ಮಡಿಕೇರಿ, ಮೇ 25: ಯುಜಿಡಿ ಕಾಮಗಾರಿಯಿಂದ ಹದಗೆಟ್ಟ ರಸ್ತೆಯನ್ನು ಕೂಡಲೇ ದುರಸ್ತಿ ಮಾಡುವಂತೆ ಆಗ್ರಹಿಸಿ ದೇಶಪ್ರೇಮಿ ಯುವಕ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ ಗುರುವಾರ ಗುಂಡಿ ಬಿದ್ದಿದ್ದ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಯುಜಿಡಿ ಕಾಮಗಾರಿಗಳಿಂದ ನಗರದ ಕಾನ್ವೆಂಟ್ ಜಂಕ್ಷನ್ ರಸ್ತೆ ಕಿತ್ತುಹೋಗಿದ್ದು, ಸಂಚಾರ, ನಡೆದಾಡಲು ಕಷ್ಟವಾಗಿದೆ ಎಂದು ಆರೋಪಿಸಿದ ಅರುಣ್, ಕೂಡಲೇ ರಸ್ತೆಯನ್ನು ದುರಸ್ತಿಗೊಳಿಸಬೇಕು, ಇಲ್ಲದಿದ್ದಲ್ಲಿ ಗುಂಡಿಬಿದ್ದಿರುವ ರಸ್ತೆಯ ಮಧ್ಯೆ ಮಲಗಿ ದಿನವಿಡೀ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದರು.
ಪ್ರತಿಭಟನೆ ಆರಂಭಿಸುತ್ತಿದ್ದಾಗಲೇ ಎಚ್ಚೆತ್ತುಕೊಂಡ ನಗರಸಭೆ, ಕೂಡಲೇ ಜಲ್ಲಿ ಹಾಕಿ ರಸ್ತೆಯನ್ನು ದುರಸ್ತಿಪಡಿಸಲು ಮುಂದಾಯಿತು. ಟ್ರ್ಯಾಕ್ಟರ್‍ನಲ್ಲಿ ಜಲ್ಲಿ ತಂದು ಯುಜಿಡಿ ಕಾಮಗಾರಿಗಳಿಂದ ಆಗಿರುವ ರಸ್ತೆಯಲ್ಲಿನ ಚರಂಡಿಗಳಿಗೆ ಸುರಿದು ಗುಂಡಿ ಮುಚ್ಚುವ ಕಾರ್ಯವನ್ನು ಮಾಡಿದರು. ಅಲ್ಲದೇ ಸ್ಥಳಕ್ಕೆ ಆಗಮಿಸಿದ ನಗರಸಭೆ ಇಂಜಿನಿಯರ್ ಜೀವನ್, ಇಂದು ಜಲ್ಲಿ ಹಾಕಿ ರಸ್ತೆಯನ್ನು ತಾತ್ಕಾಲಿಕವಾಗಿ ಸರಿಪಡಿಸಲಾಗುವದು, ವಾರದೊಳಗೆ ರಸ್ತೆಯನ್ನು ಸಂಪೂರ್ಣವಾಗಿ ದುರಸ್ತಿ ಮಾಡುವದಾಗಿ ಭರವಸೆ ನೀಡಿದರು. ಆದರೆ ರಾತ್ರಿ ಸುರಿದ ಮಳೆಗೆ ಜಲ್ಲಿಕಲ್ಲು ರಸ್ತೆಯಲ್ಲಿ ಕೊಚ್ಚಿ ಹೋಗಿತ್ತು.