ವೀರಾಜಪೇಟೆ ಮೇ 25: ವೀರಾಜಪೇಟೆ ಬಳಿಯ ವಿ.ಬಾಡಗ ಗ್ರಾಮದ ನವೀನ್ ಎಂಬವರಿಗೆ ಸೇರಿದ ಗೋಡೌನ್ನಿಂದ ಸುಮಾರು ರೂ 15000 ಮೌಲ್ಯದ ಕರಿಮೆಣಸು ಕಳವು ಮಾಡಿದ ವೀರಾಜಪೇಟೆಯ ಶರತ್, ಕಡಂಗ ಗ್ರಾಮದ ಸತೀಶ್ ಹಾಗೂ ವಿನೋದ್ ಎಂಬ ಮೂವರನ್ನು ಗ್ರಾಮಾಂತರ ಪೊಲೀಸರು ಕರಿಮೆಣಸು ಸಮೇತ ಬಂಧಿಸಿ ಇಲ್ಲಿನ ಪ್ರಿನ್ಸಿಪಲ್ ಮುನ್ಸಿಫ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಮೇರೆ ಮೂವರನ್ನು 15 ದಿನಗಳವರೆಗೆ ನ್ಯಾಯಾಂಗ ಬಂಧನದಲ್ಲಿರಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ಎರಡು ದಿನದ ಹಿಂದೆ ರಾತ್ರಿ ಗೋಡೌನ್ನಿಂದ ಕರಿಮೆಣಸನ್ನು ಕಳವು ಮಾಡಿ ಹೊತ್ತೊಯ್ಯುತ್ತಿದ್ದಾಗ ಮಾಜಿ ಸೈನಿಕ ಅಶೋಕ್ ಎಂಬವರು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸಂಶಯದ ಮೇರೆ ಮೂವರನ್ನು ವಿಚಾರಣೆಗೊಳಪಡಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದು ತಕ್ಷಣ ಕರಿಮೆಣಸನ್ನು ವಶಪಡಿಸಿಕೊಳ್ಳಲಾಯಿತು. ಕರಿಮೆಣಸನ್ನು ಈ ಮೂವರು ಸೇರಿ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದರೆಂದು ಗ್ರಾಮಾಂತರ ಪೊಲೀಸ್ ಸಬ್ಇನ್ಸ್ಪೆಕ್ಟರ್ ದಶರಥ್ ತಿಳಿಸಿದ್ದಾರೆ.
ಗ್ರಾಮಾಂತರ ಪೊಲೀಸರು ಈ ಮೂವರ ವಿರುದ್ಧ ಕಳವು ಪ್ರಕರಣ ದಾಖಲಿಸಿದ್ದಾರೆ.