ಸೋಮವಾರಪೇಟೆ, ಮೇ 25: ಸೋಮವಾರಪೇಟೆ-ಶಾಂತಳ್ಳಿ ಮುಖ್ಯರಸ್ತೆಯಲ್ಲಿ ಮಳೆ ಬಂದರೆ ವಾಹನ-ಪಾದಚಾರಿಗಳ ಸಂಚಾರ ದುಸ್ತರವಾಗುತ್ತಿದೆ. ಲೋಕೋಪಯೋಗಿ ಇಲಾಖೆಗೆ ಒಳಪಡುವ ಈ ರಸ್ತೆಯ ಆಲೇಕಟ್ಟೆಯಲ್ಲಿ ಮಳೆ ನೀರು ನಿಲುಗಡೆಯಾಗುತ್ತಿದ್ದು, ಜನಸಂಚಾರಕ್ಕೆ ತೀವ್ರ ತೊಡಕಾಗುತ್ತಿದೆ.

ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಪ್ರದೇಶದಲ್ಲಿ ಸೂಕ್ತ ಚರಂಡಿ ನಿರ್ಮಿಸಿ ಮಳೆ ನೀರಿನ ಸರಾಗ ಹರಿವಿಗೆ ಅನುವು ಮಾಡಿಕೊಡುವಲ್ಲಿ ಲೋಕೋಪಯೋಗಿ ಇಲಾಖೆಯೊಂದಿಗೆ ಗ್ರಾಮ ಪಂಚಾಯಿತಿಯೂ ನಿರ್ಲಕ್ಷ್ಯ ವಹಿಸಿದೆ.

ಆಲೇಕಟ್ಟೆ ರಸ್ತೆಯ ಪದ್ಮಕ್ಯಾಂಟೀನ್ ಬಳಿಯಲ್ಲಿರುವ ಹಳೆ ಬಾವಿ ಮುಂಭಾಗ ಮಳೆ ನೀರಿನೊಂದಿಗೆ ಭಾರೀ ಪ್ರಮಾಣದ ಕೊಳಚೆ ನೀರು ಶೇಖರಣೆಗೊಳ್ಳುತ್ತಿದ್ದು, ವಾಹನ ಸವಾರರು, ಪಾದಚಾರಿಗಳು, ಶಾಲಾಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಿವಾಸಿಗಳು ನಡೆದಾಡಲೂ ಸಹ ತೊಂದರೆ ಎದುರಾಗಿದೆ.

ಈ ಬಗ್ಗೆ ಲೋಕೋಪಯೋಗಿ ಇಲಾಖಾ ಅಭಿಯಂತರರು ಹಾಗೂ ಚೌಡ್ಲು ಗ್ರಾ.ಪಂ. ಆಡಳಿತ ಮಂಡಳಿ ತಕ್ಷಣ ಗಮನ ಹರಿಸಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.