ಸೋಮವಾರಪೇಟೆ, ಮೇ 25: ಸಂಬಂಧಿಕರಿಗೆ ಸೇರಿದ ಕಾಫಿ ತೋಟದಲ್ಲಿ ಬೆಳೆದಿದ್ದ 200ಕ್ಕೂ ಅಧಿಕ ಕಾಳು ಮೆಣಸು ಬಳ್ಳಿಗಳನ್ನು ವೈಷಮ್ಯದ ಹಿನ್ನೆಲೆ ಕಡಿದು ಹಾಕಿರುವ ಅಮಾನವೀಯ ಕೃತ್ಯ ಸಮೀಪದ ಚೌಡ್ಲು ಗ್ರಾಮದಲ್ಲಿ ನಡೆದಿದ್ದು, ನಷ್ಟಕ್ಕೊಳಗಾಗಿರುವ ಕೃಷಿಕ ನ್ಯಾಯಕ್ಕಾಗಿ ಇದೀಗ ಪೊಲೀಸ್ ಠಾಣೆ ಮೆಟ್ಟಲೇರಿದ್ದಾರೆ.

ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೇಕಟ್ಟೆ ನಿವಾಸಿ, ಚೌಡ್ಲು ಗ್ರಾಮದ ಸುಗ್ಗಿಕಟ್ಟೆ ಎದುರು ಭಾಗದಲ್ಲಿ 2 ಎಕರೆ ಕಾಫಿ ತೋಟ ಹೊಂದಿರುವ ಸಿ.ಕೆ. ದೇವಯ್ಯ ಅವರಿಗೆ ಸೇರಿದ ಸುಮಾರು 10 ರಿಂದ 12 ವರ್ಷದ ಕಾಳುಮೆಣಸಿನ 200ಕ್ಕೂ ಅಧಿಕ ಬಳ್ಳಿಗಳನ್ನು ಕತ್ತಿಯಿಂದ ಕಡಿದು ತುಂಡರಿಸಲಾಗಿದ್ದು, ಬಳ್ಳಿಗಳು ಇದೀಗ ಒಣಗುತ್ತಿವೆ.

ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆ ಕಾಳುಮೆಣಸಿನ ಬಳ್ಳಿಗಳಲ್ಲಿ ಚಿಗುರು ಮೂಡಿ ಮೆಣಸಿನ ಗೆರೆಗಳು ಬೆಳೆಯಲಾರಂಭಿಸಿದ್ದು, ಈ ವರ್ಷ ಬಂಪರ್ ಫಸಲಿನ ನಿರೀಕ್ಷೆಯಲ್ಲಿದ್ದ ಕೃಷಿಕ ಸಿ.ಕೆ. ದೇವಯ್ಯ ಅವರಿಗೆ ಬರಸಿಡಿಲು ಬಡಿದಂತಾಗಿದೆ. ಮರಕ್ಕೆ ಹಬ್ಬಿದ್ದ ಆರೋಗ್ಯವಂತ ಬಳ್ಳಿಗಳು ಇದೀಗ ಒಣಗಲಾರಂಭಿಸಿದ್ದು, ಮಾಲೀಕರು ಚಿಂತಾಕ್ರಾಂತರಾಗಿದ್ದಾರೆ.

ಈ ಬಗ್ಗೆ ಸೋಮವಾರಪೇಟೆ ಠಾಣಾಧಿಕಾರಿ ಮತ್ತು ಪೊಲೀಸ್ ವೃತ್ತ ನಿರೀಕ್ಷಕರಿಗೆ ದೂರು ಸಲ್ಲಿಸಿರುವ ದೇವಯ್ಯ ಅವರು, ‘ಚೌಡ್ಲು ಗ್ರಾಮ ಸ.ನಂ.58/2ರಲ್ಲಿ ತನಗೆ ಸೇರಿದ 2 ಏಕರೆ ತೋಟವಿದ್ದು, ಅದರಲ್ಲಿ ಬೆಳೆಯಲಾಗಿದ್ದ 200ಕ್ಕೂ ಅಧಿಕ ಕಾಳುಮೆಣಸಿನ ಬಳ್ಳಿಗಳನ್ನು ಸಿ.ಪಿ. ದರ್ಶನ್ ಮತ್ತು ಆತನ ತಾಯಿ ಡೀಲಾಕ್ಷಿ ಅವರುಗಳು ಕಡಿದು ನಾಶಪಡಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ಈ ಕೃತ್ಯದಿಂದ ನಮಗೆ 5 ರಿಂದ 6ಲಕ್ಷ ನಷ್ಟವಾಗಿದೆ’ ಎಂದು ದೇವಯ್ಯ ಅವರು ಪತ್ರಿಕೆಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ದೂರು ಸ್ವೀಕರಿಸಿರುವ ಪೊಲೀಸರು, ಮೊಕದ್ದಮೆ ದಾಖಲಿಸುವ ಬಗ್ಗೆ ನ್ಯಾಯಾಲಯದ ಅನುಮತಿಗೆ ಪತ್ರ ಬರೆದಿದ್ದಾರೆ. ನ್ಯಾಯಾಲಯದಿಂದ ಆದೇಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.