ಸೋಮವಾರಪೇಟೆ: ನಿನ್ನೆ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ವಾಸದ ಮನೆ ಹಾನಿಗೊಳಗಾಗಿರುವ ಘಟನೆ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರದಲ್ಲಿ ಸಂಭವಿಸಿದೆ.

ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಗುಡುಗು-ಮಿಂಚಿನೊಂದಿಗೆ ಭಾರೀ ಗಾಳಿ ಬೀಸಿದ್ದು, ಧಾರಾಕಾರ ಮಳೆಯಾದ ಹಿನ್ನೆಲೆ ಗಾಂಧಿನಗರದ ಕಿರಣ್ ಅವರ ಮನೆಯ ಛಾವಣಿಗೆ ಅಳವಡಿಸಿದ್ದ ಸುಮಾರು 30ಕ್ಕೂ ಅಧಿಕ ಶೀಟ್‍ಗಳು ಒಡೆದು ಹೋಗಿವೆ.

ಇದರೊಂದಿಗೆ ಮನೆಯೊಳಗಿದ್ದ ಟಿ.ವಿ. ಸೇರಿದಂತೆ ಅನೇಕ ಪೀಠೋಪಕರಣಗಳು ಹಾನಿಗೊಳಗಾಗಿವೆ. ಮನೆ ಮಂದಿ ಒಳಗಿದ್ದ ಸಂದರ್ಭವೇ ಸಿಮೆಂಟ್ ಶೀಟ್‍ಗಳು ಕೆಳಬಿದ್ದಿದ್ದು, ಅದೃಷ್ಟವಶಾತ್ ಹೆಚ್ಚಿನ ಹಾನಿ ಸಂಭವಿಸಿಲ್ಲ.

ಸಿಮೆಂಟ್ ಶೀಟ್‍ನೊಂದಿಗೆ ಮನೆಯ ವಿದ್ಯುತ್ ಸಂಪರ್ಕದ ಲೈನ್, ವಿದ್ಯುತ್ ಮೀಟರ್‍ಗೂ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಿಗರಾದ ಹೇಮಾವತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸರ್ಕಾರದಿಂದ ಪರಿಹಾರ ಒದಗಿಸುವ ಬಗ್ಗೆ ವರದಿ ನೀಡುವದಾಗಿ ತಿಳಿಸಿದ್ದಾರೆ.

ಒಡೆಯನಪುರ: ಶನಿವಾರಸಂತೆ ವ್ಯಾಪ್ತಿಯಲ್ಲಿ 1 ವಾರದಿಂದ ವ್ಯಾಪಕ ಮಳೆಯಾಗುತ್ತಿದೆ. ಶುಕ್ರವಾರ ರಾತ್ರಿ ಶನಿವಾರಸಂತೆ ವ್ಯಾಪ್ತಿಯಲ್ಲಿ ಭಾರೀ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಗುರುವಾರ ಮತ್ತು ಶುಕ್ರವಾರ ರಾತ್ರಿ ಆಲೂರುಸಿದ್ದಾಪುರ, ಮಾಲಂಬಿ, ಕಣಿವೆಬಸವನಹಳ್ಳಿ, ಮುಳ್ಳೂರು ವ್ಯಾಪ್ತಿಯಲ್ಲಿ ಒಟ್ಟು 3 ಇಂಚು ಮಳೆ ದಾಖಲಾಗಿದೆ. ಶನಿವಾರ ಮಧ್ಯಾಹ್ನ ಶನಿವಾರಸಂತೆ ಪಟ್ಟಣದಲ್ಲಿ ಭಾರೀ ಮಳೆಯಾಗಿದೆ. ಶನಿವಾರ ಪಟ್ಟಣದಲ್ಲಿ ಸಂತೆ ದಿನವಾಗಿದ್ದು ಇದ್ದಕ್ಕಿದ್ದಂತೆ ಸುರಿದ ಮಳೆಯಿಂದಾಗಿ ಸಂತೆಗೆ ಬಂದ ಜನರು ಮಳೆಗೆ ಸಿಲುಕಿ ಪರದಾಡುತ್ತಿದ್ದರು.

ವೀರಾಜಪೇಟೆ: ವೀರಾಜಪೇಟೆ ವಿಭಾಗಕ್ಕೆ ನಿನ್ನೆ ದಿನ ರಾತ್ರಿಯಿಂದ ಗುಡುಗು ಮಿಂಚು ಸಹಿತ ಭಾರೀ ಮಳೆ ಸುರಿದಿದೆ. ರಾತ್ರಿಯ ಗುಡುಗು ಮಿಂಚಿನ ಶಬ್ಧ ಕೇಳಿ ಇಲ್ಲಿನ ಅಯ್ಯಪ್ಪಬೆಟ್ಟ, ಅರಸುನಗರ, ನೆಹರೂನಗರದ ನಿವಾಸಿಗಳು ಭಯಭೀತರಾದರು. ಗುಡುಗು ಮಿಂಚಿನ ಪರಿಣಾಮ ರಾತ್ರಿ ಪೂರ್ತಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿ ಇಂದು ಸಂಜೆಯವರೆಗೂ ವೀರಾಜಪೇಟೆ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಸಂಪರ್ಕವಿರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇಂದು ಬೆಳಗಿನಿಂದಲೂ ಈ ವಿಭಾಗಕ್ಕೆ ಬಿಸಿಲಿನ ವಾತಾವರಣವಿದ್ದು ಸಂಜೆಯ ನಂತರ ಮೋಡ ಕವಿದ ವಾತಾವರಣ ಉಂಟಾಗಿ ನಿನ್ನೆಯಂತೆಯೇ ಗುಡುಗು-ಮಿಂಚು ಸೇರಿದಂತೆ ಮಳೆ ಸುರಿಯುತ್ತಿದೆ. ನಿನ್ನೆ ದಿನ ಬಿದ್ದ ಮಳೆಯಿಂದ ಹಾನಿ ಸಂಭವಿಸಿದ ಕುರಿತು ಪಟ್ಟಣ ಪಂಚಾಯಿತಿಗಾಗಲಿ, ತಾಲೂಕು ಕಚೇರಿಯ ಪರಿಹಾರ ವಿಭಾಗಕ್ಕಾಗಲಿ ಯಾವದೇ ದೂರು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.