ಬೆಂಗಳೂರು, ಮೇ 25: ವಿಶ್ವಾಸ ಮತ ಯಾಚನೆ ಪ್ರಸ್ತಾಪವನ್ನು ಉದ್ದೇಶಿಸಿ ಕರ್ನಾಟಕ ವಿಧಾನಸಭೆಯ ಕಲಾಪದಲ್ಲಿ ಮಾತನಾಡಿದ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು. ಇಂದು ಹೆಚ್. ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸಾಲಮನ್ನಾ ಘೋಷಣೆಯನ್ನು 24 ಗಂಟೆಯೊಳಗೆ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್ ಮಾಡಲಾಗುವದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.ವಿಶ್ವಾಸಮತ ಯಾಚನೆ ಪ್ರಸ್ತಾಪ ಕುರಿತು ಮಾತನಾಡಿದ ಬಿ.ಎಸ್. ಯಡಿಯೂರಪ್ಪ , ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿರುವಂತೆ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್ ಕರೆ ನೀಡಲಾಗುವದು ಎಂದು ಹೇಳಿದರು.

‘‘ಇವತ್ತು ರೈತರ ಸಂಪೂರ್ಣ ಸಾಲ ಮನ್ನಾ ಮಾಡುವದಾಗಿ ಹೇಳಿದ್ದೀರಿ. ಬಹುಮತ ಹೇಗೂ ಇಂದು ಸಾಬೀತಾಗುತ್ತಿದೆ. ಇದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಬಹುಮತ ಸಾಬೀತಾಗಿ ಇವತ್ತು ಸಾಯಂಕಾಲದೊಳಗೆ ನೀವು ಹೇಳಿದಂತೆ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಮತ್ತು 25 ಖಾಸಗಿ ಬ್ಯಾಂಕ್‍ಗಳ ಸಾಲ ಮನ್ನಾ ಮಾಡಬೇಕು,’’ ಎಂದು ಯಡಿಯೂರಪ್ಪ ಆಗ್ರಹಿಸಿದರು.

‘‘ರೈತ ಸಮುದಾಯ ಕಷ್ಟದಲ್ಲಿ ಸಿಕ್ಕಿ ನರಳುತ್ತಿದೆ. ಈ ಸಂದರ್ಭದಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡುವದಿದ್ದರೆ ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಜೊತೆಗೆ ನೀವು ನೀಡಿರುವ ಭರವಸೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಸೋಮವಾರ ಕರ್ನಾಟಕ ಬಂದ್ ಆಚರಿಸಲಿದ್ದೇವೆ. ಈ ಬಗ್ಗೆ ರಾಜ್ಯದ ಜನರಿಂದಲೂ ಒತ್ತಡ ಬರುತ್ತಿದೆ. ಬಂದ್‍ಗೆ ಬೆಂಬಲ ನೀಡುವಂತೆ ಕರ್ನಾಟಕದ ಜನತೆಯಲ್ಲಿ ಕೇಳಿಕೊಳ್ಳುತ್ತೇನೆ,’’ ಎಂದರು. ಕುಮಾರಸ್ವಾಮಿಯವರು ಸೋಮವಾರದೊಳಗೆ ರೈತರ ಸಾಲಮನ್ನಾ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವದಾಗಿ ಹೇಳಿ ಸಭಾತ್ಯಾಗ ಮಾಡಿದರು. ಅವರೊಂದಿಗೆ ಬಿಜೆಪಿಯ ಎಲ್ಲ ಶಾಸಕರು ಸಭಾತ್ಯಾಗ ಮಾಡಿ ಸದನದಿಂದ ಹೊರ ನಡೆದರು.

(ಮೊದಲ ಪುಟದಿಂದ) ಅದಕ್ಕೂ ಮುನ್ನ ಸುದೀರ್ಘ ಭಾಷಣ ಮಾಡಿದ ಯಡಿಯೂರಪ್ಪ ತಮ್ಮ ಭಾಷಣದುದ್ದಕ್ಕೂ ಹೆಚ್. ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು. ಯಡಿಯೂರಪ್ಪ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜೆಡಿಎಸ್ ಜೊತೆ ಕಾಂಗ್ರೆಸ್ ಕೈ ಜೋಡಿಸಿದೆ. ಆದರೆ, ಅಪ್ಪ, ಮಕ್ಕಳು ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡದಿದ್ದರೆ ನನ್ನ ಹೆಸರು ಯಡಿಯೂರಪ್ಪ ಅಲ್ಲ ಎಂದು ಸವಾಲು ಹಾಕಿದರು.

‘ಕುರುಡನ ಹೆಗಲ ಮೇಲೆ ಹೆಳವ ಕೂತಿದ್ದಾನೆ | ದಾರಿ ಸಾಗುವುದೆಂತೋ ನೋಡಬೇಕು' ಎಂಬ ಗೋಪಾಲ ಕೃಷ್ಣರ ಕವನವನ್ನು ಸದನದಲ್ಲಿ ವಾಚಿಸಿದ ಯಡಿಯೂರಪ್ಪ , ಕುಮಾರಸ್ವಾಮಿ ಅವರಿಗೆ ನಂಬಿದವರನ್ನು ಮುಳುಗಿಸುವ ಬುದ್ದಿಯಿದೆ. ಕುಮಾರಸ್ವಾಮಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಸಹಕಾರ ನೀಡಿದ್ದೆ, ಆದರೆ, ಅವರು ನಂಬಿಕೆಗೆ ದ್ರೋಹ ಬಗೆದರು. ಕಾಂಗ್ರೆಸ್ ಕೂಡಾ ಇದೇ ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಸೋನಿಯಾ, ರಾಹುಲ್ ಗಾಂಧಿಗೆ ಇದ್ದ ಮರ್ಯಾದೆ, ಸಿದ್ದರಾಮಯ್ಯ ಅವರಿಗೆ ಇರಲಿಲ್ಲ. ಅವರೊಂದಿಗೆ ಹೈಕಮಾಂಡ್ ನಡೆದುಕೊಂಡ ರೀತಿ ಕೂಡಾ ಸರಿಯಾಗಿರಲಿಲ್ಲ. ಮೈಸೂರಿನಲ್ಲಿ ಸೋಲಿಸುವ ಮೂಲಕ ಅವರನ್ನು ಅವಮಾನಿಸಲಾಗಿದೆ. ಡಿ.ಕೆ.ಶಿವಕುಮಾರ್ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ರೆಸಾರ್ಟ್‍ಗೆ ಕರೆದುಕೊಂಡು ಹೋಗಿ ಖಳನಾಯಕ ಪ್ರವೃತ್ತಿ ಪ್ರದರ್ಶಿಸಿದ್ದಾರೆ ಎಂದಾಗ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್ ಅವರು ‘ನನ್ನ ಪಕ್ಷ ನನಗೆ ನೀಡಿದ ಜವಾಬ್ದಾರಿಯನ್ನು ನಾನು ನಿಭಾಯಿಸಿದ್ದೇನೆ, ಖಳನಾಯಕ ಪಟ್ಟ ಹೊರಲು ತಯಾರಿಲ್ಲ' ಎಂದರು.

ಇದಕ್ಕೆ ಯಡಿಯೂರಪ್ಪ ಅವರು, ‘ಶಿವಕುಮಾರ್, ನೀವು ಕೂತ್ಕೊಳ್ಳಿ, ಆ ಮಾತನ್ನು ನಾನು ವಾಪಸ್ ಬೇಕಾದರೆ ಪಡೆಯುತ್ತೇನೆ, ನೀವು ಮುಖ್ಯಮಂತ್ರಿ ಆಗಬೇಕು ಅನ್ನೋ ಕನಸು ಇಟ್ಕೊಂಡಿರೋರು, ನಾನು ಯಾಕೆ ನಿಮ್ಮನ್ನ ವಿಲನ್ ಅನ್ಲಿ' ಎಂದರು. ಯಡಿಯೂರಪ್ಪ ಅವರ ಮಾತಿಗೆ ಸದನದಲ್ಲಿರುವವರೆಲ್ಲಾ ಜೋರಾಗಿ ನಕ್ಕರು. ಮತ್ತೆ ಮಾತು ಮುಂದುವರೆಸಿದ ಯಡಿಯೂರಪ್ಪ, ‘ಶಿವಕುಮಾರ್ ಅವರೇ ನೀವು ಅಲ್ಲಿದ್ದುಕೊಂಡು ಮುಖ್ಯಮಂತ್ರಿ ಆಗುವ ಕಸನು ಕಾಣುತ್ತಿದ್ದೀರಾ, ಅದು ಕಷ್ಟ ಬಿಡಿ' ಎಂದರು. ಬಿ.ಎಸ್.ಯಡಿಯೂರಪ್ಪ ಅವರು, ಹಲವು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಿ ಸದನ ನಗೆಗಡಲಲ್ಲಿ ತೇಲುವಂತೆ ಮಾಡಿದರು.

ಇತರ ಪಕ್ಷಗಳ ಶಾಸಕರನ್ನು ಸೆಳೆಯಲು ತಾನು ಪ್ರಯತ್ನಿಸಿದ್ದನ್ನು ಒಪ್ಪಿಕೊಂಡ ಯಡಿಯೂರಪ್ಪ ಅವರು ನಾನು ಇಲ್ಲಿರುವ ಕೆಲವರನ್ನು ಸಂಪರ್ಕಿಸಿದ್ದು, ನಿಜ. ಈ ಅಪವಿತ್ರ ಮೈತ್ರಿಯನ್ನು ತಪ್ಪಿಸಲು ನನ್ನ ಬಳಿಯೂ ಕೆಲವರು ಬಂದಿದ್ದರು ಎಂದು ಬಹಿರಂಗ ಪಡಿಸಿದರು.

ಕುಮಾರಸ್ವಾಮಿ ಊಸರವಳ್ಳಿ : ತಾವು ವಿಶ್ವಾಸಮತ ಯಾಚಿಸಿದಾಗ ಮಾಡಿದ ಭಾಷಣಕ್ಕಿಂತ ಪ್ರಖರವಾಗಿ, ಭಾವುಕರಾಗಿ ಮತ್ತು ಆಕ್ರೋಶಭರಿತರಾಗಿ ವಿರೋಧ ಪಕ್ಷದ ನಾಯಕ ಯಡಿಯೂರಪ್ಪನವರು, ವಿಶ್ವಾಸಮತ ಯಾಚನೆಗೆ ಉತ್ತರ ನೀಡುತ್ತ ಮಾತನಾಡಿದ್ದಾರೆ. ತಮ್ಮ ಭಾಷಣದಲ್ಲಿ 2006ರಲ್ಲಿ ಮಾಡಿಕೊಂಡಿದ್ದ ಮೈತ್ರಿಯಿಂದ ಹಿಡಿದು ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ಪ್ರಸ್ತಾಪಿಸಿದರು.

ಯಡಿಯೂರಪ್ಪನವರ ಮಾತಿನ ವೈಖರಿಯಿಂದಾಗಿ ರೇವಣ್ಣ ಅವರ ಜೊತೆ ಮಾತಿನ ಚಕಮಕಿಯೂ ನಡೆದವು, ಹಲವಾರು ಬಾರಿ ರಮೇಶ್ ಕುಮಾರ್ ಅವರು ಆಗಾಗ ತಮಾಷೆಯ ನಗೆಚಟಾಕಿಗಳನ್ನು ಹಾರಿಸುತ್ತ ಮತ್ತಷ್ಟು ನಗೆಯುಕ್ಕಿಸುತ್ತಿದ್ದರು. ಯಡಿಯೂರಪ್ಪ ಅವರÀ ಮಾತಿನ ಸಾರಾಂಶ ಹೀಗಿದೆ.

ಸ್ವಾಮಿ ಜೊತೆ ಕೈಜೋಡಿಸಿದ್ದು ದೊಡ್ಡ ತಪ್ಪು 2006ರಲ್ಲಿ ಕುಮಾರಸ್ವಾಮಿ ಅವರೊಂದಿಗೆ ಇಪ್ಪತ್ತು ತಿಂಗಳು ಅಧಿಕಾರ ಹಂಚಿಕೊಳ್ಳಬೇಕೆಂಬ ಒಪ್ಪಂದ ಮಾಡಿಕೊಂಡಿದ್ದು ನಾನು ಜೀವನದಲ್ಲಿ ಮಾಡಿದ ಅತಿದೊಡ್ಡ ತಪ್ಪು. ಆ ಇಪ್ಪತ್ತು ತಿಂಗಳುಗಳ ಕಾಲ ನಾನು ಅನುಭವಿಸಬಾರದ್ದನ್ನೆಲ್ಲ ಅನುಭವಿಸಿದ್ದೇನೆ. ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಒಂದು ಪ್ರಶ್ನೆಯನ್ನೂ ಕೇಳಲಿಲ್ಲ. ಇಪ್ಪತ್ತು ತಿಂಗಳುಗಳ ನಂತರ ನಾನು ಮುಖ್ಯಮಂತ್ರಿ ಆಗಿದ್ದಾಗ, ನಾನು ವೆಸ್ಟ್ ಎಂಡ್ ಹೊಟೇಲಿನಲ್ಲಿದ್ದೆ, ಆಗ ಅಪ್ಪಮಗ ಬಂದು ಹೊಸ ಷರತ್ತುಗಳನ್ನು ಹೇರಲು ಆರಂಭಿಸಿದರು. ಷರತ್ತು ಒಪ್ಪಲಿಲ್ಲವೆಂದು ಬೆಂಬಲವನ್ನೇ ಹಿಂತೆಗೆದು ಸರಕಾರ ಬೀಳಿಸಿದರು.

ಪ್ರತಿಕ್ಷಣ ನಾನು ಕಣ್ಣೀರು ಹಾಕಿದ್ದೇನೆ ಅವರೊಂದಿಗೆ ಅಂದು ಕೈಜೋಡಿಸಿದ್ದಕ್ಕೆ ಈಗ ಪಶ್ಚಾತ್ತಾಪ ಆಗುತ್ತಿದೆ, ನಾನು ಜೀವನದಲ್ಲಿ ಮಾಡಿದ ಅಕ್ಷಮ್ಯ ಅಪರಾಧ ಅದು. ಅಂದು ಅವರೊಂದಿಗೆ ಕೈಜೋಡಿಸಿದ್ದಕ್ಕಾಗಿ ನಾನು ರಾಜ್ಯದ ಜನರ ಕ್ಷಮೆ ಕೇಳುತ್ತೇನೆ ಎಂದರು.

ಕುಮಾರಸ್ವಾಮಿ ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ಹೀಗೇ ಮುಂದುವರಿಯುತ್ತಿದ್ದಂತೆ ರೇವಣ್ಣ ಅವರು ಮಧ್ಯ ಪ್ರವೇಶಿಸಿ ಯಡಿಯೂರಪ್ಪನವರ ವಿರುದ್ಧ ವಾಗ್ದಾಳಿ ಆರಂಭಿಸಿದರು. ಆಗ ಮಧ್ಯ ತಡೆದ ಕುಮಾರಸ್ವಾಮಿಯವರು, ಯಡಿಯೂರಪ್ಪನವರು ಏನು ಮಾತಾಡಬೇಕೋ ಅದನ್ನೆಲ್ಲ ಮಾತಾಡಲಿ. ಅವರ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡಲು ನನಗೆ ಸಾಮಥ್ರ್ಯವಿದೆ ಎಂದು ತಿರುಗೇಟು ನೀಡಿದರು. ಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರು ಕೂಡ, ಅನುಮತಿ ನೀಡಿದರು.

ಸದನದಿಂದ ಹೊರ ಬಂದ ಬಳಿಕ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಜೆಡಿಎಸ್ ಈ ಹಿಂದೆ ಚುನಾವಣೆ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವದಾಗಿ ಘೋಷಿಸಿತ್ತು. ಅದರಂತೆ ನಡೆದುಕೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಸೋಮವಾರÀ ಬಂದ್ ಖಚಿತ ಎಂದು ಪ್ರಕಟಿಸಿದರು.