ಸೋಮವಾರಪೇಟೆ, ಮೇ 25: ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಅಪ್ಪಚ್ಚು ರಂಜನ್‍ರವರ ಪರವಾಗಿ ಯಾವದೇ ಕೆಲಸ ಮಾಡದೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಪಕ್ಷದ ಐವರು ಪ್ರಮುಖರನ್ನು ಆರು ವರ್ಷಗಳ ಕಾಲ ಬಿಜೆಪಿಯಿಂದ ಅಮಾನತುಗೊಳಿಸಲಾಗಿದೆ.

ಭಾರತೀಯ ಜನತಾ ಪಾರ್ಟಿಯ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಎಂ.ಎನ್.ಕುಮಾರಪ್ಪ ಅವರು ಈ ಆದೇಶ ಮಾಡಿದ್ದು, ಪಕ್ಷದ ಸೋಮವಾರಪೇಟೆ ಮಂಡಲ ಬಿ.ಜೆ.ಪಿ ಪ್ರಧಾನಕಾರ್ಯದರ್ಶಿ ಪಿ.ಡಿ.ಮೋಹನ್‍ದಾಸ್, ತಾಲೂಕು ಯುವ ಮೊರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಬಿ.ಪಿ.ದಿವಾನ್, ವಿವಿದೋದ್ದೇಶ ಸಹಕಾರ ಸಂಘದ ನಿರ್ದೇಶಕ ಎಂ.ಸಿ. ರಾಘವ, ಬೇಳೂರು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಮಂಜುನಾಥ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಿದ್ದಾರೆ.

ಇದರೊಂದಿಗೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇರೆ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಪೂರ್ಣಿಮ ಗೋಪಾಲ್, ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷ ಹೆಚ್.ಕೆ. ಮಾದಪ್ಪ, ಜಿಲ್ಲಾ ಸಮಿತಿ ಸದಸ್ಯರಾದ ವೆಂಕಪ್ಪ, ರೂಪಾ ಸತೀಶ್, ಡಿ.ಬಿ.ಧರ್ಮಪ್ಪ ಅವರುಗಳನ್ನು ಅಮಾನತುಗೊಳಿಸುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಶಿಫಾರಸ್ಸು ಮಾಡಿರುವದಾಗಿ ಕುಮಾರಪ್ಪ ತಿಳಿಸಿದ್ದಾರೆ.