ಮಡಿಕೇರಿ, ಮೇ 25: ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಕ್ರಿಕೆಟ್ ಪಂದ್ಯಾಟದ ಸೆಮಿಫೈನಲ್ ಪಂದ್ಯಾಟ ಇಂದು ಕ್ರೀಡಾಭಿಮಾನಿಗಳಿಗೆ ಕ್ರಿಕೆಟ್‍ನ ರಸದೌತಣದೊಂದಿಗೆ ಮುಕ್ತಾಯ ಗೊಂಡು ಫೈನಲ್‍ನಲ್ಲಿ ಸೆಣಸಲಿರುವ ಎರಡು ತಂಡಗಳು ನಿರ್ಧರಿಸಲ್ಪಟ್ಟವು. ಕಳೆದ ನಡುರಾತ್ರಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಗುಡುಗು ಮಿಂಚಿನ ಆರ್ಭಟದೊಂದಿಗೆ ಸುರಿದಿದ್ದ ಮಳೆ ಆಯೋಜಕರಾದ ಮಡ್ಲಂಡ ಕುಟುಂಬವನ್ನು ಆತಂಕಕ್ಕೆ ಈಡು ಮಾಡಿತ್ತಾದರೂ ಸೆಮಿಫೈನಲ್ ಪಂದ್ಯಕ್ಕೆ ತಾ. 25ರಂದು ಯಾವದೇ ಅಡಚಣೆಯಾಗಲಿಲ್ಲ. ಒಂದು ಪಂದ್ಯ ಏಕಪಕ್ಷೀಯವಾದಂತೆ ನಿರ್ಧರಿತ ವಾಯಿತಾದರೂ ಮತ್ತೊಂದು ಪಂದ್ಯ ತೀವ್ರ ರೋಮಾಂಚಕಾರಿಯಾಗಿ ನಡೆದು ಕೊನೆಯ ಎಸೆತದ ತನಕವೂ ನೆರೆದಿದ್ದವರನ್ನು ತುದಿಗಾಲಲ್ಲಿ ನಿಲ್ಲಿಸಿದ್ದು ವಿಶೇಷವಾಗಿತ್ತು.ಹಾಲಿ ಚಾಂಪಿಯನ್ ಕಳಕಂಡ ತಂಡ ಪಂದ್ಯದ ಅಂತಿಮ ಎಸೆತದಲ್ಲಿ ಜಯಗಳಿಸಿ ಕುಟ್ಟಂಡ ತಂಡದ ಪ್ರಶಸ್ತಿಯ ಕನಸು ಭಗ್ನ ಮಾಡಿದರೆ, ತಂಬುಕುತ್ತಿರ ತಂಡ ನೆರವಂಡ ತಂಡವನ್ನು ಅನಾಯಾಸವಾಗಿ ಮಣಿಸಿ ಇದೇ ಪ್ರಥಮ ಬಾರಿಗೆ ಕೌಟುಂಬಿಕ ಕ್ರಿಕೆಟ್ ಉತ್ಸವದ ಫೈನಲ್ ತಲಪಿದೆ.

ಕಳಕಂಡ ತಂಡ ಕುಟ್ಟಂಡ ತಂಡವನ್ನು 5 ವಿಕೆಟ್‍ಗಳಿಂದ ಹಾಗೂ ತಂಬುಕುತ್ತಿರ ತಂಡ ನೆರವಂಡ ತಂಡವನ್ನು 25 ರನ್‍ಗಳಿಂದ

(ಮೊದಲ ಪುಟದಿಂದ) ಮಣಿಸಿ ಅಂತಿಮ ಘಟ್ಟ ಪ್ರವೇಶಿಸಿದ್ದು, ತಾ. 27ರಂದು ನಡೆಯಲಿರುವ ಪಂದ್ಯದಲ್ಲಿ ಮಡ್ಲಂಡ ಕಪ್ - 2018ಕ್ಕೆ ಸೆಣಸಲಿವೆ.

ಇಂದು ಪ್ರಥಮ ಸೆಮಿಫೈನಲ್ ಪಂದ್ಯ ತಂಬುಕುತ್ತಿರ ಹಾಗೂ ನೆರವಂಡ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟ್ ಮಾಡಿದ ತಂಬುಕುತ್ತಿರ ಆಟಗಾರರು ನಿಗದಿತ 10 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ನೆರವಂಡ ತಂಡ 8 ವಿಕೆಟ್ ನಷ್ಟಕ್ಕೆ 40 ರನ್ ಮಾತ್ರ ಗಳಿಸಿ ಸೋಲು ಕಂಡಿತು. ತಂಬುಕುತ್ತಿರ ಮಿಲನ್ 14 ಎಸೆತದಲ್ಲಿ 25, ಸುಖೇಶ್ 12 ಎಸೆತದಲ್ಲಿ 17 ಹಾಗೂ ಭೀಮಯ್ಯ 16 ಎಸೆತದಲ್ಲಿ 11 ರನ್ ಗಳಿಸಿದರು. ನೆರವಂಡ ಅರುಣ್ 4 ವಿಕೆಟ್ ಪಡೆದು ಗಮನ ಸೆಳೆದರು.

ಹೊಯ್ದಾಡಿದ ವಿಜಯಲಕ್ಷ್ಮಿ

ಎರಡನೇ ಪಂದ್ಯ ಕಳೆದ ಬಾರಿಯ ಅಳಮೇಂಗಡ ಕಪ್‍ನ ಚಾಂಪಿಯನ್ ಕಳಕಂಡ ಹಾಗೂ ಕುಟ್ಟಂಡ ತಂಡಗಳ ನಡುವೆ ನಡೆಯಿತು. ಆರಂಭದಲ್ಲಿ ಬ್ಯಾಟ್ ಮಾಡಿದ ಕುಟ್ಟಂಡ ತಂಡ ಕೆಸರುಗದ್ದೆ ಕ್ರೀಡಾಕೂಟದ ಖ್ಯಾತ ಓಟಗಾರರೂ ಆಗಿರುವ ಕುಟ್ಟಂಡ ಕುಟ್ಟಪ್ಪ ಅವರು 29 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 4 ಬೌಂಡರಿಯೊಂದಿಗೆ ಸಿಡಿಸಿದ 45 ರನ್ ಹಾಗೂ ಸೋಮಣ್ಣ ಗಳಿಸಿದ 22 ರನ್‍ನಿಂದ 4 ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಹಾಲಿ ಚಾಂಪಿಯನ್ ಕಳಕಂಡ ತಂಡ ಪ್ರಥಮ ಎಸೆತದಲ್ಲೇ ವಿಕೆಟ್ ಕಳೆದುಕೊಂಡು ಆಮೆನಡಿಗೆಯಲ್ಲಿ ಸಾಗಿತು.

ಆದರೆ ತಂಡದ ಆಟಗಾರ ಭರತ್ 8 ಎಸೆತದಲ್ಲಿ 18 ಹಾಗೂ ಮ್ಯಾಚ್ ಗೆಲ್ಲಿಸಿಕೊಟ್ಟ ರೂವಾರಿ ನಿಕಿಲ್ 24 ಎಸೆತದಲ್ಲಿ ನಾಲ್ಕು ಸಿಕ್ಸರ್ ಹಾಗೂ 1 ಬೌಂಡರಿಯೊಂದಿಗೆ ಬಾರಿಸಿದ 40 ರನ್ ತಂಡದ ವಿಜಯಕ್ಕೆ ಕಾರಣವಾಯಿತು. ಕೊನೆಯ ಓವರ್‍ನಲ್ಲಿ 15 ರನ್ ಅಗತ್ಯವಿದ್ದು, ಅಂತಿಮ ಎರಡು ಎಸೆತದಲ್ಲಿ 7 ರನ್ ಹಾಗೂ ಒಂದು ಎಸೆತದಲ್ಲಿ ಎರಡು ರನ್‍ಗಳ ಅಗತ್ಯವಿದ್ದ ಸನ್ನಿವೇಶದಿಂದಾಗಿ ಪಂದ್ಯ ರೋಮಾಂಚನಕಾರಿಯಾಗಿತ್ತು. ಅಂತಿಮವಾಗಿ ವಿಜಯಲಕ್ಷ್ಮಿಕಳಕಂಡ ಪರ ವಾಲಿದಾಗ ತಂಡದ ಬೆಂಬಲಿಗರ ಸಂತಸಕ್ಕೆ ಪಾರವಿರಲಿಲ್ಲ.

ತೀರ್ಪುಗಾರರಾಗಿ ಪೊರ್‍ಕೋಂಡ ಸುನಿಲ್, ಕುಂಡ್ರಂಡ ಬೋಪಣ್ಣ, ಪಾಸುರ ಕಿಶೋರ್ ಪೊನ್ನಪ್ಪ ಹಾಗೂ ಬಲ್ಲಂಡ ರೇಣ ಕಾರ್ಯನಿರ್ವಹಿಸಿದರು.

ಪೊರ್‍ಕೋಂಡ ಸುನಿಲ್ ಹಾಗೂ ಚಂಡೀರ ರಚನ್ ಚಿಣ್ಣಪ್ಪ ವೀಕ್ಷಕ ವಿವರಣೆ ನೀಡಿದರು. ತಾ. 26ರಂದು (ಇಂದು) ವಿರಾಮದ ದಿನವಾಗಿದೆ.