ಮಡಿಕೇರಿ, ಮೇ 25: ಕಳೆದ ರಾತ್ರಿ ಸುರಿದ ಭಾರೀ ಮಳೆ, ಗುಡುಗು ಜನತೆಯಲ್ಲಿ ಬೆಚ್ಚಿ ಬೀಳಿಸಿದ್ದಲ್ಲದೆ, ಅಲ್ಲಲ್ಲಿ ಬಹಳಷ್ಟು ಹಾನಿಯನ್ನು ಉಂಟು ಮಾಡಿದೆ. ಇಂದು ಬೆಳಗ್ಗಿನ ಜಾವ 2.30 ರಿಂದ 5 ಗಂಟೆವರೆಗೆ ಭಾರೀ ಮಿಂಚು - ಗುಡುಗು ಸಹಿತ ಮಡಿಕೇರಿ ಮೊದಲಾದೆಡೆ ಮಳೆಯಾಗಿದೆ. ನಗರದ ನಿವಾಸಿಗಳು ಮಿಂಚು - ಗುಡುಗಿನ ರಭಸಕ್ಕೆ ನಿದ್ದೆಗೆಟ್ಟು ಗಾಬರಿಯಾದ ಕುರಿತು ಮಾಹಿತಿ ಲಭ್ಯವಾಗಿದೆ. ಸುಧೀರ್ಘವಾಗಿ ಸಿಡಿಲಿನ ಆರ್ಭಟ ಕೇಳಿ ಅನೇಕರು ಭಯಭೀತರಾದ ಪ್ರಸಂಗವೂ ಕೇಳಿ ಬಂದಿದೆ.ಮೂರ್ನಾಡುವಿನಲ್ಲಿ 20 ವಿದ್ಯುತ್ ಕಂಬಗಳು ಧರೆಗುರುಳಿವೆ. ನಾಪೋಕ್ಲುವಿನಲ್ಲಿ 7 ವಿದ್ಯುತ್ ಕಂಬಗಳು ಮುರಿಯಲ್ಲಟ್ಟಿವೆ. ಮೂರ್ನಾಡು - ವೀರಾಜಪೇಟೆ ವಿದ್ಯುತ್ ಸಂಪರ್ಕ ಲೈನ್ ಮೇಲೂ ಮರವೊಂದು ಬಿದ್ದಿದ್ದು, ತೆರವುಗೊಳಿಸಲಾಗಿದೆ. ಉದಯಗಿರಿಯಲ್ಲೂ ಒಂದು ಮರ ಬಿದ್ದಿದೆ. ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಮಂಗಳಾ ದೇವಿನಗರ, ಕೆಎಸ್‍ಆರ್‍ಟಿಸಿ ಡಿಪೋ, ದೇಚೂರು, ಮಕ್ಕಂದೂರುವಿನಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಾನಿಗೊಂಡಿದೆ. ವಿದ್ಯುತ್ ಇಲಾಖೆಯಿಂದ ದುರಸ್ತಿ ಹಾಗೂ ಕಂಬಗಳ ತೆರವು ಕಾರ್ಯ ಕೈಗೊಳ್ಳಲಾಗಿದೆ.

ಸುಂಟಿಕೊಪ್ಪ : ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಜನತೆಯನ್ನು ಬೆಚ್ಚಿ ಬೀಳಿಸಿದ ಭೀಕರ ಗುಡುಗು ಸಿಡಿಲು ಗಾಳಿ ಮಳೆಗೆ ನಿದ್ರೆಯಿಲ್ಲದೆ ನಲುಗಿ ಹೋದರು.

ಹಿದೆಂದೂ ಕಾಣದ ಭಾರೀ ಗುಡುಗು ಸಿಡಿಲಿನ ಆರ್ಭಟ ಬಿರುಗಾಳಿ ಮಳೆಯಿಂದ ರಾತ್ರಿ ಮನೆಯಲ್ಲಿ ಮಲಗಿದ್ದ ಜನರು ಆತಂಕಕ್ಕೀಡಾಗಿದ್ದು, ನಿದ್ರೆ ಬಿಟ್ಟು ದೇವರುಗಳನ್ನು ಪ್ರಾರ್ಥಿಸುವಂತೆ ಮಾಡಿತು.

(ಮೊದಲ ಪುಟದಿಂದ) ವಿದ್ಯುತ್ ಕಂಬ, ತಂತಿ ಮರಗಳು ಧರೆಗುರುಳಿದ್ದು, ಹಲವು ಮನೆಯ, ಕಚೇರಿಯ ಮೇಲ್ಛಾವಣಿಗಳು ಹಾಗೂ ಮನೆಯ ಗೃಹ ಉಪಯೋಗಿ ವಸ್ತುಗಳು ನಾಶಗೊಂಡಿದೆ. ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಹಲವು ಕಡೆಗಳಲ್ಲಿ ರಸ್ತೆಗೆ ಮರಗಳು ಉರುಳಿ ಬಿದ್ದ ಹಿನ್ನೆಲೆ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಕೂಡಿಗೆ : ಕೂಡಿಗೆ, ಹೆಬ್ಬಾಲೆ, ಶಿರಂಗಾಲ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಭಾರೀ ಮಳೆ ಸುರಿದಿದೆ. ಗಾಳಿ, ಗುಡುಗು, ಸಿಡಿಲು ಸಹಿತ ಸುರಿದ 3 ಇಂಚಿಗೂ ಅಧಿಕ ಮಳೆಯ ಪರಿಣಾಮ ಕೂಡು ಮಂಗಳೂರು ಗ್ರಾಮ ಪಂಚಾಯ್ತಿ ಸದಸ್ಯ ಮಹೇಶ್ ಕಾಳಪ್ಪ ಅವರಿಗೆ ಸೇರಿದ ಕಾರಿನ ಮೇಲೆ ಮರವೊಂದು ಬಿದ್ದಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. ಅಲ್ಲದೆ, ಈ ಪ್ರದೇಶದ ಅನೇಕ ರೈತರ ಫಲಭರಿತ ಬಾಳೆ, ಅಡಿಕೆ, ತೆಂಗಿನ ಮರಗಳು ಗಾಳಿಯ ರಭಸಕ್ಕೆ ಮುರಿದು ಬಿದ್ದಿವೆ. ಹಲವು ಮನೆಯ ಸಿಮೆಂಟ್ ಶೀಟ್‍ಗಳು ಹಾರಿ ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಸೋಮವಾರಪೇಟೆ : ಸೋಮವಾರಪೇಟೆ ವಿಭಾಗಕ್ಕೆ ನಿನ್ನೆ ರಾತ್ರಿ ಗುಡುಗು ಸಿಡಿಲಿನೊಂದಿಗೆ ದಿಢೀರ್ ಮಳೆ ಸುರಿಯಿತು.

ಗಾಳಿ ಮಳೆಗೆ ಹಲವೆಡೆ ರಸ್ತೆಯ ಮೇಲೆ ಮರಗಳು ಉರುಳಿದ್ದು ಸಾರ್ವಜನಿಕರು ಪರದಾಡಿದರು. ಪಟ್ಟಣಕ್ಕೆ ಹೊಂದಿಕೊಂಡಂತಿರುವ ಆರ್‍ಎಂಸಿಯ ಭದ್ರತಾ ಕೊಠಡಿಗೆ ಸಿಡಿಲು ಬಡಿದು ಕೊಠಡಿಯ ವಿದ್ಯುತ್ ಪರಿಕರಗಳು ಸುಟ್ಟು ಹೋಗಿವೆ. ಕಾವಲುಗಾರ ರಜೆಯಲ್ಲಿ ದ್ದುದರಿಂದ ಯಾವದೇ ಹಾನಿಯಾಗಿಲ್ಲ.

ತಾಲೂಕಿನ ಕೊಡ್ಲಿಪೇಟೆ ಹೋಬಳಿಗೆ 39 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ. ಶನಿವಾರಸಂತೆಗೆ 34.6, ಸುಂಟಿಕೊಪ್ಪಕ್ಕೆ 30.5, ಶಾಂತಳ್ಳಿಗೆ 26, ಕುಶಾಲನಗರಕ್ಕೆ 19.8 ಹಾಗೂ ಸೋಮವಾರಪೇಟೆಗೆ 17.6ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.

ಮೂರ್ನಾಡು: ನಿನ್ನೆ ರಾತ್ರಿ ಸುರಿದ ಭಾರೀ ಗಾಳಿ - ಮಳೆಗೆ ಮೂರ್ನಾಡುವಿನ ಪಾಂಡಾಣೆ ಮೈದಾನದ ಬಳಿಯ ಬಸ್ ತಂಗುದಾಣದ ಶೀಟುಗಳು ಹಾರಿಹೋಗಿವೆ. ಮೂರ್ನಾಡು - ಬೇತ್ರಿ ರಸ್ತೆಯ ಬದಿಯಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ಚರಂಡಿಗೆ ಇಳಿದಿದ್ದು, ಯಾವದೇ ಅಪಾಯ ಸಂಭವಿಸಿಲ್ಲ.

ಚಿತ್ರ - ವರದಿ : ವಿಜಯ್, ರಾಜು ರೈ, ಕೆ.ಕೆ.ಎನ್. ಶೆಟ್ಟಿ,

ಕಿಗ್ಗಾಲು ಗಿರೀಶ್