ಕೂಡಿಗೆ, ಮೇ 23: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಡೆಂಗ್ಯೂ ಮತ್ತು ಅತಿಸಾರಭೇದಿ ನಿಯಂತ್ರಣದ ಜಾಗೃತಿ ಪಾಕ್ಷಿಕ ಪೂರ್ವ ಸಿದ್ಧತಾ ಸಭೆ ನಡೆಯಿತು.
ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ಶಿವಕುಮಾರ್ ಮಾತನಾಡಿ, ದೇಶಾದ್ಯಂತ ಮಕ್ಕಳಿಗೆ ವಾಂತಿ ಮತ್ತು ಅತಿಸಾರ ಭೇದಿ ಸಂಭವಿಸುತ್ತಿದ್ದು, ಇದಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿ ಅನೇಕ ಪರಿಹಾರೋಪಾಯ-ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ದೇಶದಲ್ಲಿ ಡೆಂಗ್ಯೂ ಸೇರಿದಂತೆ ಅತಿಸಾರ ಭೇದಿ, ಕೀಟಜನ್ಯ ರೋಗಗಳಿಂದ ದಿನಕ್ಕೆ 1300 ಮಕ್ಕಳು ಮರಣ ಹೊಂದುತ್ತಿದ್ದಾರೆ. ಇದರ ತೀವ್ರತೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದಾದ್ದರಿಂದ ಪಾಕ್ಷಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮ ತಾ. 28 ರಿಂದ ಜೂ. 6ರ ವರೆಗೆ ಸಮಾರೋಪಾದಿಯಲ್ಲಿ ಎಲ್ಲ ಕಡೆ ನಡೆಯಲಿದೆ.
ಈ ಕಾರ್ಯದಲ್ಲಿ ಗ್ರಾಮ ಪಂಚಾಯ್ತಿಗಳು ಅವುಗಳ ಅಧೀನದಲ್ಲಿ ಬರುವ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ತೊಡಗಿಕೊಂಡು ಮನೆ ಮನೆಗೆ ಹೋಗಿ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಲಹೆ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. 0 ಯಿಂದ 5ನೇ ವಯಸ್ಸಿನ ಮಕ್ಕಳು ಈ ರೋಗದ ಕೇಂದ್ರಬಿಂದುವಾಗಿದ್ದಾರೆ. ಹಾಗಾಗಿ ಕೀಟಜನ್ಯ ರೋಗಗಳನ್ನು ನಿಯಂತ್ರಣ ಮಾಡುವದು ಅನಿವಾರ್ಯವಾಗಿದೆ. ಆಶಾ ಮತ್ತು ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಓ.ಆರ್.ಎಸ್ ಮತ್ತು ಜಿಂಕ್ ಮಾತ್ರೆಗಳನ್ನು ವಿತರಿಸುತ್ತಿದ್ದಾರೆ ಎಂದರು.
ಬಾವಲಿಗಳ ಮೂಲಕ ಹರಡುವ ನಿಪಾ ವೈರಸ್(ಬಾವುಲಿ ಜ್ವರ) ಕೂಡಾ ಮಾರಣಾಂತಿಕವಾಗಿದ್ದು, ಇದರ ಲಕ್ಷಣ ಜ್ವರ, ವಾಂತಿ, ಸುಸ್ತು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಹೇಳಿದರು. ಬಾವಲಿಗಳು ತಿಂದ ಹಣ್ಣನ್ನು ತಿನ್ನಬಾರದು ಮತ್ತು ನೀರನ್ನು ಕುಡಿಯ ಬಾರÀದೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಜಗದೀಶ್, ಸುರೇಶ್‍ದೊಡ್ಡಣ್ಣ, ಜಯಲಕ್ಷ್ಮಿ, ಸುಚಿತ್ರಾ ಶಿವಣ್ಣ, ವೇದಾವತಿ, ಸಂತೋಷ್, ಸೋಮವಾರಪೇಟೆ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಗ್ರಾಮ ನೈರ್ಮಲ್ಯ ಸಮಿತಿ ಸದಸ್ಯರು, ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಇದ್ದರು.