*ಗೋಣಿಕೊಪ್ಪಲು, ಮೇ 25 : ಅಧಿಕಾರ ಸ್ವೀಕರಿಸಿದ 24 ಗಂಟೆಗಳೊಳಗೆ ರೈತರ ಹಾಗೂ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನ ಮಾಡುವದಾಗಿ ಘೋಷಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ವಚನ ಭ್ರಷ್ಟರಾಗಿದ್ದು, ಮಾತಿಗೆ ತಪ್ಪಿದ ಕಾರಣವನ್ನು ಖಂಡಿಸಿ ರಾಜ್ಯಾದ್ಯಂತ ತಾ. 28 ರಂದು ಸ್ವಯಂ ಪ್ರೇರಿತ ಬಂದ್‍ಗೆ ಕರೆ ನೀಡಲಾಗಿದೆ. ಇದಕ್ಕೆ ಬೆಂಬಲವಾಗಿ ಕೊಡಗು ಜಿಲ್ಲಾ ಬಿ.ಜೆ.ಪಿ. ಹಾಗೂ ವಿವಿಧ ಸಂಘಟನೆಗಳು ಸಹ ಸ್ವಯಂ ಪ್ರೇರಿತ ಬಂದ್‍ಗೆ ಬೆಂಬಲ ಸೂಚಿಸಲಾಗಿದೆ ಎಂದು ವೀರಾಜಪೇಟೆ ತಾಲೂಕು ಬಿ.ಜೆ.ಪಿ. ಮಂಡಳ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಧಿಕಾರ ಪಡೆಯುವ ಮೊದಲು ಕುಮಾರಸ್ವಾಮಿ ಅವರು ರೈತರ ಹಾಗೂ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನ ಮಾಡುವದಾಗಿ ಭರವಸೆ ನೀಡಿದ್ದರು. ಆದರೆ ಮುಖ್ಯಮಂತ್ರಿ ಪದವಿ ಸ್ವೀಕರಿಸಿ 24 ಗಂಟೆ ಕಳೆದರೂ ಸದನ ಕಲಾಪದಲ್ಲಿ ಬಹುಮತ ಸಾಭೀತಾಗಿದ್ದರೂ ರೈತರ ಸಾಲ ಮನ್ನ ಮಾಡುವ ಬಗ್ಗೆ ವಿಚಾರ ಪ್ರಸ್ತಾಪಿಸದೆ ಮೌನವಾಗಿದ್ದಾರೆ.
ಮುಖ್ಯ ಮಂತ್ರಿಯವರ ನಡುವಳಿಕೆಯನ್ನು ಖಂಡಿಸಿ ಸ್ವಯಂ ಪ್ರೇರಿತ ಬಂದ್‍ಗೆ ಕರೆ ನೀಡಲಾಗಿದೆ. ಇದನ್ನು ಬೆಂಬಲಿಸಿ ಜಿಲ್ಲೆಯಲ್ಲಿಯೂ ಸ್ವಯಂ ಪ್ರೇರಿತವಾಗಿ ಬಂದ್ ನಡೆಸಲು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಜಿಲ್ಲಾ ಬಿ.ಜೆ.ಪಿ ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಜಿ.ಪಂ ಸದಸ್ಯ ಸಿ.ಕೆ. ಬೋಪಣ್ಣ ಉಪಸ್ಥಿತರಿದ್ದರು.