ವೀರಾಜಪೇಟೆ, ಮೇ 25: ಅಂಚೆ ನೌಕರರ ಸಂಘಟನೆಯ ವಿವಿಧ ಬೇಡಿಕೆಗಳು ಹಾಗೂ ಕಮಲೇಶ್ ಚಂದ್ರ ಸಮಿತಿಯ ಏಳನೇ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಇಂದು ವೀರಾಜಪೇಟೆ ಗಡಿಯಾರ ಕಂಬದ ಬಳಿಯಿರುವ ತಾಲೂಕಿನ ಪ್ರಧಾನ ಅಂಚೆ ಕಚೇರಿಯ ಮುಂದೆ ಅಂಚೆ ಕಚೇರಿಯ ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗದೆ ಮುಷ್ಕರ ನಡೆಸಿದರು.
ಎ.ಐ.ಜಿ.ಡಿಎಸ್‍ಯು ಸಂಘಟನೆಯ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ ಈ ಹಿಂದೆ ಇದೇ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸಿದಾಗ ಬೇಡಿಕೆಗಳಿಗೆ ಕೇಂದ್ರ ಸರಕಾರ ಸ್ಪಂದಿಸದ ಕಾರಣ ಈಗ ಅಂಚೆ ನೌಕರರು ಅನಿರ್ಧಿಷ್ಟವಾಧಿಯವರೆಗೆ ಮುಷ್ಕರ ಹಮ್ಮಿಕೊಂಡಿದ್ದಾರೆ. ರಾಷ್ಟ್ರದಾದ್ಯಂತ ಒಂದು ಲಕ್ಷದ ಇಪ್ಪತ್ತೈದು ಸಾವಿರ ಅಂಚೆ ಕಚೇರಿಗಳು ಕಾರ್ಯ ಸ್ಥಗಿತಗೊಳಿಸಿವೆ. ಸರಕಾರ ಬೇಡಿಕೆಗಳಿಗೆ ಸ್ಪಂದಿಸುವ ತನಕ ಮುಷ್ಕರ ಮುಂದುವರೆಯಲಿದೆ ಎಂದರು.
ಕುಶಾಲನಗರ: 7ನೇ ವೇತನ ಆಯೋಗದ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಗ್ರಾಮೀಣ ಅಂಚೆ ನೌಕರ ಸಿಬ್ಬಂದಿಗಳು ಕುಶಾಲನಗರ ಅಂಚೆ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಕೇಂದ್ರ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು 7ನೇ ವೇತನ ಆಯೋಗದ ಕಮಲೇಶ್ಚಂದ್ರ ವರದಿಯನ್ನು ಕೂಡಲೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಕೇಂದ್ರ ಸರಕಾರದ ಪಟ್ಟಣ ವ್ಯಾಪ್ತಿಯ ನೌಕರರಿಗೆ ಸೌಲಭ್ಯ ಒದಗಿಸಿ ವರುಷಗಳೇ ಕಳೆದಿದೆ. ಆದರೆ ಇದುವರೆಗೆ ಗ್ರಾಮೀಣ ಭಾಗದವರಿಗೆ ಸೌಲಭ್ಯ ಒದಗಿಸಲು ಕೇಂದ್ರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ನೌಕರ ಸಂಘಟನೆಗಳ ಪ್ರಮುಖರಾದ ಜಿನ್ನಪ್ಪ, ಎನ್.ಆರ್.ಮುರಳೀಧರ್, ಯಶವಂತ್, ಕೆ.ಎಂ.ಸತೀಶ್, ಕೆ.ಎಸ್.ಗುರುಪಾದಸ್ವಾಮಿ, ಗಣಪತಿ, ಬಿ.ಎಸ್.ಮೀನಾಕ್ಷಿ, ಎಂ.ಡಿ.ಕೃಷ್ಣಯ್ಯ, ಜೀವನ್ ಮತ್ತಿತರರು ಇದ್ದರು.