ಮಡಿಕೇರಿ, ಮೇ 25: ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ಕ್ಷೇತ್ರದ ಅಭಿವೃದ್ಧಿ ಹಾಗೂ ದೋಷ ಪರಿಹಾರ ಸಂಬಂಧ ಐದು ದಿನಗಳಿಂದ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆ ಫಲ ವಿಮರ್ಶೆಗೆ ಇಂದು ತೆರೆ ಎಳೆಯಲಾಯಿತು. ನೀಲೇಶ್ವರ ಪದ್ಮನಾಭ ತಂತ್ರಿಗಳು ಹಾಗೂ ದೈವಜ್ಞರ ತೀರ್ಮಾನದಂತೆ, ಪ್ರಶ್ನೆಯಲ್ಲಿ ಗೋಚರಿಸಿರುವ ಎಲ್ಲಾ ದೋಷಗಳ ಸಂಬಂಧ ಜೂನ್ 18 ಹಾಗೂ 19 ರಂದು ಸ್ಪುಟ ಚಿಂತನೆಯೊಂದಿಗೆ ಪರಿಹಾರ ಸೂಚಿಸಲು ನಿರ್ಧರಿಸಲಾಯಿತು.
ಸೋಮವಾರದಿಂದ ಇಂದಿನ ತನಕ ಜರುಗಿದ ಸ್ವರ್ಣ ಪ್ರಶ್ನೆಯ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ದೈವಜ್ಞರಾದ ನಾರಾಯಣ ಪುದುವಾಳ್ ಹಾಗೂ ಕ್ಷೇತ್ರದ ನೀಲೇಶ್ವರ ಪದ್ಮನಾಭ ತಂತ್ರಿಗಳು ಜಂಟಿಯಾಗಿ ಮುಂದಿನ ದಿನಾಂಕ ಪ್ರಕಟಿಸಿದರು.ಕೊಡಗಿನ ಕುಲಮಾತೆ ಕಾವೇರಿಯನ್ನು ಭಕ್ತಿಯಿಂದ ಆರಾಧಿಸಿಕೊಂಡು ಬರುವ ಜನರಿಗೆ ಗುರು ಅಗಸ್ತ್ಯರ ಸಹಿತ ಸಂಪೂರ್ಣ ದೈವಾನುಗ್ರಹ ಇದ್ದು, ಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳಿಗೆ ಕಾಲ ಕಾಲಕ್ಕೆ ಸೂಕ್ತ ನಿಯಮಗಳನ್ನು ಜಾರಿಗೊಳಿಸಬೇಕಿದೆ ಎಂದು ಆ ಮುನ್ನ ನಡೆದ ಪ್ರಶ್ನೆ ವಿಮರ್ಶೆಯಲ್ಲಿ ಲಕ್ಷಣ ಗೋಚರ ವಾಯಿತು. ಬದಲಾಗಿ ಭಕ್ತಿ, ಭಯವಿಲ್ಲದೆ ಮೋಜಿಗಾಗಿ ಬರುವಂತಹ ಪ್ರವಾಸಿಗರಿಗೆ ಕೆಲವು ನಿರ್ಬಂಧಗಳನ್ನು ವಿಧಿಸುವ ಮೂಲಕ ಪ್ರಶಾಂತ ವಾತಾವರಣದೊಂದಿಗೆ ಪಾವಿತ್ರ್ಯ ಕಾಪಾಡಲು ಗಮನ ಹರಿಸಬೇಕೆಂಬ ಅಂಶ ಕಂಡು ಬಂತು.
ತಲಕಾವೇರಿ ಕ್ಷೇತ್ರವು ಉತ್ತರದಿಂದ ದಕ್ಷಿಣದತ್ತ ಇಳಿಮುಖ ವಾಗಿದ್ದು, ವಾಸ್ತು ದೋಷ ಇತ್ಯಾದಿ ಗೋಚರವಿಲ್ಲದಿದ್ದರೂ, ಬ್ರಹ್ಮಗಿರಿಯ ಪಾವಿತ್ರ್ಯ ಕಂಡುಕೊಳ್ಳುವದು, ದೇವರಿಗೆ ಕಾಲ ಕಾಲಕ್ಕೆ ಸರಿಯಾಗಿ ಪೂಜೆ, ನೈವೇದ್ಯ,
(ಮೊದಲ ಪುಟದಿಂದ) ದೀಪೋಜ್ವಲನಕ್ಕೆ ಮಿಶ್ರಣವಿಲ್ಲದ ಎಳ್ಳೆಣ್ಣೆ, ಪರಿಶುದ್ಧ ಕುಂಕುಮ ಇತ್ಯಾದಿ ಒದಗಿಸುವಂತಾದರೆ ದೋಷಗಳಿಗೆ ಅವಕಾಶವಿರದೆಂದು ಲಕ್ಷಣ ಪ್ರಾಪ್ತವಾಯಿತು.
ತಲಕಾವೇರಿ ಬ್ರಹ್ಮಕುಂಡಿಕೆಯೊಂದಿಗೆ ಜೀವನದಿ ಉಳಿವಿಗಾಗಿ ಯೋಗ್ಯ ಮರ ಗಿಡಗಳನ್ನು ಬ್ರಹ್ಮಗಿರಿಯಲ್ಲಿ ಬೆಳೆಸಲು ಚಿಂತನೆ ಹರಿಸಲಾಯಿತು. ಕನ್ನಿಕೆ ಹೊಳೆಯ ಮೂಲವನ್ನು ಕೂಡ ಕ್ಷೇತ್ರದ ಅಭಿವೃದ್ಧಿಯೊಡನೆ ಪುನರುಜ್ಜಿವನ ಗೊಳಿಸಲು ಪ್ರಶ್ನೆ ಫಲ ಗೋಚರವಾಯಿತು. ಕ್ಷೇತ್ರದ ದೋಷಗಳು ಪರಿಹಾರ ವಾದರೆ ಅಧಿಕ ಸಂಖ್ಯೆ ಭಕ್ತರ ಆಗಮನವಾಗುವ ಶುಭ ಫಲ ಕಂಡು ಬಂತು.
ಅನ್ನದಾನ ಜಿಜ್ಞಾಸೆ : ಅನೇಕ ವರ್ಷಗಳಿಂದ ತುಲಾ ಮಾಸದಲ್ಲಿ ಕೊಡಗು ಏಕೀಕರಣ ರಂಗದಿಂದ ಅನ್ನದಾನ ನಡೆಸಿಕೊಂಡು ಬರುತ್ತಿದ್ದು, ಅದನ್ನು ವರ್ಷಂಪೂರ್ತಿ ಮುಂದುವರಿಸುವ ಬಗ್ಗೆ ಆಶಯ ವ್ಯಕ್ತಗೊಂಡಿತು. ಹಣ ಗಳಿಕೆಯ ಉದ್ದೇಶ ಹೊರತು ನಿಯಮಾನುಸಾರ ಕ್ಷೇತ್ರಗಳಲ್ಲಿ ಅನ್ನದಾನ ನಡೆಸುವದು ಒಳಿತು ಎಂಬ ಅಂಶವನ್ನು ದೈವಜ್ಞರು ಉಲ್ಲೇಖಿಸಿದರು. ಹಣ ಸಂಗ್ರಹದ ವಿಷಯದಲ್ಲಿ ಹುಟ್ಟಿಕೊಂಡಿರುವ ಸಂಶಯದಿಂದ ಪರಸ್ಪರ ಮನಸ್ತಾಪಕ್ಕೆ ಕಾರಣವಾಗಿದೆ ಎನ್ನುವದು ಈ ಸಂದರ್ಭ ಪ್ರಶ್ನೆಯಲ್ಲಿ ಗೋಚರಿಸಿತು.
ಸಾನ್ನಿಧ್ಯ ಕೋಪ : ಇಂತಹ ಮನಕ್ಲೇಷಗಳಿಗೆ ಸಾನಿಧ್ಯ ದೈವಗಳ ಕೋಪದೊಂದಿಗೆ ಪರಸ್ಪರ ನಂಬಿಕೆ, ಒಗ್ಗಟ್ಟು ಇಲ್ಲದಿರುವದು ಕಾರಣವಾಗಿದ್ದು, ಭವಿಷ್ಯದಲ್ಲಿ ಕೈಗೊಳ್ಳಲಿರುವ ದೋಷ ಪರಿಹಾರದಿಂದ ಒಳ್ಳೆಯ ಕಾರ್ಯಗಳಿಗೆ ಆಕ್ಷೇಪಗಳಿದ್ದರೂ ಅವು ಮುಂದುವರಿಯಲಿವೆ ಎಂಬ ಆಶಯ ವ್ಯಕ್ತವಾಯಿತು.
ಕೊಡವ - ಅಮ್ಮಕೊಡವರಿಗೆ ಋಷಿ ಶಾಪ - ದೇವ ಕೋಪ ವಿಮೋಚನೆಯ ಕಾರ್ಯದಿಂದ ಶೇ. 33 ಫಲವಿದ್ದರೂ ಎಲ್ಲವೂ ಬಗೆಹರಿದಿಲ್ಲವೆಂದು ಕಾಣಬರುವದರೊಂದಿಗೆ ಒಂದೊಮ್ಮೆ ಕೊಡಗು ಸೀಮೆಗೆ ಕಾಳೇಘಾಟ್ ತಂತ್ರಿಗಳ ಸಂಬಂಧವಿದ್ದದ್ದು ಪ್ರಸ್ತಾಪವಾಯಿತು.
ಒಟ್ಟಿನಲ್ಲಿ ತಲಕಾವೇರಿ ಕ್ಷೇತ್ರದ ಸಮಗ್ರ ಚಿಂತನೆಯೊಂದಿಗೆ ಭವಿಷ್ಯದಲ್ಲಿ ದೋಷ ಪರಿಹಾರ ಕಂಡುಕೊಂಡು, ಆ ಬಳಿಕ ಪ್ರತ್ಯೇಕವಾಗಿ ಭಾಗಮಂಡಲ ಕ್ಷೇತ್ರದಲ್ಲಿ ಪ್ರಶ್ನೆ ಫಲ ನೋಡಿ ನಿರ್ಧಾರಗಳನ್ನು ಕೈಗೊಳ್ಳುವ ಆಶಯವನ್ನು ಇಂದು ದೈವಜ್ಞರು ಮತ್ತು ಕ್ಷೇತ್ರ ತಂತ್ರಿಗಳು ಪ್ರಕಟಿಸಿದರು.
ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಐದು ದಿನಗಳಿಂದ ಕ್ಷೇತ್ರ ಅಭಿವೃದ್ಧಿ ಸಂಬಂಧ ಅಷ್ಟಮಂಗಲ ಪ್ರಶ್ನೆಯಲ್ಲಿ ಮಾರ್ಗದರ್ಶನ ನೀಡಿದ ತಂತ್ರಿಗಳಿಗೆ, ದೈವಜ್ಞರಿಗೆ ಭಕ್ತ ಸಮೂಹಕ್ಕೆ ಅರ್ಚಕ ಸಿಬ್ಬಂದಿಗೆ, ಅಧಿಕಾರಿ ವರ್ಗಕ್ಕೆ ಅಭಿನಂದಿಸಿದರು.